ಕರ್ನಾಟಕ

ಸದನದಲ್ಲಿ ಗದ್ದಲ ಕೋಲಾಹಲಕ್ಕೆ ಕಾರಣವಾದ ಬಿಜೆಪಿ ಶಾಸಕ ಪ್ರಭು ಚೌಹಾಣ್ ಮೊಬೈಲ್ ವೀಕ್ಷಣೆ ಪ್ರಕರಣ: ಶಾಸಕನ ರಾಜೀನಾಮೆಗೆ ಕಾಂಗ್ರೆಸ್ ಬಿಗಿ ಪಟ್ಟು

Pinterest LinkedIn Tumblr

session11

ಬೆಳಗಾವಿ: ಸದನದೊಳಗೆ ಶಾಸಕ ಪ್ರಭು ಚೌಹಾಣ್ ಮೊಬೈಲ್ ವೀಕ್ಷಣೆ ಮಾಡಿದ ಪ್ರಕರಣ ಸದನದಲ್ಲಿಂದು ಭಾರಿ ಕೋಲಾಹಲಕ್ಕೆ ಕಾರಣವಾಯಿತು. ಕಲಾಪ ಆರಂಭವಾಗುತ್ತಿದ್ದಂತೆ ಕಾಂಗ್ರೆಸ್ ಕಾರ್ಯಕತರು ಸದನದ ಬಾವಿಗಿಳಿದು ಬಿಜೆಪಿ ಶಾಸಕ ಪ್ರಭು ಚೌಹಾಣ್ ಅವರನ್ನು 2 ದಿನಗಳ ಕಾಲ ಅಮಾನತು ಗೊಳಿಸುವಂತೆ ಆಗ್ರಹಿಸಿದರು.

ಬಿಜೆಪಿ ವಿರುದ್ಧ ‘ಬಿಜೆಪಿ ಶೇಮ್ ಶೇಮ್‌’ ಎಂದು ಘೋಷಣೆ ಕೂಗಿ ಗದ್ದಲ ಎಬ್ಬಿಸಿದರು. ಇದೇ ವೇಳೆ ಸ್ಪೀಕರ್ ಕಾಗೋಡು ತಿಮ್ಮಪ್ಪ ಮಧ್ಯಪ್ರವೇಶಿಸಿ, ಸುಗಮ ಕಲಾಪಕ್ಕೆ ಅನುವು ಮಾಡಿಕೊಡುವಂತೆ ಉಭಯ ಶಾಸಕರ ವಿರುದ್ಧ ಕಿಡಿಕಾರಿದರು.

ಈ ವೇಳೆ ಮಾತನಾಡಿದ ಬಿಜೆಪಿ ನಾಯಕ ಜಗದೀಶ್ ಶೆಟ್ಟರ್, ಪ್ರಭು ಚೌಹಾಣ್ ಅವರ ವರ್ತನೆಯನ್ನು ಖಂಡಿಸಿ, ಬಿಜೆಪಿಗೆ ಇದೊಂದು ಕಪ್ಪು ಚುಕ್ಕೆಯಾಗಿದೆ ಎಂದರು.

ಜೆಡಿಎಸ್ ನಾಯಕ ಹೆಚ್.ಡಿ.ಕುಮಾರಸ್ವಾಮಿ ಮಧ್ಯಪ್ರವೇಶಿಸಿ, ಇಂಥಹ ಘಟನೆಗಳು ಸದನದ ಗೌರವಕ್ಕೆ ಚ್ಯುತಿ ತರುವಂತದ್ದು, ಇದೇ ರೀತಿಯ ಘಟನೆಗಳು ಮತ್ತೆ ಮರುಕಳಿಸದಂತೆ ಸಭಾಧ್ಯಕ್ಷರು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.

ಪಟ್ಟು ಬಿಡದ ಕಾಂಗ್ರೆಸ್ ಕಾರ್ಯಕರ್ತರು ಪ್ರಭು ಚೌಹಾಣ್ ರಾಜೀನಾಮೆಗೆ ಆಗ್ರಹಿಸಿದರು. ಇದಕ್ಕೆ ಬೇಸತ್ತ ಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ ಸದನವನ್ನು 10 ನಿಮಿಷಗಳ ಕಾಲ ಮುಂದೂಡಿದರು. ಈ ಮಧ್ಯೆ ಪ್ರಕರಣ ಸಂಬಂಧಿಸಿದಂತೆ ಸ್ಪೀಕರ್ ಕೊಠಡಿಯಲ್ಲಿ ಸಭಾನಾಯಕರು ಕಾಂಗ್ರೆಸ್ ಮತ್ತು ಬಿಜೆಪಿ ನಡುವಿನ ಸಂಧಾನ ಸಭೆ ನಡೆಸಿದರು. ಸಂಧಾನ ಸಭೆಯಲ್ಲೂ ಕಾಂಗ್ರೆಸ್ ಕಾರ್ಯಕರ್ತರು ತಮ್ಮ ನಿಲುವಿನಿಂದ ಹಿಂದೆಸರಿಯಲು ನಿರಾಕರಿಸಿದರು.

ಪ್ರಭು ಚೌಹ್ನಾಣ್ ಅವರನ್ನು ಕೂಡಲೇ ರಾಜೀನಾಮೆ ಗೊಳಿಸಬೇಕೆಂದು ಪಟ್ಟು ಹಿಡಿದರು. ಇದಕ್ಕೆ ಪ್ರತ್ಯುತ್ತರ ನೀಡಿದ ಬಿಜೆಪಿ ಕಾರ್ಯಕರ್ತರು, ಸದನದಲ್ಲಿ ವಸತಿ ಸಚಿವ ಅಂಬರೀಶ್ ಮತ್ತು ಶಾಸಕ ಎಸ್.ಎಸ್.ಮಲ್ಲಿಕಾರ್ಜುನ್ ಮೊಬೈಲ್‌ನಲ್ಲಿ ನೃತ್ಯ ವೀಕ್ಷಣೆ ಮಾಡುತ್ತಿದ್ದರು. ಆದ್ದರಿಂದ ಅವರ ವಿರುದ್ಧವೂ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಸಭೆಯಲ್ಲಿ ಬಿಜೆಪಿ ಶಾಸಕ ಸಿ.ಟಿ.ರವಿ, ಪ್ರಭು ಚೌಹ್ನಾಣ್ ಅವರ ವರ್ತನೆಯನ್ನು ಸಮರ್ಥಿಸಿಕೊಂಡಾಗ, ಮಧ್ಯಪ್ರವೇಶಿಸಿದ ಸಚಿವೆ ಉಮಾಶ್ರೀ ಅವರನ್ನು ತರಾಟೆಗೆ ತೆಗೆದುಕೊಂಡರು. ಸದನದಲ್ಲಿ ಚಿತ್ರ ವೀಕ್ಷಿಸಲು ಪ್ರಿಯಂಕಾ ಗಾಂಧಿ ಚಿತ್ರ ಬಿಟ್ಟು ಬೇರೆ ಯಾರ ಚಿತ್ರವೂ ಸಿಗಲಿಲ್ಲವೆ. ನಿಮ್ಮ ಮನೆ ಹುಡುಗಿಯ ಚಿತ್ರಗಳನ್ನೂ ನೀವು ಹೀಗೆ ನೋಡ್ತೀರಾ ಎಂದು ಹರಿಹಾಯ್ದರು. ಉಮಾಶ್ರೀ ಅವರ ಮಾತಿಗೆ ಶಾಸಕ ಸಿಟಿ ರವಿ ಪ್ರತ್ಯುತ್ತರ ನೀಡದೆ ಮೌನಕ್ಕೆ ಶರಣಾದರು.

ಪ್ರಭು ಚೌಹ್ನಾಣ ವರ್ತನೆಗೆ ವಿಮಲಾ ಗೌಡ ಸೇರಿದಂತೆ ಇತರೆ ಸ್ವಪಕ್ಷೀಯ ನಾಯಕರೂ ಸಹ ಖಂಡನೆ ವ್ಯಕ್ತಪಡಿಸಿದರು. ಸಂಧಾನ ಸಭೆ ಬಳಿಕ ಸದನ ಪುನರಾರಂಭಗೊಂಡಗೊಂಡಿತು. ಆಗಲೂ ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರು ನಿರಂತರ ಗದ್ದಲ ಕೋಲಾಹಲ ಎಬ್ಬಿಸಿದರು. ಜಗದೀಶ್ ಶೆಟ್ಟರ್, ಸದನದ ಕಾಲಹರಣ ಕುರಿತು ಬೇಸರ ವ್ಯಕ್ತಪಡಿಸಿದರು.

ಚರ್ಚಿಸಲು ಹಲವಾರು ವಿಷಯಗಳಿದ್ದು, ಇದಕ್ಕೆ ಸಹಕರಿಸುವಂತೆ ಕಾಂಗ್ರೆಸ್ ನಾಯಕರಿಗೆ ಮನವಿ ಮಾಡಿದರು. ತಮ್ಮ ಪಟ್ಟನ್ನು ಸಡಿಲಿಸದ ಕಾಂಗ್ರೆಸ್ ಕಾರ್ಯಕರ್ತರು ತಮ್ಮ ಪ್ರತಿಭಟನೆಯನ್ನು ಮುಂದುವರೆಸಿದರು. ಕಾಂಗ್ರೆಸ್-ಬಿಜೆಪಿ ನಾಯಕರ ವರ್ತನೆಯಿಂದ ಕೆಂಡಾಮಂಡಲರಾದ ಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ ಕಲಾಪವನ್ನು ಮಧ್ಯಾಹ್ನ 3 ಗಂಟೆಗೆ ಮುಂದೂಡಿದರು.

ಇನ್ನು ಇತ್ತ ವಿಧಾನ ಪರಿಷತ್ತಿನಲ್ಲೂ ಶಾಸಕ ಪ್ರಭು ಚೌಹ್ಹಾಣ್ ಮೊಬೈಲ್ ವೀಕ್ಷಣೆ ಪ್ರಕರಣ, ಸದನದಲ್ಲಿ ಗದ್ದಲ ಕೋಲಾಹಲಕ್ಕೆ ಕಾರಣವಾಯಿತು. ಪ್ರಭು ಚೌಹ್ಹಾಣ್ ಅವರ ರಾಜೀನಾಮೆಗೆ ಕಾಂಗ್ರೆಸ್ ನಾಯಕರು ಬಿಗಿ ಪಟ್ಟು ಹಿಡಿದರು.

ಇದೇ ವೇಳೆ ಮಾತನಾಡಿದ ಸಚಿವ ಎಸ್.ಆರ್.ಪಾಟೀಲ್, ಕಳೆದ ವರ್ಷ ನಡೆದ ವಿಧಾನಸಭೆ ವೇಳೆಯಲ್ಲೂ ಬಿಜೆಪಿಯ ಶಾಸಕರು ಸದನದೊಳಗೆ ಮೊಬೈಲ್‌ನಲ್ಲಿ ನೀಲಿ ಚಿತ್ರ ವೀಕ್ಷಣೆ ಮಾಡಿ, ಸದನಕ್ಕೆ ಅಗೌರವ ಸಲ್ಲಿಸಿದ್ದರು. ಈ ಬಾರಿಯೂ ಮೊಬೈಲ್‌ನಲ್ಲಿ ಚಿತ್ರ ವೀಕ್ಷಣೆ ಮಾಡಿ, ಚರ್ಚೆಗೆ ಕಾರಣರಾಗಿದ್ದಾರೆ. ಈ ಮೂಲಕ ಬಿಜೆಪಿ ನಾಯಕರು ಇನ್ನೂ ಪಾಠ ಕಲಿತಿಲ್ಲ ಎಂದು ಅವರು ಕಿಡಿ ಕಾರಿದರು.

ಸಭಾಧ್ಯಕ್ಷ ಡಿ.ಎಲ್.ಶಂಕರಮೂರ್ತಿ ಮಧ್ಯಪ್ರವೇಶಿಸಿ, ಇನ್ನು ಮುಂದೆ ಸದನದಲ್ಲಿ ಯಾರು ಮೊಬೈಲ್ ಫೋನ್‌ಗಳನ್ನು ತರಬಾರದು ಎಂದು ಎಚ್ಚರಿಕೆ ನೀಡಿದರು. ಮೊಬೈಲ್ ತಂದಲ್ಲಿ ಸ್ವಿಚ್ ಆಫ್ ಮಾಡಿಕೊಳ್ಳಬೇಕು. ಇದನ್ನೂ ಮೀರಿ ಸದನದೊಳಗೆ ಮೊಬೈಲ್ ಫೋನ್‌ಗಳನ್ನು ಬಳಸಿದ್ದಲ್ಲಿ, ಅಂತವರಿಂದ ಮೊಬೈಲ್ ಫೋನ್‌ಗಳನ್ನು ಕಸಿದುಕೊಳ್ಳುವುದಾಗಿ ಮೌಖಿಕ ಎಚ್ಚರಿಕೆ ನೀಡಿದರು. ಕಸಿದುಕೊಂಡ ಮೊಬೈಲ್ ಫೋನ್‌ಗಳನ್ನು ಹಿಂತಿರುಸುವುದೇ ಬೇಡವೇ ಎಂಬುದರ ಕುರಿತು ಮುಂದಿನ ದಿನಗಳಲ್ಲಿ ನಿರ್ಣಯ ಕೈಗೊಳ್ಳಲಾಗುವುದು ಎಂದು ಪ್ರತಿಕ್ರಿಯಿಸಿದರು.

Write A Comment