ಕರ್ನಾಟಕ

ಬೆಂಗಳೂರು, ಭಟ್ಕಳದಲ್ಲಿ ಪೊಲೀಸರ ಕಾರ್ಯಾಚರಣೆ: ಐ.ಎಂ ಶಂಕಿತ ಉಗ್ರರ ಸೆರೆ

Pinterest LinkedIn Tumblr

pande

ಬೆಂಗಳೂರು: ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ಮತ್ತು ಬೆಂಗಳೂರಿನ ಕಾಕ್ಸ್‌­ಟೌನ್‌ನಲ್ಲಿ ಗುರುವಾರ ಮಹತ್ವದ ಕಾರ್ಯಾಚರಣೆ ನಡೆಸಿದ ಪೊಲೀಸರು, ನಿಷೇಧಿತ ಇಂಡಿಯನ್‌ ಮುಜಾ­ಹಿದ್ದೀನ್‌ ಭಯೋತ್ಪಾ­ದನಾ (ಐ.ಎಂ) ಸಂಘ­ಟನೆಯ ಮೂವರು ಶಂಕಿತ ಉಗ್ರ­ರನ್ನು ಬಂಧಿಸಿ ಭಾರಿ ಪ್ರಮಾಣದ ಸ್ಫೋಟಕ ವಸ್ತುಗಳನ್ನು ವಶ­ಪಡಿಸಿ­ಕೊಂಡಿದ್ದಾರೆ.

ಐ.ಎಂ ಸಂಘಟನೆಯ ಸೈಯದ್‌ ಇಸ್ಮಾಯಿಲ್‌ ಅಫಕ್‌ (34), ಸದ್ದಾಂ ಹುಸೇನ್‌ (35) ಮತ್ತು ಅಬ್ದುಸ್‌ ಸುಬುರ್‌ (24) ಬಂಧಿತರು ಎಂದು ನಗರ ಪೊಲೀಸ್‌ ಕಮಿಷನರ್‌ ಎಂ.­ಎನ್‌.­­ರೆಡ್ಡಿ ಸುದ್ದಿಗೋಷ್ಠಿ­ಯಲ್ಲಿ ತಿಳಿಸಿದರು. ನಗರದ ಚರ್ಚ್‌ ಸ್ಟ್ರೀಟ್‌ ಬಾಂಬ್‌ ಸ್ಫೋಟ ಪ್ರಕರಣದ ತನಿಖೆಗೆ ರಚಿಸ­ಲಾ­ಗಿರುವ ವಿಶೇಷ ತನಿಖಾ ತಂಡ ಮತ್ತು ಆಂತರಿಕ ಭದ್ರತಾ ವಿಭಾಗದ (ಐಎಸ್‌ಡಿ) ಸಿಬ್ಬಂದಿ ಎರಡೂ ಕಡೆ ಗುರುವಾರ ನಸುಕಿನಲ್ಲಿ ಏಕಕಾಲಕ್ಕೆ ಶೋಧ ನಡೆಸಿದರು.

‘ಸೈಯದ್‌ ಮತ್ತು ಸದ್ದಾಂ, ಕಾಕ್ಸ್‌­ಟೌನ್‌ನ ಮನೆ­ಯಲ್ಲಿ ಸಿಕ್ಕಿಬಿದ್ದರು. ಇವರಿಬ್ಬರೂ ಮೂಲತಃ ಭಟ್ಕಳ­ದವರು. ಎಂಬಿಎ ವಿದ್ಯಾರ್ಥಿ ಅಬ್ದುಸ್‌ ಭಟ್ಕಳ­ದಲ್ಲಿ ವಾಸ­­­ವಾಗಿದ್ದ. ಆತನ ಮನೆಯಲ್ಲಿ ಬಾಂಬ್‌ ತಯಾರಿ­ಕೆಗೆ ಬಳಸುವ ಸುಮಾರು 3 ಕೆ.ಜಿ ಅಮೋನಿಯಂ ನೈಟ್ರೇಟ್, ಡಿಟೊನೇಟರ್‌, ಎಲೆಕ್ಟ್ರಿಕಲ್‌ ಟೈಮರ್‌, ಸರ್ಕಿಟ್‌ ಬೋರ್ಡ್‌, ಪಿವಿಸಿ ಪೈಪ್‌, ಜಿಲೆಟಿನ್‌ ವಶ­ಪಡಿ­ಸಿ­ಕೊಳ್ಳ­ಲಾಗಿದೆ. ಕಾಕ್ಸ್‌ಟೌನ್‌ನ ಮನೆಯಲ್ಲಿ ಆರೋಪಿ­ಗಳಿಗೆ ಸೇರಿದ ಮೊಬೈಲ್‌, ಲ್ಯಾಪ್‌­ಟಾಪ್‌ ಹಾಗೂ ಇತರ  ಉಪಕರಣ­ಗಳು ಸಿಕ್ಕಿವೆ’ ಎಂದು ರೆಡ್ಡಿ ಮಾಹಿತಿ ನೀಡಿದರು.

ಆರೋಪಿಗಳು ಐ.ಎಂ ಹಾಗೂ ಇತರ ಸಮಾನ­ಮನಸ್ಕ ಭಯೋತ್ಪಾ­ದನಾ ಸಂಘಟನೆಗಳೊಂದಿಗೆ ಸಂಪರ್ಕದಲ್ಲಿದ್ದರು. ವಿದೇಶದಲ್ಲಿರುವ ಐ.ಎಂ ಮುಖಂಡನ ಸೂಚನೆಯಂತೆ ಕೆಲಸ ಮಾಡುತ್ತಿದ್ದರು. ಬಂಧಿತರ ಪೂರ್ವಾಪರ,  ಈ ಹಿಂದೆ ಅಪರಾಧ ಕೃತ್ಯ­ಗಳನ್ನು ಎಸಗಿದ್ದಾರೆಯೇ ಅಥವಾ ಯಾವುದಾದರೂ ಸ್ಫೋಟ ಪ್ರಕರಣದಲ್ಲಿ ಭಾಗಿಯಾಗಿದ್ದಾರೆಯೇ ಎಂಬ ಬಗ್ಗೆ ಹೆಚ್ಚಿನ ತನಿಖೆ ನಡೆಸ­ಲಾಗು­ತ್ತಿದೆ ಎಂದು ವಿವರಿಸಿದರು.

ಬಂಧಿತರ ವಿರುದ್ಧ ಅಪರಾಧ ಸಂಚು ಆರೋಪ, ಸ್ಫೋಟಕ ವಸ್ತುಗಳ ಕಾಯ್ದೆ ಮತ್ತು ಕಾನೂನುಬಾಹಿರ ಚಟುವಟಿಕೆ­ಗಳ ನಿಯಂತ್ರಣ ಕಾಯ್ದೆಯಡಿ ಪುಲಿಕೇಶಿ­ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಚರ್ಚ್‌ ಸ್ಟ್ರೀಟ್‌ ಪ್ರಕರಣದಲ್ಲಿ ಬಂಧಿತರ ಪಾತ್ರ ಇಲ್ಲ
ಚರ್ಚ್‌ ಸ್ಟ್ರೀಟ್‌ ಬಾಂಬ್‌ ಸ್ಫೋಟ ಪ್ರಕರಣದಲ್ಲಿ ಈ ಆರೋಪಿಗಳ ಪಾತ್ರವಿಲ್ಲ ಎಂದು ಮೇಲ್ನೋಟಕ್ಕೆ ಗೊತ್ತಾಗಿದೆ. ಸ್ಫೋಟದ ಸ್ಥಳದಲ್ಲಿ ಸಿಕ್ಕಿದ್ದ ಸಾಕ್ಷ್ಯಾಧಾರ ಹಾಗೂ ಆರೋಪಿಗಳಿಂದ ವಶಪಡಿಸಿಕೊಂಡಿರುವ ಸ್ಫೋಟಕ ವಸ್ತುಗಳಿಗೆ ಸಾಮ್ಯತೆ ಇಲ್ಲ ಎಂದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ.
–ಎಂ.ಎನ್‌.ರೆಡ್ಡಿ, ಬೆಂಗಳೂರು ಪೊಲೀಸ್‌ ಕಮಿಷನರ್‌

Write A Comment