ಬೆಳಗಾವಿ, ಡಿ.17: ಮಾಧ್ಯಮಗಳು ಬೇಜವಾಬ್ದಾರಿಯಿಂದ ವರ್ತಿಸುತ್ತಿದ್ದು, ರಾಜಕೀಯದಲ್ಲಿರುವ ಕಾರಣಕ್ಕಾಗಿ ನಾವು ಮಗಳು, ಮೊಮ್ಮಗಳನ್ನೂ ಮುದ್ದಾಡುವಂತಿಲ್ಲವೇ ಎಂದು ವಸತಿ ಸಚಿವ ಅಂಬರೀಶ್ ಕಿಡಿಕಾರಿದ್ದಾರೆ.
ಸುವರ್ಣಸೌಧದಲ್ಲಿಂದು ಸುದ್ದಿಗಾರರ ಜತೆ ಮಾತನಾಡಿದ ಅವರು, ಇತ್ತೀಚೆಗೆ ತಮ್ಮ ವಿರುದ್ಧ ಪತ್ರಿಕೆಗಳು ಹಾಗೂ ಮಾಧ್ಯಗಳಲ್ಲಿ ಪ್ರಚಾರವಾದ ಅಪಪ್ರಚಾರದ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಮಾಧ್ಯಮಗಳ ಜತೆ ನಾನು ಮಾತನಾಡುವುದಿಲ್ಲ. ನಾನು ಏನೇ ಹೇಳಿದರೂ ಅದನ್ನು ಉಲ್ಟಾ ಮಾಡಿ ಅಪಪ್ರಚಾರ ಮಾಡುತ್ತಿದ್ದೀರಾ, ಮಗಳು, ಮೊಮ್ಮಗಳಿಗೆ ಮುತ್ತಿಕ್ಕಿದರೆ ಅಂಬರೀಶ್ ಯಾರನ್ನೋ ಇಟ್ಟುಕೊಂಡಿದ್ದಾನೆ ಎಂದು ಬಿಂಬಿಸಲಾಗುತ್ತಿದೆ.
ಸಮಾಜ ತಿದ್ದುವ ಪತ್ರಕರ್ತರು ಇಷ್ಟು ಬೇಜವಾಬ್ದಾರಿಯಿಂದ ನಡೆದುಕೊಂಡರೆ ಹೇಗೆ ಎಂದು ಕಿಡಿ ಕಾರಿದರು. ರಾಜಕೀಯದಲ್ಲಿದ್ದೇವೆ ಎಂಬ ಕಾರಣಕ್ಕೆ ನಮ್ಮ ವಿರುದ್ಧ ಈ ರೀತಿ ವದಂತಿಗಳನ್ನು ಹಬ್ಬಿಸಬಾರದು. ನಮಗೂ ಆತ್ಮಗೌರವ, ಮರ್ಯಾದೆ ಎಂಬುದಿದೆ. ಮಗಳು, ಮೊಮ್ಮಗಳನ್ನು ಮುದ್ದಾಡುವ ಸ್ವಾತಂತ್ರ್ಯವೂ ನಮಗಿಲ್ಲವೇ. ನಾಳೆ ಮಗನನ್ನು ತಂಬಿಕೊಂಡರೆ ಅಂಬರೀಶ್ ಸಲಿಂಗಕಾಮಿ ಎಂದು ಬಿಂಬಿಸಬಹುದೇನೋ ಎಂದು ಕೆಂಡಾಮಂಡಲವಾದರು. ಅಂಬರೀಶ್ ಅವರ ನೋವು ಮತ್ತು ಆಕ್ರೋಶದ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಲು ಸಾಧ್ಯವಾಗದ ಸ್ಥಿತಿ ಪತ್ರಕರ್ತರದ್ದಾಗಿತ್ತು.