ಕರ್ನಾಟಕ

ದಾಳಿಗೆ ಭಟ್ಕಳದ ಸ್ಫೋಟಕ: ತನಿಖಾಧಿಕಾರಿಗಳ ಅನುಮಾನ

Pinterest LinkedIn Tumblr

mn

ಬೆಂಗಳೂರು: ದೇಶದ ವಿವಿಧೆಡೆ ವಿಧ್ವಂ­ಸಕ ಕೃತ್ಯ ಎಸಗಿದ ಉಗ್ರರಿಗೆ ಬೆಂಗಳೂರು ಮತ್ತು ಭಟ್ಕಳದಿಂದ ಸ್ಫೋಟಕ ವಸ್ತು­ಗಳು ಪೂರೈಕೆ ಆಗಿರಬಹುದು ಎಂದು ತನಿಖಾಧಿಕಾರಿಗಳು ಅನುಮಾನ ವ್ಯಕ್ತಪಡಿಸಿದ್ದಾರೆ.

ಇಂಡಿಯನ್‌ ಮುಜಾಹಿದ್ದೀನ್‌ ಭಯೋ­ತ್ಪಾದನಾ (ಐ.ಎಂ) ಸಂಘ­ಟನೆಯ ಮೂವರು ಶಂಕಿತ ಉಗ್ರರನ್ನು ಬಂಧಿಸಿದ ಕೇಂದ್ರ ಅಪರಾಧ ವಿಭಾಗ (ಸಿಸಿಬಿ) ಹಾಗೂ ಆಂತರಿಕ ಭದ್ರತಾ ವಿಭಾಗದ ಅಧಿಕಾರಿಗಳು ನಡೆಸಿದ ಪ್ರಾಥಮಿಕ ತನಿಖೆಯಿಂದ ಈ ಮಾಹಿತಿ ಲಭ್ಯವಾಗಿದೆ.

‘ಚೆನ್ನೈ, ಹೈದರಾಬಾದ್ ಸೇರಿದಂತೆ ದೇಶದ ವಿವಿಧೆಡೆ ನಡೆದ ಭಯೋ­ತ್ಪಾ­ದನಾ ಕೃತ್ಯಗಳಲ್ಲಿ ಬಳಸಿರುವ ಸ್ಫೋಟಕ ವಸ್ತುಗಳಿಗೂ, ಬಂಧಿತರಿಂದ ವಶಪಡಿಸಿ­ಕೊಂಡಿರುವ ಸ್ಫೋಟಕ ವಸ್ತುಗಳಿಗೂ ಸಾಕಷ್ಟು ಸಾಮ್ಯತೆ ಕಂಡು ಬಂದಿದೆ.  ಆರೋಪಿ­ಗಳು ಅತ್ಯಾಧುನಿಕ ತಂತ್ರಜ್ಞಾನ ಮತ್ತು ಸ್ಫೋಟಕದ ನೆರವಿನಿಂದ ಬಾಂಬ್ ಸಿದ್ಧಪಡಿಸುವ ಹಾಗೂ ಅವುಗಳನ್ನು ಉಗ್ರರಿಗೆ ಪೂರೈಕೆ ಮಾಡುವ ವ್ಯವಸ್ಥಿತ ಜಾಲದ ಭಾಗವಾಗಿರಬಹುದು ಎಂಬ ಅನುಮಾನ ದಟ್ಟವಾಗಿದೆ’ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದರು.

‘ಸ್ಫೋಟದ ತೀವ್ರತೆ ಹೆಚ್ಚಿಸಲು ಅಮೋ­ನಿಯಂ ನೈಟ್ರೇಟ್ ಹಾಗೂ ಜಿಲೆಟಿನ್‌ಗಳ ಜತೆಗೆ  ಸರ್ಕಿಟ್‌ ಬೋರ್ಡ್‌ ಬಳಕೆ ಮಾಡುತ್ತಿದ್ದರು. ಹೈದ­ರಾ­ಬಾದ್‌, ಚೆನ್ನೈ ಸ್ಫೋಟ ಪ್ರಕರಣ­ಗ­ಳಲ್ಲೂ ಸರ್ಕಿಟ್ ಬೋರ್ಡ್‌ ಪತ್ತೆ­ಯಾ­ಗಿತ್ತು’ ಎಂದು ವಿವರಿಸಿದರು.

ತಪ್ಪಿದ ದುರಂತ: ಶುಕ್ರವಾರ ಸುದ್ದಿ­ಗಾರರ ಜತೆ ಮಾತನಾಡಿದ ನಗರ ಪೊಲೀಸ್‌ ಕಮಿಷನರ್‌ ಎಂ.ಎನ್.ರೆಡ್ಡಿ, ‘ಶಂಕಿತ ಉಗ್ರರ ಬಂಧನದಿಂದ ದೇಶ­ದಲ್ಲಿ ನಡೆಯಬಹುದಾಗಿದ್ದ ದೊಡ್ಡ ದುರಂತ ತಪ್ಪಿದಂತಾಗಿದೆ. ಬಂಧಿತರು ಈ ಹಿಂದೆ ಯಾವುದಾದರೂ ಸ್ಫೋಟ ಪ್ರಕ­ರಣ­ದಲ್ಲಿ ಭಾಗಿಯಾಗಿದ್ದರೆ?, ಯಾರ ನಿರ್ದೇಶನ­ದಂತೆ ಕೆಲಸ ಮಾಡುತ್ತಿದ್ದರು, ಸಹ­ಚರರು ಎಲ್ಲೆಲ್ಲಿ ಇದ್ದಾರೆ ಎಂಬ ಬಗ್ಗೆ ಮಾಹಿತಿ ಕಲೆ ಹಾಕಬೇಕಿದೆ’ ಎಂದು ಹೇಳಿದರು.

ಪಾಕ್ ಅಳಿಯ ಅಫಕ್‌
‘ಬಂಧಿತರಲ್ಲಿ ಸೈಯದ್ ಇಸ್ಮಾಯಿಲ್‌ ಅಫಕ್‌, ಐ.ಎಂ ಸಂಘಟನೆಯ ಪ್ರಮುಖ ಸಂಚಾಲಕನಾಗಿ ಕಾರ್ಯ ನಿರ್ವಹಿಸುತ್ತಿದ್ದ. ಪಾಕಿಸ್ತಾನ ಮೂಲದ ಯುವತಿಯನ್ನು ಮದುವೆಯಾಗಿರುವ ಈತ, ಆಗಾಗ್ಗೆ ಅಲ್ಲಿಗೆ ಹೋಗಿ ಬರುತ್ತಿದ್ದ. ಈ ವೇಳೆ ಇಂಡಿಯನ್ ಮುಜಾಹಿದ್ದೀನ್ ಸಂಘಟನೆಯ ರಿಯಾಜ್ ಭಟ್ಕಳ ಮತ್ತು ಅಲ್ಲಿನ ಭಯೋತ್ಪಾದನಾ ಸಂಘಟನೆಗಳ ಸಂಪರ್ಕ ಬೆಳೆದಿದೆ’ ಎಂದು ಪೊಲೀಸರು ಶಂಕಿಸಿದ್ದಾರೆ.

ಆತನ ಅಣ್ಣ ದುಬೈನಲ್ಲಿ ಉದ್ಯೋಗದಲ್ಲಿದ್ದಾರೆ. ಪಾಕಿಸ್ತಾನ ಮಾತ್ರವಲ್ಲದೆ ಇತರೆ ಮುಸ್ಲಿಂ ರಾಷ್ಟ್ರಗಳಿಗೂ ಹೋಗುತ್ತಿದ್ದ ಅಫಕ್, ಐ.ಎಂ ಸಂಘಟನೆಯನ್ನು ವಿಸ್ತರಿಸಲು ವಿದೇಶದಿಂದ ಹಣ ಪಡೆದಿರುವುದು ವಿಚಾರಣೆಯಿಂದ ಗೊತ್ತಾಗಿದೆ.

.21ವರೆಗೆ ಕಸ್ಟಡಿ
ಐ.ಎಂ ಸಂಘಟನೆಯ ಸೈಯದ್‌ ಇಸ್ಮಾಯಿಲ್‌ ಅಫಕ್‌ (34), ಸದ್ದಾಂ ಹುಸೇನ್‌ (35) ಮತ್ತು ಅಬ್ದುಸ್‌ ಸುಬುರ್‌ (24) ಅವರನ್ನು 12 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿ ಎಸಿಎಂಎಂ ನ್ಯಾಯಾಲಯ ಶುಕ್ರವಾರ ಆದೇಶಿಸಿತು.

‘ಶಿಬಿರಕ್ಕೆ ತೆರಳಿದ್ದ ಮಗ ವಾಪಸ್ ಬರಲಿಲ್ಲ’: ಪೊಲೀಸರ ವ್ಯವಸ್ಥಿತ ಸಂಚು; ಅಫಕ್‌ ಪೋಷಕರ ಆರೋಪ
ಸೈಯದ್‌ ಇಸ್ಮಾಯಿಲ್‌ ಅಫಕ್‌, ಅಬ್ದುಸ್‌ ಸುಬುರ್‌ ಹಾಗೂ ಕಿರಿಯ ಮಗ ಅಜೀಜ್ ಅವರು ‘ಅಕ್ಯುಪ್ರೆಶರ್‌ ಶಿಬಿರ’ಕ್ಕೆಂದು ಬುಧ­ವಾರ ಬೆಳಿಗ್ಗೆ 10.45ಕ್ಕೆ ಜಯನಗರಕ್ಕೆ ಹೋಗಿದ್ದರು. ಮಧ್ಯಾಹ್ನ 2 ಗಂಟೆಗೆ ಏಕಾಏಕಿ ಮನೆಗೆ ನುಗ್ಗಿದ ಪೊಲೀಸರು, ಲ್ಯಾಪ್‌ಟಾಪ್ ಮತ್ತು ಎಲೆಕ್ಟ್ರಿಕಲ್ ಉಪಕರಣಗಳನ್ನು ತೆಗೆದುಕೊಂಡು ಹೋದರು…

–ಹೀಗೆ ಹೇಳಿದವರು ಅಫಕ್‌ನ ಪೋಷಕರಾದ ಸೈಯದ್‌ ಅಬ್ದುಲ್ ಅಲೀಮ್ ಮತ್ತು ನೂರುನ್ನೀಸಾ. ಭಟ್ಕಳದಲ್ಲಿ ವ್ಯಾಪಾರಿಯಾಗಿದ್ದ ಅಲೀಮ್, ಮಕ್ಕಳ ವ್ಯಾಸಂಗದ ದೃಷ್ಟಿ­ಯಿಂದ ವಾಸ್ತವ್ಯವನ್ನು ಏಳು ವರ್ಷಗಳ ಹಿಂದೆ ಬೆಂಗಳೂರಿಗೆ ಬದಲಾಯಿ­ಸಿದ್ದರು.

‘ಅಫಕ್‌ ಮತ್ತು ಅವರ ಸಂಬಂಧಿ ಸುಬುರ್‌ನನ್ನು ಕಾಕ್ಸ್‌ಟೌನ್‌ನಲ್ಲಿರುವ ಅವರ ಅಪಾರ್ಟ್‌ಮೆಂಟ್‌ನಿಂದಲೇ ಬಂಧಿಸಲಾಯಿತು ಎಂದು ಪೊಲೀಸರು ಹೇಳಿಕೊಂಡಿದ್ದಾರೆ. ಆದರೆ, ಪೊಲೀಸರು ಮನೆಗೆ ಬಂದಾಗ ಅವರು ಮನೆಯಲ್ಲಿ ಇರಲೇ ಇಲ್ಲ. ಸಂಜೆ ಏಳು ಗಂಟೆಗೆ ಮಾಧ್ಯಮಗಳಲ್ಲಿ ಪೊಲೀಸ್ ಕಮಿಷನರ್‌ ಎಂ.ಎನ್.ರೆಡ್ಡಿ ಅವರ ಪತ್ರಿಕಾಗೋಷ್ಠಿ ನೋಡಿದಾಗಲೇ ಬಂಧನ ಸುದ್ದಿ ತಿಳಿಯಿತು’ ಎಂದು ನೂರುನ್ನೀಸಾ ಹೇಳಿದರು.

‘ಅಫಕ್‌ನಿಂದ ಸಮೂಹ ಸಂಪರ್ಕ ಸಾಧನವನ್ನು ವಶಪಡಿಸಿಕೊಂಡಿದ್ದಾಗಿ ಕಮಿಷನರ್‌ ಹೇಳಿದ್ದಾರೆ. ಆದರೆ, ಅದು ಅಫಕ್‌ಗೆ ಸೇರಿದ ಸಾಧನವಲ್ಲ. ನನ್ನ ಕಿರಿಯ ಮಗ ಸೈಯದ್ ಉಕ್ಬಾ ವಿದೇಶದಲ್ಲಿ ಸಾಫ್ಟ್‌ವೇರ್‌ ಎಂಜಿನಿ­ಯರ್‌ ಆಗಿದ್ದಾನೆ. ಅಂತರ್ಜಾಲದ ಸಂಪರ್ಕ ಪಡೆಯಲು ಕಂಪೆನಿಯೇ ಆ ಸಾಧನವನ್ನು ಆತನಿಗೆ ನೀಡಿತ್ತು. ಇನ್ನು ತಂಗಿಯ ಮಗನಾದ ಸುಬುರ್,  ಎಂಬಿಎ ತರಬೇತಿಗೆಂದು ಬುಧವಾರ ಬೆಳಿಗ್ಗೆಯಷ್ಟೆ ನಗರಕ್ಕೆ ಬಂದಿದ್ದ’ ಎಂದರು.

‘ಮಗ ಅಫಕ್, ಹೋಮಿಯೋಪತಿ ವೈದ್ಯ. ಆತನ ಪತ್ನಿ ಬಾಣಂತನಕ್ಕೆಂದು ಭಟ್ಕಳದ ತವರು ಮನೆಗೆ ಹೋಗಿದ್ದಾಳೆ. ಬಂಧನ ಸುದ್ದಿ ಗೊತ್ತಾದ ನಂತರ ಆಕೆಯ ಆರೋಗ್ಯ ಹದಗೆಟ್ಟಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾಳೆ. ಪೊಲೀ­ಸರು ಇಲ್ಲ–ಸಲ್ಲದ ಆರೋಪ­ಗಳನ್ನು ಹೊರಿಸಿ ಅಫಕ್‌ ಮತ್ತು ಸುಬರ್‌ನನ್ನು ಪ್ರಕರಣದಲ್ಲಿ ಸಿಕ್ಕಿಸಿದ್ದಾರೆ’ ಎಂದು ನೂರುನ್ನೀಸಾ ಆರೋಪಿಸಿದರು.

ಕೇಂದ್ರ ಸಂಸ್ಥೆಗಳಿಂದ ವಿಚಾರಣೆ
ಗಣರಾಜ್ಯೋತ್ಸವ ಸಮಾರಂಭಕ್ಕೆ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಅವರು ಭಾರತಕ್ಕೆ ಭೇಟಿ ನೀಡುತ್ತಿರುವ ಕಾರಣ ಈ ಪ್ರಕರಣವನ್ನು ಕೇಂದ್ರ ತನಿಖಾ ಸಂಸ್ಥೆಗಳು ಗಂಭೀರವಾಗಿ ಪರಿಗಣಿಸಿವೆ. ಹೀಗಾಗಿ ಮೊದಲು ಅವರೇ ವಿಚಾರಣೆ ಆರಂಭಿಸಿದ್ದಾರೆ.

‘ಕೇಂದ್ರ ಗುಪ್ತಚರ ಇಲಾಖೆ, ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಹಾಗೂ ಸಂಶೋಧನೆ ಮತ್ತು ವಿಶ್ಲೇಷಣೆ ವಿಭಾಗದ (ಆರ್‌ಎಡಬ್ಲ್ಯೂ) ಅಧಿಕಾರಿಗಳು ಶುಕ್ರವಾರ ಸಂಜೆ­ಯಿಂದ ವಿಚಾರಣೆ ಆರಂಭಿಸಿದ್ದಾರೆ. ಎರಡು ದಿನಗ­ಳಲ್ಲಿ ಅವರ ವಿಚಾರಣೆ ಪೂರ್ಣಗೊಳ್ಳಲಿದೆ. ಈ ಮಧ್ಯೆ ಹೈದರಾಬಾದ್ ಮತ್ತು ಮಹಾರಾಷ್ಟ್ರ ಪೊಲೀಸರು ಕೂಡ ಶಂಕಿತರ ಬಗ್ಗೆ ಮಾಹಿತಿ ಪಡೆಯಲು ನಗರಕ್ಕೆ ಬಂದಿದ್ದಾರೆ. ಆದರೆ, ನಮ್ಮ ವಿಚಾರಣೆ ಪೂರ್ಣಗೊಂಡ ನಂತರವಷ್ಟೇ ಶಂಕಿತರನ್ನು ನೆರೆ ರಾಜ್ಯಗಳ ಪೊಲೀಸರ ವಶಕ್ಕೆ ನೀಡಲಾಗುವುದು’ ಎಂದು ಅಧಿಕಾರಿಗಳು ತಿಳಿಸಿದರು.

Write A Comment