ಕರ್ನಾಟಕ

ಬೆಳಗಾವಿಯ ಸುವರ್ಣ ವಿಧಾನಸೌಧವನ್ನು ಮುತ್ತಿಗೆ; ಸರ್ಕಾರದಿಂದ ಬಿಜೆಪಿ ಹೋರಾಟ ಹತ್ತಿಕ್ಕುವ ಯತ್ನ: ಪ್ರಹ್ಲಾದ್ ಜೋಷಿ ಆರೋಪ

Pinterest LinkedIn Tumblr

joshi

ಹುಬ್ಬಳ್ಳಿ, ನ.30: ಡಿಸೆಂಬರ್ 9 ರಂದು ಬೆಳಗಾವಿಯ ಸುವರ್ಣ ವಿಧಾನಸೌಧವನ್ನು ಮುತ್ತಿಗೆ ಹಾಕುವ ಬಿಜೆಪಿಯ ಹೋರಾಟವನ್ನು ಸರ್ಕಾರ ಹತ್ತಿಕ್ಕಲು ಸಜ್ಜಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಷಿ ಆರೋಪಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಳಗಾವಿಯ ನಾಲ್ಕು ದಿಕ್ಕುಗಳಲ್ಲೂ ಬಿಜೆಪಿ ಕಾರ್ಯಕರ್ತರನ್ನು ತಡೆಯಲು ಪೊಲೀಸರು ಸಿದ್ಧತೆ ನಡೆಸಿದ್ದಾರೆ. ಧಮನಕಾರಿ ನೀತಿಯಿಂದ ತಮ್ಮ ಪ್ರತಿಭಟನೆಯನ್ನು ಹತ್ತಿಕ್ಕಲು ಸಾಧ್ಯವಿಲ್ಲ. ನಾವು ಹೋರಾಟದಿಂದಲೇ ಮೇಲೆ ಬಂದವರು. ಕಾನೂನಾತ್ಮಕ ಹೋರಾಟಕ್ಕೂ ಬಿಜೆಪಿ ಸಿದ್ಧವಾಗಿದೆ ಎಂದು ಹೇಳಿದರು.

ಡಿ.9ರೊಳಗೆ ಸರ್ಕಾರ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸಿದರೆ ನಾವು ಪ್ರತಿಭಟನೆ ಮಾಡುವುದಿಲ್ಲ. ಇಲ್ಲದಿದ್ದರೆ ಯಾವುದೇ ಕಾರಣಕ್ಕೂ ಹೋರಾಟದಿಂದ ಹಿಂದೆ ಸರಿಯುವುದಿಲ್ಲ ಎಂದರು. ಕಲಬುರಗಿಯಲ್ಲೂ ಪ್ರತಿಭಟನೆ ಮಾಡುತ್ತಿದ್ದ ಬಿಜೆಪಿ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ. ಮುಖ್ಯಮಂತ್ರಿಗೆ ಮನವಿ ಸಲ್ಲಿಸಲು ಅವಕಾಶ ನೀಡಲಿಲ್ಲ ಎಂದು ಆರೋಪಿಸಿದರು.

ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಾತನಾಡಿ, ಡಿ.9ರಂದು ಸುವರ್ಣವಿಧಾನಸೌಧ ಮುತ್ತಿಗೆ ಹಾಕುವ ಪ್ರತಿಭಟನೆಯಲ್ಲಿ 50 ಸಾವಿರಕ್ಕೂ ಹೆಚ್ಚು ಬಿಜೆಪಿ ಕಾರ್ಯಕರ್ತರು ಪಾಲ್ಗೊಳ್ಳಲಿದ್ದಾರೆ. ರಾಜ್ಯ ಸರ್ಕಾರದ ವೈಫಲ್ಯಗಳನ್ನು ಖಂಡಿಸಿ ಪ್ರತಿಭಟನೆ ನಡೆಸಲಾಗುವುದು, ರಾಜ್ಯ ಸರ್ಕಾರದಲ್ಲಿ ಪ್ರತ್ಯೇಕ ಗುಂಪುಗಳಾಗಿದ್ದು, ಅಭಿವೃದ್ಧಿ ಕುಂಠಿತವಾಗಿದೆ. ಹಿಂದುಳಿದ ಪ್ರದೇಶಗಳ ಅಭಿವೃದ್ಧಿಗೆ ನಂಜುಂಡಪ್ಪ ವರದಿ ಅನುಷ್ಠಾನವು ಸಮಪರ್ಕವಾಗಿ ಆಗಿಲ್ಲ. ಈರುಳ್ಳಿ, ಮೆಕ್ಕೆಜೋಳ ಸೇರಿದಂತೆ ವಿವಿಧ ಬೆಳೆಗಳು ಬೆಲೆ ಕುಸಿತಕ್ಕೆ ಒಳಗಾಗಿದ್ದು, ರೈತರು ಸಂಕಷ್ಟದಲ್ಲಿದ್ದಾರೆ. ಕೂಡಲೇ ಸರ್ಕಾರ ಬೆಂಬಲ ಬೆಲೆ ನಿಗದಿಪಡಿಸಿ ಖರೀದಿ ಕೇಂದ್ರಗಳನ್ನು ತೆರೆಯಬೇಕು, ರೈತರ ಸಂಕಷ್ಟಕ್ಕೆ ಧಾವಿಸಬೇಕು ಎಂದು ಒತ್ತಾಯಿಸಿದರು. ಸಕ್ಕರೆ ಕಾರ್ಖಾನೆಗಳು ಕಳೆದೊಂದು ವರ್ಷದಿಂದ ಬಾಕಿ ಉಳಿಸಿಕೊಂಡಿರುವ ಹಣವನ್ನು ಕೂಡಲೇ ಕಬ್ಬು ಬೆಳೆಗಾರರಿಗೆ ಪಾವತಿಸಬೇಕು ಎಂದು ಒತ್ತಾಯಿಸಿದರು.

Write A Comment