ಕರ್ನಾಟಕ

ಗೋಹತ್ಯೆ ನಿಷೇಧ ಕಾನೂನು ವಾಪಸ್ಸು; ಜಾತಿ ರಾಜಕಾರಣ ಮಾಡುತ್ತಿರುವ ರಾಜ್ಯ ಸರಕಾರ: ಶೆಟ್ಟರ್ ಆರೋಪ

Pinterest LinkedIn Tumblr

shetter

ಬೆಳಗಾವಿ, ಡಿ.20: ಗೋಹತ್ಯೆ ನಿಷೇಧ ಕಾನೂನು ವಾಪಸ್ಸು ಪಡೆಯುವ ಮೂಲಕ ರಾಜ್ಯಸರ್ಕಾರ ಜಾತಿ ರಾಜಕಾರಣ, ವೋಟ್ ಬ್ಯಾಂಕ್ ರಾಜಕಾರಣ ಮಾಡಲು ಹೊರಟಿದೆ ಎಂದು ವಿಧಾನಸಭೆ ಪ್ರತಿಪಕ್ಷದ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ವಾಗ್ದಾಳಿ ನಡೆಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗೋ ಸಂಪತ್ತು ರಕ್ಷಣೆ ಮಾಡುವ ಬದಲು, ಈ ಸರ್ಕಾರ ಗೋವುಗಳನ್ನು ನಾಶ ಮಾಡಲು ಹೊರಟಿದೆ. ನಿಜಕ್ಕೂ ಅಧಿವೇಶನದಲ್ಲಿ ಗೋಹತ್ಯೆ ನಿಷೇಧ ಕಾನೂನು ವಾಪಸ್ಸು ಪಡೆದಿರುವುದು ದುರಂತ ಎಂದು ಟೀಕಿಸಿದರು. ಡಿ.9ರಿಂದ ಅಧಿವೇಶನ ಪ್ರಾರಂಭವಾಗಿ ಹತ್ತು ದಿನಗಳಿಗೇ ಮುಕ್ತಾಯವಾಗಿದೆ.
ಪ್ರತಿಪಕ್ಷವಾಗಿ ಉತ್ತರ ಕರ್ನಾಟಕದ ಅಭಿವೃದ್ಧಿ, ಸರ್ಕಾರದ ನಿರ್ಲಕ್ಷ್ಯದ ಬಗ್ಗೆ ಪರಿಣಾಮಕಾರಿಯಾಗಿ ವಿಚಾರ ಮಂಡನೆ ಮಾಡಿದ್ದೇವೆ. ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಬಜೆಟ್ ಮಂಡನೆಯಂತೆ ಕೇವಲ ಅಂಕಿಅಂಶಗಳನ್ನು ನೀಡಿದ್ದಾರೆ. ಒಟ್ಟಾರೆ ಕಾಟಾಚಾರಕ್ಕೆ ಅಧಿವೇಶನ ನಡೆಸಲಾಗಿದೆ ಎಂದು ದೂರಿದರು.

ಉತ್ತರ ಕರ್ನಾಟಕ ಭಾಗದ ಅಭಿವೃದ್ಧಿಗೆ 30 ಸಾವಿರ ಕೋಟಿ ರೂ. ವೆಚ್ಚದ ವಿವಿಧ ಪ್ಯಾಕೇಜ್ ಘೋಷಿಸಿದ್ದಾರೆ. ಇದು ಎಷ್ಟರ ಮಟ್ಟಿಗೆ ಪರಿಣಾಮಕಾರಿಯಾಗಿ ಅನುಷ್ಠಾನಗೊಳ್ಳುತ್ತದೋ ಗೊತ್ತಿಲ್ಲ. ನಂಜುಂಡಪ್ಪ ವರದಿಯ ಶಿಫಾರಸ್ಸನ್ನು ಎಷ್ಟು ವರ್ಷಗಳವರೆಗೆ ಮುಂದುವರೆಸಲಾಗುತ್ತದೆ ಎಂಬ ಬಗ್ಗೆ ಸರ್ಕಾರ ಸ್ಪಷ್ಟನೆ ನೀಡಿಲ್ಲ. ಕೆಲವು ವಿಧೇಯಕಗಳನ್ನು ಪ್ರತಿರೋಧದ ನಡುವೆಯೇ ತರಾತುರಿಯಲ್ಲಿ ಮಂಡಿಸಲಾಗಿದೆ ಎಂದು ಜಗದೀಶ್ ಶೆಟ್ಟರ್ ಕಿಡಿಕಾರಿದರು.

Write A Comment