ಕರ್ನಾಟಕ

ಪರಿಷತ್‌ಗೆ ಮರುಹುಟ್ಟು ನೀಡಬೇಕಿದೆ: ಕಸಾಪ ವಿಚಾರ ಸಂಕಿರಣದಲ್ಲಿ ಮರುಳಸಿದ್ದಪ್ಪ ಅಭಿಪ್ರಾಯ

Pinterest LinkedIn Tumblr

kasapa

ಬೆಂಗಳೂರು: ‘ಪ್ರಾತಿನಿಧಿಕ ಸಂಸ್ಥೆಯಾಗಿರುವ ಕನ್ನಡ ಸಾಹಿತ್ಯ ಪರಿಷತ್‌, ಬದಲಾಗುತ್ತಿರುವ ಕಾಲಮಾನಕ್ಕೆ ಸ್ಪಂದಿಸುತ್ತಾ ಹೋಗಬೇಕು. ಕನ್ನಡದ ಚಿಂತನಶೀಲ ಮನಸ್ಸುಗಳನ್ನು ಪಾಲು­ದಾರರನ್ನಾಗಿಸಿಕೊಂಡು ಮುನ್ನಡೆಯಬೇಕು. ಈ ಮೂಲಕ ಪರಿಷತ್‌ಗೆ ಮರುಹುಟ್ಟು ನೀಡಬೇಕಿದೆ’ ಎಂದು ಸಾಹಿತಿ ಡಾ.ಕೆ.ಮರುಳಸಿದ್ದಪ್ಪ ಹೇಳಿದರು.

ನಗರದಲ್ಲಿ ಕನ್ನಡ ಸಾಹಿತ್ಯ ಪರಿಷತ್‌ (ಕಸಾಪ) ಆಯೋಜಿಸಿದ್ದ ‘ನೃಪತುಂಗ ಪ್ರಶಸ್ತಿ ಪುರಸ್ಕೃತರ ಬದುಕು–ಬರಹ’ ವಿಚಾರ ಸಂಕಿರಣದ ಸಮಾ ರೋಪ ಸಮಾರಂಭದಲ್ಲಿ ಮಾತನಾಡಿದರು. ‘ಶತಮಾನೋತ್ಸವ ಆಚರಿಸಿಕೊಳ್ಳು­ತ್ತಿರುವ ಕಸಾಪದ ಸಂಪ್ರದಾಯಗಳಿಗೆ ಹೊಸ ರೂಪ ನೀಡಬೇಕಾಗಿದೆ. ಚಲನಶೀಲತೆಗೆ ಒತ್ತು ನೀಡಬೇಕಾಗಿದೆ. ಸಾಹಿತಿಗಳು ಅರ್ಥಪೂರ್ಣವಾದ ರೀತಿಯಲ್ಲಿ ತಮ್ಮನ್ನು ಕಸಾಪ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳ­ಬೇಕು. ಅದಕ್ಕೆ ಸೂಕ್ತ ವೇದಿಕೆಯನ್ನು ಪರಿಷತ್‌ ಕಲ್ಪಿಸಬೇಕು. ಹಿಂದೆ ಜಿ.ನಾರಾಯಣ ಅವರು ಅಧ್ಯಕ್ಷರಾಗಿದ್ದಾಗ ಕಸಾಪಗೆ ಹೊಸ ಸ್ವರೂಪ ಲಭಿಸಿತ್ತು’ ಎಂದು ನುಡಿದರು.

ನಾಡಗೀತೆ ಬಗ್ಗೆ ಎದ್ದಿರುವ ವಿವಾದ ಕುರಿತು, ‘ಯಾವುದೇ ಕಾರಣಕ್ಕೂ ನಾಡಗೀತೆಯನ್ನು ಸಂಕ್ಷಿಪ್ತಗೊಳಿಸಬಾರದು. ಅರ್ಧ ನಿಮಿಷಕ್ಕೆ ಇಳಿಸಿದರೂ ಕೆಲವರಿಗೆ ನಿಂತುಕೊಳ್ಳಲು ಸಾಧ್ಯವಿಲ್ಲ. ಏನಾದರೂ ಕುಂಟುನೆಪ ಹೇಳುತ್ತಾರೆ’ ಎಂದರು. ಜ್ಞಾನಪೀಠ ಹಾಗೂ ನೃಪತುಂಗ ಪ್ರಶಸ್ತಿಗಳ ನಡುವೆ ಹೋಲಿಕೆ, ಸ್ಪರ್ಧೆ ಬೇಡ ಎಂದ ಅವರು, ‘ಜ್ಞಾನಪೀಠದ ಬಗ್ಗೆ ಅಸೂಯೆ, ಹೊಟ್ಟೆಕಿಚ್ಚು ಏಕೆ? ಅಷ್ಟಕ್ಕೂ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು ಅಂತರಿಕ್ಷದಿಂದ ಇಳಿದುಬಂದವರೇನಲ್ಲ’ ಎಂದು ನುಡಿದರು.

‘ಶತಮಾನೋತ್ಸವ ಆಚರಿಸುತ್ತಿರುವ ಈ ಸಂದರ್ಭದಲ್ಲಿ ದಲಿತ ಸಾಹಿತಿಯನ್ನು ಸಮ್ಮೇಳನದ ಅಧ್ಯಕ್ಷರನ್ನಾಗಿ ಮಾಡಬೇಕೆನ್ನುವ ಹಟವನ್ನು ಕಸಾಪ ಹೊಂದಿದೆ. ಇದೊಂದು ಒಳ್ಳೆಯ ನಡೆ. ದೇವನೂರ ಮಹಾದೇವ ಅವರು ಅಧ್ಯಕ್ಷರಾಗಲು ಒಪ್ಪಿಕೊಳ್ಳಬೇಕಿತ್ತು’ ಎಂದು ತಿಳಿಸಿದರು.

ಕಸಾಪ ಅಧ್ಯಕ್ಷ ಪುಂಡಲೀಕ ಹಾಲಂಬಿ, ‘ನಾಡಗೀತೆಯನ್ನು ಸರ್ಕಾರಿ ಕಾರ್ಯಕ್ರಮಗಳಲ್ಲಿ ಕಡ್ಡಾಯವಾಗಿ ಹಾಡಬೇಕು. ಯಾವುದೇ ಕಾರಣ ಕ್ಕೂ ಕತ್ತರಿ ಹಾಕಬಾರದು. ಪ್ರಾಥಮಿಕ ಶಿಕ್ಷಣದಲ್ಲಿ ಕನ್ನಡ ಕಡ್ಡಾಯಗೊಳಿಸಬೇಕು. ಅದಕ್ಕಾಗಿ ಬೀದಿ ಚಳವಳಿ ನಡೆಸಲಾಗುವುದು’ ಎಂದರು.

‘ನಿದ್ರಿಸುತ್ತಿರುವ ವಿದ್ಯಾವರ್ಧಕ ಸಂಘ’
ರಾಜ್ಯದ ಮೂರು ಮಹತ್ವದ ಸಾಂಸ್ಕೃತಿಕ ಸಂಸ್ಥೆಗಳು ನೂರು ವರ್ಷ ಪೂರೈಸಿವೆ. ಕಸಾಪ, ಮೈಸೂರು ವಿವಿ ಹಾಗೂ ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘ. ಇವುಗಳಲ್ಲಿ ಜೀವಂತವಿರುವ ಸಂಸ್ಥೆಗಳಾದ ಕಸಾಪ, ಮೈಸೂರು ವಿವಿ ಬಗ್ಗೆ ವಾದ ವಿವಾದ ನಡೆಯುತ್ತಿದೆ. ಆದರೆ, ಮಲಗಿ ನಿದ್ರಿಸುತ್ತಿರುವ ವಿದ್ಯಾವರ್ಧಕ ಸಂಘದ ಬಗ್ಗೆ ಯಾವುದೇ ಆಕ್ಷೇಪ ವ್ಯಕ್ತವಾಗುತ್ತಿಲ್ಲ’ ಎಂದು ಡಾ.ಕೆ.ಮರುಳಸಿದ್ಧಪ್ಪ ನುಡಿದರು.
‘ವಿದ್ಯಾವರ್ಧಕ ಸಂಘದಲ್ಲಿ 49 ವರ್ಷಗಳಿಂದ ಏಕಪಾತ್ರಾಭಿನಯ ನಡೆಯುತ್ತಿದೆ. ಬೇರೆ ನಟರಿಗೆ ಅವಕಾಶವೇ ಇಲ್ಲ. ಒಬ್ಬರೇ ಅಧ್ಯಕ್ಷರಾಗಿದ್ದಾರೆ. ಇನ್ನು 10 ವರ್ಷ ಮುಂದುವರಿದರೂ ಅಚ್ಚರಿ ಇಲ್ಲ’ ಎಂದು ವ್ಯಂಗ್ಯವಾಡಿದರು.

Write A Comment