ಕರ್ನಾಟಕ

ಮಂಡ್ಯ ನಗರಸಭೆ ಅಧ್ಯಕ್ಷ ಅಧಿಕಾರಾವಧಿ ಚರ್ಚೆ: ಸಭೆಯಿಂದ ಹೊರ ನಡೆದ ಅಂಬರೀಷ್

Pinterest LinkedIn Tumblr

ambi

ಮಂಡ್ಯ: ನಗರಸಭೆ ಅಧ್ಯಕ್ಷರ ಅವಧಿ ಕುರಿತಂತೆ ಚರ್ಚಿಸಲು ಸಚಿವ ಅಂಬರೀಷ್‌ ನಗರದ ತಮ್ಮ ನಿವಾಸದಲ್ಲಿ ಮಂಗಳವಾರ ಕರೆದಿದ್ದ ಸಭೆಯಲ್ಲಿ  ವಾಗ್ವಾದ ನಡೆದಿದೆ. ಇದರಿಂದ ಬೇಸರ­ಗೊಂಡ ಅಂಬರೀಷ್‌ ಅವರು ಸಭೆಯಿಂದ ಅರ್ಧದಲ್ಲಿಯೇ ಹೊರನಡೆದರು.

ನಗರಸಭೆ ಅಧ್ಯಕ್ಷರಾಗಿರುವ ಬಿ. ಸಿದ್ದರಾಜು ಅವರನ್ನು 30 ತಿಂಗಳ ಕಾಲ ಮುಂದುವರಿಸಬೇಕು ಎಂದು ಒಂದಷ್ಟು ಮಂದಿ ಹೇಳಿದರು. ಕೆಲವರು ಸ್ಪಷ್ಟ ಅಭಿಪ್ರಾಯ ನೀಡಲಿಲ್ಲ. ಪಕ್ಷೇತರ ಸದಸ್ಯರೊಬ್ಬರು ಕಾಂಗ್ರೆಸ್‌ ಜಿಲ್ಲಾ ಖಜಾಂಚಿ ಅಮರಾವತಿ ಚಂದ್ರ­ಶೇಖರ್‌ ಅವರ ವಿರುದ್ಧ ಆರೋಪ ಮಾಡಿದರು.

ಈ ಹಂತದಲ್ಲಿ ಮಧ್ಯ ಪ್ರವೇಶಿಸಿದ ಅಪ್ಪು ಶಂಕರ್‌, ‘ಪಕ್ಷೇತರ ಸದಸ್ಯರಾಗಿ ನೀವೇಕೆ ಮಾತನಾಡು­ತ್ತಿದ್ದೀರಿ? ಸುಮ್ಮನೆ ಕುಳಿತುಕೊಳ್ಳಿ’ ಎಂದು ಅವರಿಗೆ ಸೂಚಿಸಿದರು. ‘ಅಧಿಕಾರ ಹಿಡಿಯುವಾಗ ಪಕ್ಷೇತರ ಸದಸ್ಯರು ಬೇಕಾಗಿದ್ದೆವು. ಆದರೆ, ಈಗ ಬೇಡವೇ?’ ಎಂದು ಪ್ರಶ್ನಿಸಿದರು. ಆಗ ಮಾತಿಗೆ ಮಾತು ಬೆಳೆದು ಗದ್ದಲದ ವಾತಾವರಣ ನಿರ್ಮಾಣವಾಯಿತು.

ಮಧ್ಯ ಪ್ರವೇಶಿಸಿದ ಅಂಬರೀಷ್‌ ಎಲ್ಲರನ್ನೂ ಸಮಾಧಾನಪಡಿಸಿ, ಅಧ್ಯಕ್ಷ­ರೊಬ್ಬ­ರನ್ನೇ ಕರೆದು­ಕೊಂಡು ಕೊಠಡಿ­ಯೊಂದಕ್ಕೆ ತೆರಳಿದರು. ಐದು ನಿಮಿಷದ ಮಾತುಕತೆಯ ನಂತರ ಹೊರಬಂದ ಅವರು, ನಾನು ಒಂದು ಮಾತು ಹೇಳುತ್ತೇನೆ ಎಲ್ಲರೂ ಕೇಳುತ್ತೀರಾ ಎಂದು ಪ್ರಶ್ನಿಸಿದರು.

ಆಗ ಕೆಲ ಸದಸ್ಯರು ‘ಸಿದ್ದರಾಜು ಅವರನ್ನೇ ಮುಂದುವರಿಸಬೇಕು’ ಎಂದು ಕೂಗತೊಡಗಿದರು. ಕೆಲವರು ಪ್ರತಿಯಾಗಿ ‘ಬೇಡ’ ಎಂದು ಕೂಗಿದರು. ಇದರಿಂದ ಬೇಸರಗೊಂಡ ಸಚಿವರು ಸಭೆಯಿಂದ ಹೊರಟುಬಿಟ್ಟರು.

‘ಕಾಂಗ್ರೆಸ್ಸಿಗರಲ್ಲದ ಸಿದ್ದರಾಜು ಅವರನ್ನು ಕರೆತಂದು ನಗರಸಭೆ ಅಧ್ಯಕ್ಷರನ್ನಾಗಿ ಮಾಡಿದ್ದೇವೆ. 15 ತಿಂಗಳ ಅವಧಿಗೆ ಮಾತ್ರ ಅಧಿಕಾರಾವಧಿ ಎಂದು ಒಪ್ಪಂದ ಮಾಡಿಕೊಳ್ಳಲಾಗಿತ್ತು. ಈಗ ಅವರು ಅದನ್ನು ಪಾಲಿಸುತ್ತಿಲ್ಲ. ಅವಶ್ಯಕತೆ ಬಿದ್ದರೆ ಒಪ್ಪಂದ ಪತ್ರಕ್ಕೆ ಅವರು ಸಹಿ ಹಾಕಿರುವುದನ್ನು ಬಿಡುಗಡೆ ಮಾಡುತ್ತೇನೆ’ ಎಂದು ಕಾಂಗ್ರೆಸ್‌ ಜಿಲ್ಲಾ ಖಜಾಂಚಿ ಅಮರಾವತಿ ಚಂದ್ರಶೇಖರ್‌ ಸುದ್ದಿಗಾರರಿಗೆ ತಿಳಿಸಿದರು.

‘ಪಕ್ಷದ ಸದಸ್ಯರು ಹಾಗೂ ಪಕ್ಷೇತರರೂ ಸೇರಿ 26 ಮಂದಿ ಸಭೆಯಲ್ಲಿ ಪಾಲ್ಗೊಂಡಿದ್ದರು. ಬೇರೆ ವಿಷಯಕ್ಕೆ ವಾಗ್ವಾದ ನಡೆದಿದ್ದರಿಂದ ಸಚಿವರು ಬೇಜಾರಾಗಿ ಹೊರಟುಹೋದರು. ನನಗೆ ಯಾವುದೇ ಅವಧಿ ನಿಗದಿಯಾಗಿಲ್ಲ. ಮತ್ತೊಮ್ಮೆ ಈ ಬಗ್ಗೆ ಸಭೆ ನಡೆಸಲಿದ್ದಾರೆ’ ಎಂದು ನಗರಸಭೆ ಅಧ್ಯಕ್ಷ ಸಿದ್ದರಾಜು ಹೇಳಿದರು.

Write A Comment