ಕರ್ನಾಟಕ

ಕಾರಿನ ಕಪ್ಪು ಫಿಲ್ಮ್‌ ತೆಗೆಸದ ಆರೋಪ: ನಟ ದುನಿಯಾ ವಿಜಯ್‌ಗೆ ದಂಡ

Pinterest LinkedIn Tumblr

duni

ಬೆಂಗಳೂರು:  ಕಾರು ಗಾಜಿನ ಕಪ್ಪು ಫಿಲ್ಮ್‌ ತೆಗೆಸದ ಕಾರಣಕ್ಕೆ ನಟ ದುನಿಯಾ ವಿಜಯ್ ಅವರಿಗೆ ಬನಶಂಕರಿ ಸಂಚಾರ ಠಾಣೆ ಪೊಲೀಸರು ಮಂಗಳವಾರ ರೂ 100 ದಂಡ ವಿಧಿಸಿದ್ದಾರೆ.

ಬೆಳಿಗ್ಗೆ ಕತ್ತರಿಗುಪ್ಪೆಯಲ್ಲಿನ ವಿಜಯ್‌  ನಿವಾಸಕ್ಕೆ ಹೋದ ಪೊಲೀಸರು, ಮನೆ ಮುಂದೆ ನಿಂತಿದ್ದ ಅವರ ರೇಂಜ್‌ ರೋವರ್‌ ವಾಹನವನ್ನು ಪರಿಶೀಲಿಸಿದರು. ಆಗ ವಾಹನದ ಗಾಜಿನ ಮೇಲೆ ಕಪ್ಪು ಫಿಲ್ಮ್‌ ಅಂಟಿಸಿರುವುದು ಕಂಡು ಬಂತು. ಅದನ್ನು ಕಿತ್ತು ದಂಡ ವಿಧಿಸಿದರು.

‘ಪ್ರಕರಣವೊಂದರ ಸಂಬಂಧ ವಿಜಯ್ ಅವರು ಸೋಮವಾರ ಸಿಸಿಬಿ ಪೊಲೀಸರ ಎದುರು ವಿಚಾರಣೆಗೆ ಹಾಜರಾಗಲು ಅದೇ  ವಾಹನದಲ್ಲಿ ಬಂದಿದ್ದರು. ಈ ಬಗ್ಗೆ ವಾಹಿನಿಗಳಲ್ಲಿ ಪ್ರಸಾರವಾದ ಸುದ್ದಿಯನ್ನು ನೋಡಿದ ಸಾರ್ವಜನಿಕರು, ವಿಜಯ್‌ ಅವರ ಕಾರು ಗಾಜಿನ ಮೇಲೆ ಕಪ್ಪು ಫಿಲ್ಮ್‌ ಇರುವುದನ್ನು ಗಮನಿಸಿ ನನಗೆ ಕರೆ ಮಾಡಿ ದೂರು ನೀಡಿದ್ದರು’ ಎಂದು ಪಶ್ಚಿಮ ಸಂಚಾರ ವಿಭಾಗದ ಡಿಸಿಪಿ ಎಸ್‌.ಗಿರೀಶ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಸಾರ್ವಜನಿಕರು ದೂರು ನೀಡುವವರೆಗೂ ಆ ಸಂಗತಿ ನಮ್ಮ ಗಮನಕ್ಕೆ ಬಂದಿರಲಿಲ್ಲ’ ಎಂದು ಅವರು ಹೇಳಿದ್ದಾರೆ. ಚಿತ್ರ ನಿರ್ಮಾಪಕ ಜಯಣ್ಣ ಅವರಿಗೆ ಜೀವ ಬೆದರಿಕೆ ಹಾಕಿದ ಆರೋಪ ಸಂಬಂಧ ವಿಜಯ್‌, ಸೋಮವಾರ ಸಿಸಿಬಿ ಕಚೇರಿಯಲ್ಲಿ ವಿಚಾರಣೆಗೆ ಹಾಜರಾಗಿದ್ದರು.

Write A Comment