ಕರ್ನಾಟಕ

ಅಧಿವೇಶನಕ್ಕೆ ಹೋಗಲು ವಿಮಾನಕ್ಕಾಗಿ ಗಂಟೆಗಟ್ಟಲೆ ಕಾದುಕುಳಿತ ಶಾಸಕರು, ಸಚಿವರು ..!

Pinterest LinkedIn Tumblr

SPICEJET

ಬೆಂಗಳೂರು, ಡಿ.9: ಬೆಳಗಾವಿ ಅಧಿವೇಶನಕ್ಕೆ ಹೋಗಲು ವಿಮಾನ ಯಾನಕ್ಕೆ ಮುಂದಾದ 20ಕ್ಕೂ ಹೆಚ್ಚು ಶಾಸಕರು, 6 ಸಚಿವರು ಹಾಗೂ ಸರ್ಕಾರದ ಮುಖ್ಯ ಕಾರ್ಯದರ್ಶಿ ಗಂಟೆಗಟ್ಟಲೆ ಕಾದು ಕುಳಿತ ಘಟನೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿದೆ.

ಬೆಳಗಾವಿಯ ಸುವರ್ಣಸೌಧದಲ್ಲಿ ಬೆಳಗ್ಗೆ 11 ಗಂಟೆಗೆ ವಿಧಾನ ಮಂಡಲ ಅಧಿವೇಶನ ಆರಂಭವಾಗುತ್ತದೆ ಎಂದು ಇಂದು ಬೆಳಗ್ಗೆ 6.30ಕ್ಕೆ ಸಚಿವರು, ಶಾಸಕರು ವಿಮಾನ ನಿಲ್ದಾಣಕ್ಕೆ ಬಂದಿದ್ದರು. 7 ಗಂಟೆಗೆ ಹೊರಡಬೇಕಾಗಿದ್ದ ಸ್ಪೈಸ್ ಜೆಟ್ ವಿಮಾನ ಇನ್ನು ಒಂದು ಗಂಟೆ ತಡವಾಗುತ್ತದೆ ಎಂದು ತಿಳಿಸಲಾಗಿತ್ತು. ಆದರೆ 11 ಗಂಟೆಯಾದರೂ ವಿಮಾನ ಏರುವ ಭಾಗ್ಯ ಸಿಗಲಿಲ್ಲ. ಇದರಿಂದ ಆಕ್ರೋಶಗೊಂಡ ಕೆಲ ಸಚಿವರು ಸ್ಪೈಸ್ ಜೆಟ್ ಕಂಪೆನಿಯ ವಿಮಾನ ಯಾನ ಸಿಬ್ಬಂದಿಗಳನ್ನು ತರಾಟೆಗೆ ತೆಗೆದುಕೊಂಡರು. ಈ ವೇಳೆ ಈ ಸಂಜೆಯೊಂದಿಗೆ ಮಾತನಾಡಿದ ಸಚಿವ ರಾಮಲಿಂಗಾರೆಡ್ಡಿ ಬೆಳಗಾವಿಗೆ ಹೋಗಲು ಒಂದೇ ವಿಮಾನ ಇರುವ ಕಾರಣ ಅನಿವಾರ್ಯವಾಗಿ ಕಾಯ ಬೇಕಾದಂತಹ ಪರಿಸ್ಥಿತಿ ಎದುರಾಯಿತು ಎಂದು ಹೇಳಿದರು.

ಇದೇ ವೇಳೆ ಕಾನೂನು ಮತ್ತು ಸಂಸದೀಯ ಸಚಿವ ಟಿ.ಬಿ.ಜಯಚಂದ್ರ ಕೂಡ ಪ್ರತಿಕ್ರಿಯೆ ನೀಡಿ ನಿನ್ನೆ ಬಿಡುವಿಲ್ಲದ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆ ಬೇಗ ಬೆಳಗಾವಿಗೆ ತೆರಳಲು ವಿಮಾನದ ಟಿಕೆಟ್ ಬುಕ್ ಮಾಡಿದ್ದೀವಿ. ಆದರೆ 10 ನಿಮಿಷ , 20 ನಿಮಿಷ ಎಂದು ಸಬೂಬು ಹೇಳಿ ಮುಂದೂಡುತ್ತಾ ಬರುತ್ತಿದ್ದಾರೆ. ಅಧಿವೇಶನದಲ್ಲಿ ಪಾಲ್ಗೊಳ್ಳುವುದು ತಡವಾಗುವುದು ಬೇಸರ ಮೂಡಿಸಿದೆ ಎಂದು ಹೇಳಿದರು.

ಒಟ್ಟು ನಾಲ್ಕು ಗಂಟೆ ವಿಮಾನ ತಡವಾಗಿ ಹೊರಟ ಪರಿಣಾಮ ಮಧ್ಯಾಹ್ನ 2 ಗಂಟೆಗೆ ಸಚಿವರು, ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಬಂದಿಳಿದರು. ಭೋಜನ ವಿರಾಮದವರೆಗೂ ಸಚಿವರಾದ ವಿನಯ್‌ಕುಮಾರ್ ಸೊರಕೆ, ದಿನೇಶ್ ಗುಂಡೂರಾವ್ ಸೇರಿದಂತೆ 20ಕ್ಕೂ ಹೆಚ್ಚು ಶಾಸಕರು ಗೈರು ಹಾಜರಾಗಿದ್ದರು.

Write A Comment