ಯಾದಗಿರಿ ತಾಲ್ಲೂಕಿನ ಐತಿಹಾಸಿಕ ಮೈಲಾಪುರದ ಮೈಲಾರಲಿಂಗೇಶ್ವರ ಜಾತ್ರೆ-ಯಲ್ಲಿ ಪಲ್ಲಕ್ಕಿ ಮೇಲೆ ಹಾರಿಸಲು ಭಕ್ತರು ತಂದಿದ್ದ 835 ಕುರಿಮರಿಗಳನ್ನು ಜಿಲ್ಲಾಡಳಿತ ಬುಧವಾರ ವಶಪಡಿಸಿಕೊಂಡಿದೆ.
ಮೈಲಾಪುರದ ಸುತ್ತಲೂ 6 ಚೆಕ್‌ಪೋಸ್ಟ್‌ಗಳನ್ನು ಮಾಡಲಾಗಿದ್ದು, ಕಂದಾಯ, ಪೊಲೀಸ್, ಪಶು ಸಂಗೋಪನೆ ಇಲಾಖೆಯ ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ಜಾತ್ರೆಗೆ ಬರುವ ಭಕ್ತರನ್ನು ತಪಾಸಣೆ ಮಾಡಲಾಗುತ್ತಿದ್ದು, ಅವರು ತಮ್ಮೊಂದಿಗೆ ತಂದಿರುವ ಕುರಿಮರಿಗಳನ್ನು ವಶಕ್ಕೆ ಪಡೆಯಲಾಗುತ್ತದೆ.
ಮಲ್ಲಯ್ಯನ ಪಲ್ಲಕ್ಕಿ ಉತ್ಸವವು ಹೊನ್ನಕೆರೆಗೆ ತೆರಳುವ ಸಂದರ್ಭದಲ್ಲಿ ಭಕ್ತರು ಕುರಿಮರಿಗಳನ್ನು ಹಾರಿಸುವ ಸಂಪ್ರದಾಯ ಇಲ್ಲಿ ನಡೆದುಕೊಂಡು ಬಂದಿದೆ. ಹೀಗೆ ಮಾಡುವುದರಿಂದ ವರ್ಷ ಪೂರ್ತಿ ಕುರಿಗಳಿಗೆ ಯಾವುದೇ ರೋಗ ಬರುವುದಿಲ್ಲ ಎಂಬ ನಂಬಿಕೆಯನ್ನು ಭಕ್ತರು ಇಟ್ಟುಕೊಂಡಿದ್ದಾರೆ.
ಇಂತಹ ಆಚರಣೆಯಿಂದ ಪ್ರಾಣಿ ಹಿಂಸೆಯಾಗುತ್ತಿದೆ ಎಂಬ ದೂರುಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡ ಜಿಲ್ಲಾಡಳಿತ, ಕುರಿ ಹಾರಿಸುವುದನ್ನು ಸಂಪೂರ್ಣ ನಿಷೇಧಿಸುತ್ತ ಬಂದಿದೆ. ಆದರೂ ಭಕ್ತಾದಿಗಳು ಕುರಿಮರಿಗಳನ್ನು ತೆಗೆದುಕೊಂಡು ಬರುವುದು ನಿಂತಿಲ್ಲ. ಈ ಕಾರಣಕ್ಕೆ ಭಕ್ತರು ತರುವ ಕುರಿಮರಿಗಳನ್ನು ಕಾಣಿಕೆ ರೂಪದಲ್ಲಿ ಪಡೆಯಲು ವ್ಯವಸ್ಥೆ ಮಾಡಲಾಗಿದೆ.
ಪಶುಸಂಗೋಪನೆ ಇಲಾಖೆ ಸಹಾಯಕ ನಿರ್ದೇಶಕ ಡಾ. ಶರಣಭೂಪಾಲರೆಡ್ಡಿ ನೇತೃತ್ವದಲ್ಲಿ ಕುರಿ ಸಂಗ್ರಹಣಾ ಕೇಂದ್ರವನ್ನು ಮೈಲಾಪುರದಲ್ಲಿ ತೆರೆಯಲಾಗಿದೆ. ದೂರದ ಪ್ರಯಾಣದಿಂದ ಬಳಲಿರುವ ಕುರಿಮರಿಗಳಿಗೆ ಇಲಾಖೆಯ ಸಿಬ್ಬಂದಿ ಹಾಲು ಕುಡಿಸುವ ಮೂಲಕ ಆರೈಕೆ ಮಾಡಿದರು.
‘ಮೈಲಾಪುರದ ಸುತ್ತ ಸ್ಥಾಪಿಸಿರುವ ಚೆಕ್‌ಪೋಸ್ಟ್‌ಗಳಲ್ಲಿ 835 ಕುರಿಮರಿಗಳನ್ನು ವಶಕ್ಕೆ ಪಡೆಯಲಾಗಿದೆ. ಈಗಾಗಲೇ 400 ಕುರಿಮರಿಗಳನ್ನು ಆರೈಕೆಗಾಗಿ ಶಹಾಪುರದ ಪಶು ಆಸ್ಪತ್ರೆಗೆ ಕಳುಹಿಸಲಾಗಿದೆ’ ಎಂದು ಡಾ. ಶರಣಭೂಪಾಲರಡ್ಡಿ ತಿಳಿಸಿದರು.
ಈ ಕುರಿಮರಿಗಳನ್ನು ಯಾದಗಿರಿ, ಗುರುಮಠಕಲ್ನ ಪಶು ಚಿಕಿತ್ಸಾ ಕೇಂದ್ರದಲ್ಲಿ ಹರಾಜು ಮಾಡಲಾಗುತ್ತಿದ್ದು, ಬಂದ ಆದಾಯವನ್ನು ದೇವಸ್ಥಾನದ ಅಭಿವೃದ್ಧಿಗೆ ಬಳಸಿಕೊಳ್ಳಲಾಗುತ್ತದೆ.