ಕರ್ನಾಟಕ

ಮೌಢ್ಯದ ಬರೆ, ಹಸುಳೆ ಸ್ಥಿತಿ ಗಂಭೀರ

Pinterest LinkedIn Tumblr

ಅನಂತ ಪದ್ಮನಾಭ ರಾವ್, ಬಳ್ಳಾರಿ

moudya

ವಿಜ್ಞಾನ ಎಷ್ಟೇ ಬೆಳೆದರೂ ಮೂಢ ನಂಬಿಕೆಗೆ ಜೋತು ಬೀಳುವ ಜನ ಕಡಿಮೆಯಾಗಿಲ್ಲ. ಹುಟ್ಟಿದ ಮಗುವಿನ ಮೇಲೆ ಕಾಯಿಸಿದ ಸೂಜಿಯಿಂದ ಬರೆ ಎಳೆಯುವ ಮೂಢ ಪದ್ಧತಿ ಉತ್ತರ ಕರ್ನಾಟಕದ ಬಹುತೇಕ ಊರುಗಳಲ್ಲಿ ಈಗಲೂ ಚಾಲ್ತಿಯಲ್ಲಿದೆ. ಕೂಸು ಚೆನ್ನಾಗಿರಲಿ, ಆರೋಗ್ಯ ವೃದ್ಧಿಸಲಿ ಎಂಬ ನಂಬಿಕೆಯಿಂದಲೇ ಹೊಟ್ಟೆ ಮೇಲೆ ಹಾಕಿದ ಬರೆ ಮಗುವೊಂದರ ಜೀವಕ್ಕೆ ಅಪಾಯ ತಂದೊಡ್ಡಿದೆ.

ಹಗರಿಬೊಮ್ಮನಹಳ್ಳಿ ತಾಲೂಕಿನ ಇಟಿಗಿ ಗ್ರಾಮದಲ್ಲಿ ಏಳು ದಿನಗಳ ಹಿಂದೆಯಷ್ಟೇ ಹುಟ್ಟಿದ ಮಗುವಿನ ಹೊಟ್ಟೆ ಮೇಲೆ ಪೋಷಕರು ಕಾಸಿದ ಸೂಜಿಯಿಂದ ನಾಲ್ಕಾರು ಕಡೆ ಬರೆ ಎಳೆದಿದ್ದಾರೆ. ಇದರಿಂದ ತೀವ್ರ ಅಸ್ವಸ್ಥಗೊಂಡಿದ್ದ ಕಂದಮ್ಮ ಸ್ಥಳೀಯ ವಿಮ್ಸ್‌ನ ತೀವ್ರ ನಿಗಾ ಘಟಕದಲ್ಲಿ ಸಾವು, ಬದುಕಿನ ಮಧ್ಯೆ ಹೋರಾಟ ನಡೆಸಿದೆ. ಕೂಸಿನ ಹೊಟ್ಟೆ ಮೇಲೆ ಬರೆ ಹಾಕಿದ ತಪ್ಪಿಗೆ ಕುಟುಂಬದವರು ಮಗುವಿನ ಪ್ರಾಣ ಉಳಿಸಿಕೊಳ್ಳಲು ಹೆಣಗಾಡುತ್ತಿದ್ದಾರೆ.

ಮಗುವಿನ ಚೀರಾಟಕ್ಕೂ ಓಗೋಡದ ಕುಟುಂಬದವರು ತಮ್ಮ ಮುಗ್ಧ ನಂಬಿಕೆಯಂತೆ ಮಗು ಹುಟ್ಟಿದ ಎರಡ್ಮೂರು ದಿನಗಳಲ್ಲೇ ಹೊಟ್ಟೆ ಮೇಲೆ ನಾಲ್ಕಾರು ಕಡೆ ಬರೆ ಎಳೆದಿದ್ದಾರೆ. ಬರೆಯ ತೀವ್ರತೆಗೆ ನಲುಗಿದ ಮಗುವಿಗೆ ಜ್ವರ ಕಾಣಿಸಿಕೊಂಡಿದೆ. ಎರಡ್ಮೂರು ದಿನ ಮನೆಯಲ್ಲೇ ಜ್ವರಕ್ಕೆ ನಾಟಿ ಮದ್ದು ನೀಡಲಾಗಿದೆ. ಜ್ವರ ತೀವ್ರವಾಗುವ ಜತೆಗೆ ಮಗುವಿನ ರಕ್ತದೊತ್ತಡ ಪ್ರಮಾಣವೂ ಗಣನೀಯವಾಗಿ ಕುಸಿದು ಕೋಮಾ ಸ್ಥಿತಿಗೆ ತಲುಪಿದಾಗಲೇ ಹಸುಳೆಯನ್ನು ವಿಮ್ಸ್‌ಗೆ ಕರೆತಂದಿದ್ದಾರೆ.

ವಾರಕ್ಕೆ ಎರಡ್ಮೂರು ಪ್ರಕರಣ:
ರಾಯಚೂರು, ಬಳ್ಳಾರಿ, ಕೊಪ್ಪಳ ಜಿಲ್ಲೆಗಳಿಂದ ವಾರಕ್ಕೆ ಎರಡ್ಮೂರು ಇಂಥ ಬರೆ ಹಾಕಿಸಿಕೊಂಡ ಕಂದಮ್ಮಗಳು ವಿಮ್ಸ್‌ನಲ್ಲಿ ಚಿಕಿತ್ಸೆಗೆ ದಾಖಲಾಗುತ್ತವೆ. ಕಳೆದ ಹಲವು ವರ್ಷಗಳಿಂದ ನೂರಾರು ನವಜಾತ ಶಿಶುಗಳು ಚಿಕಿತ್ಸೆ ಪಡೆದಿವೆ. ಆದರೆ, ಇಂಥ ಪ್ರಕರಣಗಳಲ್ಲಿ ತೀವ್ರ ಅಸ್ವಸ್ಥ ಸ್ಥಿತಿಯಲ್ಲಿರುವ ಮಗುವೊಂದು ಚಿಕಿತ್ಸೆಗೆ ಬಂದಿರುವುದು ಇದೇ ಮೊದಲು. ಬರೆ ಎಳೆಯದಂತೆ ಪಾಲಕರಿಗೆ ಪದೇಪದೆ ತಿಳಿಹೇಳಲಾಗುತ್ತದೆ. ಆದರೂ ಬಹುತೇಕ ಪಾಲಕರು ಮೌಢ್ಯಕ್ಕೆ ಮರುಳಾಗಿ ಮಕ್ಕಳಿಗೆ ಬರೆ ಎಳೆಯುವುದನ್ನು ಮುಂದುವರಿಸಿದ್ದಾರೆ. ನಗರ, ಪಟ್ಟಣ ಪ್ರದೇಶಕ್ಕಿಂತ ಗ್ರಾಮೀಣ ಪ್ರದೇಶದ ನವಜಾತ ಶಿಶುಗಳೇ ಇಂಥ ಮೌಢ್ಯಕ್ಕೆ ಹೆಚ್ಚು ಬಲಿಯಾಗುತ್ತವೆ ಎನ್ನುತ್ತಾರೆ ವಿಮ್ಸ್ ವೈದ್ಯರು.

ಮೌಢನಂಬಿಕೆಯ ಮೂಲ:
”ಬರೆ ಎಳೆದರೆ ಮಕ್ಕಳು ಸದೃಢರಾಗಿ ಬೆಳೆಯುತ್ತಾರೆ. ಸಣ್ಣಪುಟ್ಟ ಅನಾರೋಗ್ಯ ಸಮಸ್ಯೆಗಳು ದೂರವಾಗುತ್ತವೆ. ಹಸಿವು ಚೆನ್ನಾಗಿ ಆಗುತ್ತದೆ. ಮಕ್ಕಳ ಕೈ, ಕಾಲು, ದೇಹ ಸಶಕ್ತವಾಗಿ ಬೆಳೆಯುತ್ತವೆ,” ಎಂಬ ಮೂಢನಂಬಿಕೆಯಿಂದಲೇ ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳ ಗ್ರಾಮೀಣ ಪ್ರದೇಶದ ನವಜಾತ ಶಿಶುಗಳಿಗೆ ಬೆಂಕಿಗೆ ಕಾಸಿದ ಸೂಜಿಯಿಂದ ಹೊಟ್ಟೆಯ ಹೊಕ್ಕಳು ಸುತ್ತಲಿನ ಜಾಗದಲ್ಲಿ ನಾಲ್ಕಾರು ಗೆರೆ ಎಳೆಯಲಾಗುತ್ತದೆ. ಈ ಗೆರೆಗಳು, ಗಾಯಗಳಾಗಿ, ಕೀವು ತುಂಬಿ, ಮಗು ವಾರಗಟ್ಟಲೆ ಅನಾರೋಗ್ಯದಿಂದ ಬಳಲುವುದು ವಾಡಿಕೆ. ಮುಂದೆ ಮಗುವಿನ ಹೊಟ್ಟೆ ಮೇಲೆ ಬರೆಯ ಗಾಯದ ಕಲೆಗಳು ಹಾಗೆ ಉಳಿಯುತ್ತವೆ.

ಕಾಡುವ ತೊಂದರೆಗಳು:
”ಬರೆ ಎಳೆದರೆ ಸಾವು, ನೋವು ಸಂಭವಿಸುವುದಿಲ್ಲವಾದರೂ, ಮಗು ತೀವ್ರ ಜ್ವರದಿಂದ ಬಳಲಿ, ನಿಶ್ಯಕ್ತಿ ಅನುಭವಿಸಲಿದೆ. ರಕ್ತದೊತ್ತಡ ಕಡಿಮೆಯಾಗುತ್ತದೆ. ಉಸಿರಾಟ ತೊಂದರೆಯಿಂದ ಬಳಲುತ್ತದೆ. ಹೊಟ್ಟೆ ಮೇಲೆ ಬರೆ ಎಳೆದ ಮಕ್ಕಳು ಸದೃಢರಾಗಿ ಬೆಳೆಯುತ್ತಾರೆ ಎಂಬುದು ವೈಜ್ಞಾನಿಕವಾಗಿ ಎಲ್ಲೂ ಸಾಬೀತಾಗಿಲ್ಲ. ಮಕ್ಕಳನ್ನು ಆರೋಗ್ಯ ಪೂರ್ಣರಾಗಿ ಬೆಳೆಸಲು, ಕಾಡುವ ನಾನಾ ರೋಗಗಳಿಂದ ಮುಕ್ತರನ್ನಾಗಿ ಮಾಡಲು ವೈದ್ಯಕೀಯ ಪದ್ಧತಿಯಲ್ಲಿ ಹಲವು ಚಿಕಿತ್ಸೆಗಳಿವೆ. ಭ್ರೂಣ ರೂಪದಿಂದ ಹಿಡಿದು, ಮಗು ಬೆಳೆದು ದೊಡ್ಡದಾಗುವವರೆಗೆ ಹಲವು ಚಿಕಿತ್ಸೆ, ಔಷಧಗಳನ್ನು ನಿರಂತರವಾಗಿ ನೀಡಲಾಗುತ್ತಿದೆ. ಇಂಥ ಚಿಕಿತ್ಸೆ ಹಾಗೂ ಔಷಧಗಳು ಮಾತ್ರ ಮಗುವನ್ನು ಸದೃಢರನ್ನಾಗಿ ಬೆಳೆಸುತ್ತವೆ,” ಎಂಬುದು ಮಕ್ಕಳ ತಜ್ಞರ ಅನಿಸಿಕೆಯಾಗಿದೆ.

ಮಗುವಿನ ಸ್ಥಿತಿಯ ಬಗ್ಗೆ ಈಗಲೇ ಏನನ್ನೂ ಹೇಳಲು ಸಾಧ್ಯವಿಲ್ಲ. ಈ ರೀತಿಯ ಪ್ರಕರಣಗಳು ಆಸ್ಪತ್ರೆಗೆ ಬರುತ್ತಿರುತ್ತವೆ. ಆದರೆ ಈ ಮಗುವಿನ ಸ್ಥಿತಿ ಗಂಭೀರವಾಗಿದೆ. ಹುಟ್ಟಿದ ಎರಡ್ಮೂರು ದಿನಕ್ಕೇ ಬರೆ ಎಳೆದಿದ್ದಾರೆ. ಇದರಿಂದ ಜ್ವರ ಬಂದು ಮಗುವಿನ ಆರೋಗ್ಯ ಹದಗೆಟ್ಟಿದೆ. ನಂತರ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದಾರೆ. ಸದ್ಯ ಐಸಿಯುನಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿದೆ.
-ಡಿ.ಶ್ರೀನಿವಾಸ್, ಬಳ್ಳಾರಿ ವಿಮ್ಸ್ ಸೂಪರಿಂಟೆಂಡೆಂಟ್

ತಂತ್ರಜ್ಞಾನ ಸಾಕಷ್ಟು ಬೆಳೆದಿದೆ. ಆದರೂ ಓಬಿರಾಯನ ಕಾಲದ ಆಚರಣೆಗಳಿಗೆ ಹಲವು ಜನ ಜೋತುಬೀಳುತ್ತಿರುವುದು ಮುಂದುವರಿದಿದೆ. ಇದು ನಿಜಕ್ಕೂ ಆತಂಕಕಾರಿ. ಮಗುವಿಗೆ ಮುಂದಿನ ದಿನಗಳಲ್ಲಿ ಒದಗಬಹುದಾದ ಕಾಯಿಲೆಗಳನ್ನು ದೂರ ಮಾಡಲು ಕುರುಡು ಆಚರಣೆಗಳನ್ನೇ ಮುಂದುವರಿಸಿಕೊಂಡು ಹೋಗಲಾಗುತ್ತಿದೆ. ಈ ರೀತಿ ಹೊಟ್ಟೆಯ ಮೇಲೆ ಬರೆ ಹಾಕುವುದರಿಂದ ಮಕ್ಕಳು ದಷ್ಟಪುಷ್ಟವಾಗಿ ಬೆಳೆಯುತ್ತಾರೆ ಎಂಬುದು ಎಲ್ಲೂ ಸಾಬೀತಾಗಿಲ್ಲ ಎಂಬುದನ್ನು ಹಳ್ಳಿ ಜನ ಅರ್ಥೈಸಿಕೊಳ್ಳಬೇಕಿದೆ. ಮುಖ್ಯವಾಗಿ ಪೋಷಕರಲ್ಲಿ ಜಾಗೃತಿ ಹೆಚ್ಚಬೇಕಿದೆ.
-ಎಸ್.ಮಂಜುನಾಥ, ಮೇಡಂ ಕ್ಯೂರಿ ವಿಜ್ಞಾನ ಅಕಾಡೆಮಿ ಅಧ್ಯಕ್ಷ

Write A Comment