ಕೊಪ್ಪ: ಮಲೆನಾಡಿನ ಕಾಡುಗಳಲ್ಲಿ ಬಹುತೇಕ ನೆಲೆ ಕಳೆದುಕೊಂಡು ಕಣ್ಮರೆಯಾದಂತಿದ್ದ ನಕ್ಸಲರು ಬುಧವಾರ ರಾತ್ರಿ ತಾಲ್ಲೂಕಿನ ತೆಕ್ಕೂರು ವೃತ್ತದಲ್ಲಿ ಸರ್ಕಾರದ ಜನವಿರೋಧಿ ಯೋಜನೆಗಳ ವಿರುದ್ಧ ಪ್ರಜಾ ಹೋರಾಟಕ್ಕೆ ಕರೆ ನೀಡುವ ಭಿತ್ತಿಪತ್ರ ಮತ್ತು ಬ್ಯಾನರ್ಗಳನ್ನು ಅಂಟಿಸಿದ್ದಾರೆ.
ಗುರುವಾರ ಬೆಳಿಗ್ಗೆ ನಕ್ಸಲ್ ಭಿತ್ತಿಪತ್ರಗಳನ್ನು ಕಂಡ ಸ್ಥಳೀಯರು ನೀಡಿದ ಮಾಹಿತಿಯಂತೆ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್. ಚೇತನ್, ಕೊಪ್ಪ ಡಿವೈಎಸ್‌ಪಿ ಸಚಿನ್ ಘೋರ್ಪಡೆ, ನಕ್ಸಲ್ ನಿಗ್ರಹ ಪಡೆ ಡಿವೈಎಸ್‌ಪಿ ತಾರೇಕರ್, ಶೃಂಗೇರಿ ಸರ್ಕಲ್ ಇನ್‌ಸ್ಪೆಕ್ಟರ್ ಸುಧೀರ್ ಹೆಗ್ಡೆ, ಪೊಲೀಸ್ ಹಾಗೂ ನಕ್ಸಲ್ ನಿಗ್ರಹ ಪಡೆಯ (ಎಎನ್‌ಎಫ್) ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಶೃಂಗೇರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಭಿತ್ತಿಪತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ. ನಕ್ಸಲರಿಗಾಗಿ ಇದೀಗ ತೀವ್ರ ಶೋಧ ಕಾರ್ಯಾಚರಣೆ ನಡೆಯುತ್ತಿದೆ.
ಭಿತ್ತಿಪತ್ರ ಮತ್ತು 2 ಬ್ಯಾನರ್‌ಗಳಲ್ಲಿ ಮಲೆನಾಡಿನ ರೈತರು ಮತ್ತು ಜನಸಾಮಾನ್ಯರನ್ನು ಕಂಗೆಡಿಸಿರುವ ಕಸ್ತೂರಿರಂಗನ್ ವರದಿ, ಒತ್ತುವರಿ ಸಮಸ್ಯೆ, ಹುಲಿ ಯೋಜನೆಗಳ ವಿರುದ್ಧ ಹಸಿರು, ನೀಲಿ, ಕೆಂಪು, ಕಂದು ಇತ್ಯಾದಿ ಬಣ್ಣಗಳಲ್ಲಿ ಬರೆಯಲಾಗಿದೆ. ಮಲೆನಾಡಿನಲ್ಲಿ ಮಾವೋವಾದಿ ಚಳವಳಿಯ 11ನೇ ವರ್ಷಾಚರಣೆಯನ್ನು ನೆನಪಿಸುವ ಬರಹಗಳೂ ಭಿತ್ತಿಪತ್ರದಲ್ಲಿವೆ.