ಕರ್ನಾಟಕ

ಒಂದೇ ಕಟ್ಟಡಕ್ಕೆ ಹತ್ತು ವಿಧದ ಬಾಡಿಗೆ!: ಟಿಟಿಎಂಸಿಗಳಲ್ಲೂ ಸೋರುತ್ತಿದೆ ಬಿಎಂಟಿಸಿ ಆದಾಯ

Pinterest LinkedIn Tumblr

pvec10jan15j-ttmc

ಬೆಂಗಳೂರು: ಕೆಂಗೇರಿಯ 100 ಚದರ ಅಡಿ ವಿಸ್ತೀರ್ಣದಲ್ಲಿರುವ ಕೆನರಾ ಬ್ಯಾಂಕ್‌ ಎಟಿಎಂಗೆ ಮಾಸಿಕ ಬಾಡಿಗೆ ರೂ20 ಸಾವಿರ. ತಳ ಅಂತಸ್ತಿನಲ್ಲಿ 10 ಸಾವಿರ ಚದರ ವಿಸ್ತೀರ್ಣದಲ್ಲಿರುವ ಗುರು ಎಂಟರ್‌ಪ್ರೈಸಸ್‌ಗೆ ಮಾಸಿಕ ಬಾಡಿಗೆ ರೂ52,500!

ಕೆನರಾ ಬ್ಯಾಂಕಿಗೆ ಚದರ ಅಡಿಗೆ ರೂ200 ನಿಗದಿಪಡಿಸಿದ್ದರೆ, ಗುರು ಎಂಟರ್‌ಪ್ರೈಸಸ್‌ಗೆ ಚದರ ಅಡಿಗೆ ರೂ5.20 ನಿಗದಿಪಡಿಸಲಾಗಿದೆ!
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು (ಬಿಎಂಟಿಸಿ) ಕೆಂಗೇರಿ ಟಿಟಿಎಂಸಿಯಲ್ಲಿ (ಸಾರಿಗೆ ಮತ್ತು ಸಾಗಣಿಕೆ ಸೌಲಭ್ಯ ಕೇಂದ್ರ) ವಿವಿಧ ಸಂಸ್ಥೆಗಳಿಗೆ ಬಾಡಿಗೆ ನಿಗದಿ ಮಾಡಿರುವ ಬಗೆ ಇದು.

ಪ್ರಯಾಣಿಕರಿಗೆ ಉತ್ತಮ ಸೇವೆ ಒದಗಿಸುವ ಹಾಗೂ ಅಧಿಕ ಆದಾಯ ಪಡೆಯುವ ಉದ್ದೇಶದಿಂದ ಬೆಂಗಳೂರು ಸಂಸ್ಥೆಯು ನಗರದ 10 ಕಡೆಗಳಲ್ಲಿ ಟಿಟಿಎಂಸಿ ನಿರ್ಮಿಸಿತ್ತು. ‘10 ಟಿಟಿಎಂಸಿ ಕಟ್ಟಡಗಳಲ್ಲಿ ಬಾಡಿಗೆಗೆ ಜಾಗವನ್ನು ಬೇಕಾಬಿಟ್ಟಿಯಾಗಿ ನೀಡಲಾಗಿದೆ. ಜನಪ್ರತಿನಿಧಿಗಳ ಹಿಂಬಾಲಕರೇ ಈ ಜಾಗಗಳನ್ನು ಪಡೆದಿದ್ದಾರೆ. ಕೆಲವರಿಗೆ ತೀರಾ ಕಡಿಮೆ ಬಾಡಿಗೆ ವಿಧಿಸಲಾಗಿದೆ’ ಎಂಬ ಆರೋಪ ಕೇಳಿ ಬಂದಿತ್ತು. ಈ ಕಾರಣದಿಂದ ಮಾಹಿತಿ ಹಕ್ಕು ಕಾರ್ಯಕರ್ತ ಎನ್‌.ಶ್ರೀನಿವಾಸ್ ಅವರು ಮಾಹಿತಿ ಕೋರಿದ್ದರು.

ಸಂಸ್ಥೆಯು 10 ಟಿಟಿಎಂಸಿಗಳಲ್ಲಿನ 85 ಬಾಡಿಗೆದಾರರ ಸಮಗ್ರ ಮಾಹಿತಿಯನ್ನು ಒದಗಿಸಿದೆ. ಎಲ್ಲ ಟಿಟಿಎಂಸಿಗಳಲ್ಲೂ ಇದೇ ಬಗೆಯ ವ್ಯತ್ಯಾಸ ದಾಖಲೆಗಳಲ್ಲಿ ಎದ್ದು ಕಾಣುತ್ತದೆ. ಎಲ್ಲ ಟಿಟಿಎಂಸಿಗಳಲ್ಲಿ ಸರ್ಕಾರಿ ಕಚೇರಿಗಳಿಗೆ ಅಧಿಕ ಬಾಡಿಗೆ ವಿಧಿಸಿ ಖಾಸಗಿ ಸಂಸ್ಥೆಗಳಿಗೆ ಕಡಿಮೆ ಬಾಡಿಗೆ ವಿಧಿಸಿರುವುದು ಕಂಡು ಬರುತ್ತದೆ.

ಈ ಟಿಟಿಎಂಸಿಯ ನೆಲ ಅಂತಸ್ತು ಹಾಗೂ ತಳ ಅಂತಸ್ತಿನಲ್ಲಿರುವ 13,318 ಚದರ ಅಡಿ ಜಾಗಕ್ಕೆ ಬೃಂದಾವನ ಎಂಟರ್‌ಪ್ರೈಸಸ್‌ ಮಾಸಿಕ  ರೂ2,12,093 ಬಾಡಿಗೆ (ಚದರ ಅಡಿಗೆ ರೂ16) ಪಾವತಿಸುತ್ತಿದೆ. ಎರಡನೇ ಮಹಡಿಯಲ್ಲಿ ಶಾಸಕರ ಕಚೇರಿಗೆ 3,090 ಚದರ ಅಡಿ ಜಾಗಕ್ಕೆ ರೂ36,400 ಬಾಡಿಗೆ (ಚದರ ಅಡಿಗೆ ರೂ12). ಅದೇ ಮಹಡಿಯಲ್ಲಿರುವ ಗುರು ಎಂಟರ್‌ಪ್ರೈಸಸ್‌ 29,550 ಚದರ ಅಡಿ ಜಾಗಕ್ಕೆ ರೂ2,48,220 ಬಾಡಿಗೆ (ಚದರ ಅಡಿಗೆ ರೂ8.5). ಈ ಟಿಟಿಎಂಸಿಯಲ್ಲಿ 10 ಸಂಸ್ಥೆಗಳಿಗೆ ಬಾಡಿಗೆಗೆ ಜಾಗ ನೀಡಲಾಗಿದೆ.

ಶಾಂತಿನಗರ ಟಿಟಿಎಂಸಿಯ ಎರಡನೇ ಮಹಡಿಯಲ್ಲಿರುವ ವಾಣಿಜ್ಯ ತೆರಿಗೆ ಇಲಾಖೆ 20 ಸಾವಿರ ಚದರ ಅಡಿಗೆ ರೂ5,66,024 ಬಾಡಿಗೆ ಪಾವತಿಸುತ್ತಿದೆ. ಒಂದು, ಎರಡನೇ ಮಹಡಿಯಲ್ಲಿ ವಾಹನ ನಿಲುಗಡೆ (ಎಂಎಲ್‌ಸಿಪಿ) ಜಾಗಕ್ಕಾಗಿ ಆತಿಥೇಯ ಕ್ಷೇಮ ಆಸ್ಪತ್ರೆ 48,460 ಚದರ ಅಡಿ ಜಾಗಕ್ಕೆ ರೂ1,81,589 ಬಾಡಿಗೆ ನೀಡುತ್ತಿದೆ.

ಬನಶಂಕರಿ ಟಿಟಿಎಂಸಿಯಲ್ಲಿ 88,639 ಚದರ ಅಡಿ ಜಾಗವನ್ನು ಆತಿಥೇಯ ಕ್ಷೇಮ ಹೋಟೆಲ್‌ಗೆ ಬಾಡಿಗೆಗೆ ನೀಡಲಾಗಿದೆ. ಮಾಸಿಕ ಬಾಡಿಗೆ ರೂ16,03,607. ವಾಹನ ನಿಲುಗಡೆ ಜಾಗವನ್ನು (20,376 ಚದರ ಅಡಿ) ಅದೇ ಸಂಸ್ಥೆಗೆ ಮಾಸಿಕ ರೂ1,08,108 ಬಾಡಿಗೆಗೆ ನೀಡಲಾಗಿದೆ. ಉಳಿದಂತೆ ಈ ಟಿಟಿಎಂಸಿಯಲ್ಲಿ ಎರಡು ಎಟಿಎಂ ಕೌಂಟರ್‌ಗಳು ಹಾಗೂ ಒಂದು ಹಾಲಿನ ಬೂತ್‌ ಇದೆ.

ಬಾಡಿಗೆ ನಿಗದಿಯಲ್ಲಿ ಏಕರೂಪತೆ ಎಲ್ಲಿಯೂ ಕಾಣುವುದಿಲ್ಲ. ಟೆಂಡರ್‌ ಪ್ರಕ್ರಿಯೆ ನಡೆಸಿಯೇ ಬಿಡ್ ಮೂಲಕ ಬಾಡಿಗೆ ನೀಡಲಾಗಿದೆ ಎಂದು ಬಿಎಂಟಿಸಿ ಸಮಜಾಯಿಷಿ ನೀಡುತ್ತದೆ. ಆದರೆ, ಒಂದೇ ಕಟ್ಟಡದಲ್ಲಿ, ಒಂದೇ ಮಹಡಿಯಲ್ಲಿ ಕಣ್ಣಿಗೆ ರಾಚುವಂತೆ ಬಾಡಿಗೆ ವ್ಯತ್ಯಾಸ ಸಾಧ್ಯವೇ ಎಂದು ಶ್ರೀನಿವಾಸ್ ಪ್ರಶ್ನಿಸುತ್ತಾರೆ.

patti

‘ಬೇರೆ ಬೇರೆ ಟಿಟಿಎಂಸಿಗಳಲ್ಲಿ ಬಾಡಿಗೆ ವಿಭಿನ್ನವಾಗಿದ್ದರೆ ಒಪ್ಪ­ಬಹುದು. ಒಂದೇ ಟಿಟಿಎಂಸಿಯಲ್ಲಿ 10 ರೀತಿ ಬಾಡಿಗೆ ನೀಡಿರುವುದು ಸಂಶಯ ಮೂಡಿಸುತ್ತದೆ’ ಎಂದು ಅವರು ಗಮನ ಸೆಳೆದಿದ್ದಾರೆ.

ಕಟ್ಟಡಗಳ ಉಪಬಾಡಿಗೆ: ‘ಕೆಲವು ವರ್ಷಗಳ ಹಿಂದೆ ಬಿಎಂಟಿಸಿ ಬಸ್ ನಿಲ್ದಾಣಗಳಲ್ಲಿ ಅಂಗವಿಕಲರಿಗೆ, ಹಿಂದುಳಿದ ವರ್ಗದವರಿಗೆ ಟೆಲಿಫೋನ್‌ ಬೂತ್‌, ಅಂಗಡಿಗಳನ್ನು ತೆರೆಯಲು ಅವಕಾಶ ನೀಡಲಾಗಿತ್ತು. ಬಾಡಿಗೆ ಕಡಿಮೆ ಇತ್ತು. ಈಗ ಅದನ್ನು ಕೈಬಿಡಲಾಗಿದೆ. ಇಡೀ ಟಿಟಿಎಂಸಿಯ ಜಾಗವನ್ನೇ ಒಬ್ಬರಿಗೆ ಬಾಡಿಗೆ ನೀಡಿದ ಉದಾಹರಣೆಗಳು ಇವೆ. ಅವರು ಉಪಬಾಡಿಗೆ ನೀಡುತ್ತಾರೆ. ಅವರು ದುಬಾರಿ ಬಾಡಿಗೆ ವಿಧಿಸಿ ಕಿಸೆ ತುಂಬಿಸಿಕೊಳ್ಳುತ್ತಾರೆ’ ಎಂಬ ಆರೋಪವೂ ಕೇಳಿ ಬಂದಿದೆ.

‘ಟಿಟಿಎಂಸಿಗಳಲ್ಲಿ ವಾಣಿಜ್ಯ ಮಳಿಗೆಗಳನ್ನು ಬಾಡಿಗೆ ನೀಡುವ ಮುನ್ನ ಕೆಲವು ಷರತ್ತುಗಳನ್ನು ಬಿಎಂಟಿಸಿ ವಿಧಿಸುತ್ತದೆ. ಇದರಲ್ಲಿ ಗ್ರಾಹಕರಿಗೆ ವಸ್ತುಗಳ ಮೇಲಿನ ಗರಿಷ್ಠ ಮಾರಾಟ ದರದಲ್ಲಿಯೇ ಮಾರಬೇಕು ಎಂಬ ಕಟ್ಟುನಿಟ್ಟಿನ ನಿಯಮ ಇದೆ. ಆದರೆ,  ಯಾವುದೇ ಟಿಟಿಎಂಸಿಗಳಲ್ಲೂ ಇದರ ಪಾಲನೆ ಆಗುತ್ತಿಲ್ಲ. ಪ್ರತಿ ವಸ್ತುಗಳ ಮೇಲಿನ ಎಂಆರ್‌ಪಿಗಿಂತ ರೂ2ರಿಂದ ರೂ5 ಹೆಚ್ಚು ಹಣವನ್ನು ಗ್ರಾಹಕರಿಂದ ವಸೂಲಿ ಮಾಡಲಾಗುತ್ತಿದೆ. ಇಲ್ಲಿಗೆ ಬರುವವರಲ್ಲಿ ಹೆಚ್ಚಿನವರು ಪ್ರಯಾಣಿಕರೇ ಆಗಿರುವುದರಿಂದ ನಿತ್ಯ ಸುಲಿಗೆಗೆ ಒಳಗಾಗುತ್ತಾರೆ’ ಎಂದು ಬಸ್ ಪ್ರಯಾಣಿಕರು ದೂರುತ್ತಾರೆ.

ಮಾಸಿಕ ಬಾಡಿಗೆ ₨3 ಕೋಟಿ
10 ಟಿಟಿಎಂಸಿಗಳಿಂದ ಸಂಸ್ಥೆಗೆ ತಿಂಗಳಿಗೆ ₨3.18 ಕೋಟಿ ಆದಾಯ ಬರುತ್ತಿದೆ. ಈ ಟಿಟಿಎಂಸಿಗಳ ನಿರ್ಮಾಣಕ್ಕೆ ಸಂಸ್ಥೆಯು ₨454.16 ಕೋಟಿ ವೆಚ್ಚ ಮಾಡಿದೆ. ಸಂಸ್ಥೆಯು ಜವಾಹರಲಾಲ್‌ ನೆಹರೂ ರಾಷ್ಟ್ರೀಯ ನಗರ ಅಭಿವೃದ್ಧಿ ಯೋಜನೆಯ (ಜೆನರ್ಮ್) ಅನುದಾನದ ನೆರವಿನಿಂದ ಟಿಟಿಎಂಸಿಗಳನ್ನು ನಿರ್ಮಿಸಿದೆ. ಇವುಗಳ ನಿರ್ಮಾಣಕ್ಕೆ ಕೇಂದ್ರ ಸರ್ಕಾರ (ಶೇ 35), ರಾಜ್ಯ ಸರ್ಕಾರ (ಶೇ 15) ಅನುದಾನ ನೀಡಿತ್ತು. ಉಳಿದ ಮೊತ್ತವಾದ ₨293.65 ಕೋಟಿಯನ್ನು (ಯೋಜನೆಯ ಶೇ 50 ಪಾಲು) ಬಿಎಂಟಿಸಿ ಭರಿಸಿತ್ತು.

ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಈವರೆಗೆ ₨161.80 ಕೋಟಿ ಬಿಡುಗಡೆಯಾಗಿದ್ದು, ಇದನ್ನು ಸಂಪೂರ್ಣ ಬಳಕೆ ಮಾಡಲಾಗಿದೆ. ಕೇಂದ್ರ ಸರ್ಕಾರದಿಂದ ಇನ್ನೂ ₨4.69 ಕೋಟಿ ಬಿಡುಗಡೆಯಾಗಬೇಕಿದೆ ಎಂದು ಸಂಸ್ಥೆ ಉತ್ತರಿಸಿದೆ. ನರ್ಮ್ ಯೋಜನೆಯಡಿ ಸ್ವೀಕರಿಸಿದ ಅನುದಾನವನ್ನು ಆಯಾ ಉದ್ದೇಶಕ್ಕೆ ಸಂಪೂರ್ಣವಾಗಿ ಬಳಕೆ ಮಾಡಿದ್ದು, ಇದರಲ್ಲಿ ಹಿಂದಿರುಗಿಸಬೇಕಾದ ಮೊತ್ತ ಇಲ್ಲ ಎಂದು ಬಿಎಂಟಿಸಿ ಸಮಜಾಯಿಷಿ ನೀಡಿದೆ.

‘ನಷ್ಟಕ್ಕೂ ಕಾಣಿಕೆ’
‘ಸಂಸ್ಥೆಯು 08–-09ರಲ್ಲಿ ₨55.18 ಕೋಟಿ, 09–- 10ರಲ್ಲಿ ₨65.13 ಕೋಟಿ, 10–-11ರಲ್ಲಿ ₨50.35 ಕೋಟಿ, 11–12ರಲ್ಲಿ ₨21.42 ಕೋಟಿ ಲಾಭ ಗಳಿಸಿತ್ತು. 12–-13ರಲ್ಲಿ ₨137 ಕೋಟಿ, 13–14ರಲ್ಲಿ ₨147 ಕೋಟಿ ನಷ್ಟ ಅನುಭವಿಸಿದೆ. ಬಹುತೇಕ ಟಿಟಿಎಂಸಿಗಳನ್ನು 2011ರ ಬಳಿಕವೇ ಕಟ್ಟಲಾಗಿದೆ. ಇವುಗಳಿಂದ ಬರುತ್ತಿರುವ ಆದಾಯ ತುಂಬಾ ಕಡಿಮೆ. ಪಾರದರ್ಶಕ ಪ್ರಕ್ರಿಯೆ ನಡೆಸಿ ಬಾಡಿಗೆ ನಿಗದಿಪಡಿಸಿದ್ದರೆ ಸಂಸ್ಥೆಯ ನಷ್ಟದ ಪ್ರಮಾಣ ಕಡಿಮೆ ಆಗುತ್ತಿತ್ತು’ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

‘ಪ್ರಯಾಣಿಕ ಸ್ನೇಹಿಯಲ್ಲ’
ಬಿಎಂಟಿಸಿ ಪ್ರತಿಯೊಂದು ವಿಷಯವನ್ನು ಲಾಭ–ನಷ್ಟದ ದೃಷ್ಟಿಯಿಂದಲೇ ನೋಡುತ್ತಿದೆ. ಸಂಸ್ಥೆಯ ಪ್ರಮುಖ ಉದ್ದೇಶ ಜನರಿಗೆ ಹಿತಕರ ಸೇವೆ ನೀಡುವುದು ಆಗಬೇಕಿತ್ತು. ಅದಾಗುತ್ತಿಲ್ಲ. ಟಿಟಿಎಂಸಿ ವಿಷಯದಲ್ಲೂ ಅದೇ ರೀತಿ ಆಗಿದೆ ಎಂದು ಬಸ್ ಪ್ರಯಾಣಿಕರ ವೇದಿಕೆಯ ಸಂಚಾಲಕ ವಿನಯ್ ಶ್ರೀನಿವಾಸ್ ಬೇಸರ ವ್ಯಕ್ತಪಡಿಸಿದರು.

‘ಟಿಟಿಎಂಸಿಗಳಿಂದ ಪ್ರಯಾಣಿಕರಿಗೆ ಅನುಕೂಲ ಆಗಿಲ್ಲ. ಅಲ್ಲಿ ಪ್ರಯಾಣಿಕರಿಗೆ ಉಪಯೋಗ ಆಗುವಂತಹ ಮಳಿಗೆಗಳನ್ನು ನಿರ್ಮಿಸಿಲ್ಲ. ಮಳಿಗೆಗಳನ್ನು ರಿಲಯನ್ಸ್, ವಾಣಿಜ್ಯ ತೆರಿಗೆ ಇಲಾಖೆ ಮತ್ತಿತರರಿಗೆ ನೀಡಲಾಗಿದೆ. ಅದು ಸಹ ಜುಜುಬಿ ಬಾಡಿಗೆಗೆ. ಅದರ ಬದಲು ದ್ವಿಚಕ್ರವಾಹನ, ಸೈಕಲ್‌ ನಿಲುಗಡೆಗೆ ಹೆಚ್ಚಿನ ಜಾಗ ನೀಡಿದ್ದರೆ ಬಸ್ ಪ್ರಯಾಣಿಕರ ಸಂಖ್ಯೆ ಹೆಚ್ಚುತ್ತಿತ್ತು’ ಎಂದು ಅವರು ಅಭಿಪ್ರಾಯಪಟ್ಟರು.

‘ಟಿಟಿಎಂಸಿಗಳ ವಿನ್ಯಾಸ ವೈಜ್ಞಾನಿಕವಾಗಿಲ್ಲ. ಕತ್ತಲೆ ಜಾಸ್ತಿ ಇದೆ. ಅಧಿಕ ಪ್ರಮಾಣದಲ್ಲಿ ಮಾಲಿನ್ಯ ಉಂಟಾಗುತ್ತಿದೆ ಎಂದು ಮಾಲಿನ್ಯ ನಿಯಂತ್ರಣ ಮಂಡಳಿ ವರದಿ ನೀಡಿದೆ. ಪ್ರಯಾಣಿಕರು ಹಾಗೂ ಸಂಸ್ಥೆಯ ಸಿಬ್ಬಂದಿಯ ಅಭಿಪ್ರಾಯ ಪಡೆದು ನಿರ್ಮಿಸಿದ್ದರೆ ಗುಣಮಟ್ಟ ಉತ್ತಮವಾಗಿರುತ್ತಿತ್ತು’ ಎಂದರು.

‘ಟೆಂಡರ್ ಕರೆದೇ ಬಾಡಿಗೆಗೆ ಜಾಗ’
‘ಎಲ್ಲ ಟಿಟಿಎಂಸಿಗಳಲ್ಲಿ ಟೆಂಡರ್ ಕರೆದೇ ಬಾಡಿಗೆಗೆ ಜಾಗಗಳನ್ನು ನೀಡಲಾಗಿದೆ. ಹೆಚ್ಚಿನ ಬಿಡ್ ಹಾಕಿದವರಿಗೆ ಬಾಡಿಗೆ ನೀಡಲಾಗಿದೆ. ಬಾಡಿಗೆಗೆ ಜಾಗ ನೀಡುವಾಗ ತಾರತಮ್ಯ ಆಗಿಲ್ಲ. ಪಾರದರ್ಶಕವಾಗಿಯೇ ಪ್ರಕ್ರಿಯೆ ನಡೆದಿದೆ’ ಎಂದು ಬಿಎಂಟಿಸಿಯ ಮುಖ್ಯ ವ್ಯವಸ್ಥಾಪಕ (ವಾಣಿಜ್ಯ) ಜಿ.ಎನ್‌.ವೀರೇಗೌಡ ಸ್ಪಷ್ಟಪಡಿಸಿದರು.

ಯಶವಂತಪುರ ಟಿಟಿಎಂಸಿಯಲ್ಲಿ ಶೇ 80, ಶಾಂತಿನಗರ ಟಿಟಿಎಂಸಿಯಲ್ಲಿ ಶೇ 95 ಜಾಗವನ್ನು ಸರ್ಕಾರಿ ಕಚೇರಿಗಳಿಗೆ ನೀಡಲಾಗಿದೆ ಉಳಿದ ಟಿಟಿಎಂಸಿಗಳಲ್ಲೂ ಇದೇ ಸ್ಥಿತಿ ಇದೆ. ಯಶವಂತಪುರ ಟಿಟಿಎಂಸಿಯಲ್ಲಿ ಹಾಗೂ ಶಿವಾಜಿನಗರ ಬಸ್ ನಿಲ್ದಾಣದಲ್ಲಿ ಇನ್ನೂ ಸಾಕಷ್ಟು ಜಾಗ ಇದೆ. ನಾಲ್ಕೈದು ಬಾರಿ ಟೆಂಡರ್‌ ಕರೆದರೂ ಯಾರೂ ಬಂದಿಲ್ಲ’ ಎಂದು ಅವರು ಬೇಸರ ವ್ಯಕ್ತಪಡಿಸಿದರು.

‘ಸಕಾಲಕ್ಕೆ ಬಾಡಿಗೆ ಪಾವತಿ ಮಾಡದ ಮಳಿಗೆಗಳಿಂದ ಬಾಡಿಗೆ ವಸೂಲಿಗೆ ಕ್ರಮ ಕೈಗೊಳ್ಳಲಾಗಿದೆ. ಕೆಲವು ಸರ್ಕಾರಿ ಇಲಾಖೆಗಳು 2–3 ತಿಂಗಳಿಗೊಮ್ಮೆ ಬಾಡಿಗೆ ನೀಡುತ್ತವೆ. ಒಪ್ಪಂದ ಮಾಡಿಕೊಳ್ಳುವಾಗಲೇ ಖಾಸಗಿಯವರಿಂದ ಆರು ತಿಂಗಳ ಮುಂಗಡ ಬಾಡಿಗೆಯನ್ನು ವಸೂಲಿ ಮಾಡಲಾಗುತ್ತದೆ. ಸರಿಯಾಗಿ ಬಾಡಿಗೆ ಪಾವತಿಸದೆ ಇದ್ದಲ್ಲಿ ಆ ಹಣವನ್ನು ಮುರಿದುಕೊಂಡು ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ’ ಎಂದು ಅವರು ತಿಳಿಸಿದರು.

Write A Comment