ಕರ್ನಾಟಕ

ಫೇಸ್‌ಬುಕ್‌ನಲ್ಲಿ ಅವಹೇಳನಕಾರಿ ಕಮೆಂಟ್ ಪ್ರಕರಣ: ಕಮೆಂಟ್ ಮೂಲ ಪತ್ತೆಗೆ ಫೇಸ್‌ಬುಕ್ ಪ್ರಧಾನ ಕಚೇರಿಗೇ ಸಿಐಡಿ ಪತ್ರ

Pinterest LinkedIn Tumblr

vr-bhat

ಬೆಂಗಳೂರು: ಫೇಸ್‌ಬುಕ್‌ನಲ್ಲಿ ಸಾಮಾಜಿಕ ಕಾರ್ಯಕರ್ತೆ ಪ್ರಭಾ ಬೆಳವಂಗಲ ಅವರ ಬಗ್ಗೆ ವಿ.ಆರ್.ಭಟ್ ಮಾಡಿದ ಅವಹೇಳನಕಾರಿ ಕಮೆಂಟ್ ಪ್ರಕರಣ ಸಂಬಂಧ ಸಿಐಡಿ ಸೈಬರ್ ಘಟಕದ ಪೊಲೀಸರು ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿರುವ ಫೇಸ್‌ಬುಕ್ ಪ್ರಧಾನ ಕಚೇರಿಗೆ ಪತ್ರ ಬರೆದಿದ್ದಾರೆ.

ಎರಡು ತಿಂಗಳ ಹಿಂದೆಯೇ ಪತ್ರ ಬರೆಯಲಾಗಿದ್ದು, ಪೊಲೀಸರು ವರದಿಯ ನಿರೀಕ್ಷೆಯಲ್ಲಿದ್ದಾರೆ. ಫೇಸ್‌ಬುಕ್ ಬಳಕೆದಾರರೊಬ್ಬರ ಫೋಸ್ಟ್‌ಗೆ ಕಮೆಂಟ್ ಹಾಕಲಾಗಿರುವ ಸಮಯ, ದಿನಾಂಕ, ವಾರ ಹಾಗೂ ಅದರಲ್ಲಿರುವ ವಿವರಗಳ ಬಗ್ಗೆ ಸಂಪೂರ್ಣವಾದ ಮಾಹಿತಿಗಾಗಿ ಚಂದ್ರ ಬಡಾವಣೆ ಪೊಲೀಸರು ಸೈಬರ್ ಘಟಕದ ನೆರವು ಕೋರಿದ್ದರು.

ಈ ಬಗ್ಗೆ ಅಧಿಕೃತ ದಾಖಲೆಗಳನ್ನು ಪಡೆದುಕೊಳ್ಳಲು ಸೈಬರ್ ಘಟಕ ಫೇಸ್‌ಬುಕ್ ಪ್ರಧಾನ ಕಚೇರಿಯನ್ನು ಸಂಪರ್ಕಿಸಿದೆ. ಮಾಹಿತಿ ನೀಡಲು ನಾಲ್ಕು ತಿಂಗಳು ಕಾಲಾವಾಕಾಶ ಬೇಕು ಎಂದು ಪ್ರಧಾನ ಕಚೇರಿಯಿಂದ ಉತ್ತರ ಬಂದಿದೆ.

ಹೈದ್ರಾಬಾದ್‌ನಲ್ಲಿರುವ ವಿಧಿವಿಜ್ಞಾನ ಪ್ರಯೋಗಲಾಯಕ್ಕೂ ಪ್ರಕರಣದ ವಿವರವಾದ ಸಿ.ಡಿಯನ್ನು ಕಳುಹಿಸಲಾಗಿದೆ. ಎರಡೂ ವರದಿಗಳು ಬರುತ್ತಿದ್ದಂತೆ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಪಂಚದ ಇನ್ನೂರಕ್ಕೂ ಅಧಿಕ ರಾಷ್ಟಗಳಲ್ಲಿ 100 ಕೋಟಿಗೂ ಅಧಿಕ ಮಂದಿ ಫೇಸ್‌ಬುಕ್ ಬಳಸುತ್ತಾರೆ. ಕಮೆಂಟ್ ಸೇರಿದಂತೆ ಹಲವು ವಿಚಾರಗಳ ಬಗ್ಗೆ ವಿವಿಧ ರಾಷ್ಟ್ರಗಳ ಸಂಸ್ಥೆಗಳಿಂದ ಮಾಹಿತಿ ಕೋರಿ ಪತ್ರ ಬರುತ್ತವೆ. ಹೀಗಾಗಿ ಸರದಿ ಪ್ರಕಾರ ಮಾಹಿತಿ ನೀಡಲು 4 ತಿಂಗಳ ಕಾಲವಕಾಶ ಬೇಕು ಎಂದು ಫೇಸ್‌ಬುಕ್ ತಿಳಿಸಿದೆ ಎಂದು ತಿಳಿದು ಬಂದಿದೆ.

ಕಂಪ್ಯೂಟರ್ ಅಥವಾ ಮೊಬೈಲ್ ಫೋನ್ ಮೂಲಕ ಕಮೆಂಟ್ ಹಾಕಲಾಗಿದೆಯಾ? ಯಾವ ಸ್ಥಳದಿಂದ ಕಮೆಂಟ್ ಮಾಡಲಾಗಿದೆಯ ಕಮೆಂಟ್ ಮಾಡಿದ ವ್ಯಕ್ತಿಯ ಅಕೌಂಟ್‌ನಿಂದಲೇ ಮಾಡಲಾಗಿದೆಯಾ ಅಥವಾ ಹ್ಯಾಕ್ ಮಾಡಿ ಕಮೆಂಟ್ ಹಾಕಲಾಗಿದೆಯಾ ಎನ್ನುವ ನಿಖರ ಮಾಹಿತಿಯನ್ನು ಫೇಸ್‌ಬುಕ್ ಒದಗಿಸಲಿದೆ. ಫೇಸ್‌ಬುಕ್‌ಗೆ ಸಂಬಂಧಿಸಿದ ಪ್ರಕರಣ ಆಗಿರುವುದಿಂದ ಸಂಸ್ಥೆಯಿಂದಲೇ ಅಧಿಕೃತ ಮಾಹಿತಿ ಪಡೆದುಕೊಂಡರೆ ನ್ಯಾಯಾಲಯ ದಾಖಲೆಯನ್ನು ಮಾನ್ಯ ಮಾಡುತ್ತದೆ. ಹೀಗಾಗಿ ಪೊಲೀಸರು ಫೇಸ್‌ಬುಕ್‌ನ ಅಧಿಕೃತ ಮಾಹಿತಿಗಾಗಿ ಕಾಯುತ್ತಿದ್ದಾರೆ.

ಪ್ರಕರಣ ಏನು?: 2014ರ ಜುಲೈ 27ರಂದು ಪುರೋಹಿತಶಾಹಿ ಪದ್ಧತಿ ವಿರೋಧಿಸಿ ತಮ್ಮ ಅಕೌಂಟ್‌ನಲ್ಲಿ ಪ್ರಭಾ ಬೆಳವಂಗಲ ಅವರು ಪೋಸ್ಟ್ ಮಾಡಿದ್ದರು. ಅದನ್ನು ಟೀಕಿಸುವ ಭರದಲ್ಲಿ ವಿ.ಆರ್.ಭಟ್, ಪ್ರಭಾ ಅವರ ಬಗ್ಗೆ ಅವಹೇಳನಕಾರಿ ಕಮೆಂಟ್ ಮಾಡಿದ್ದರು. ಹೀಗಾಗಿ ಪ್ರಬಾ ಅವರು ಚಂದ್ರ ಬಡಾವಣೆ ಠಾಣೆಯಲ್ಲಿ ದೂರು ನೀಡಿದ್ದರು. ಮಾಹಿತಿ ತಂತ್ರಜ್ಞಾನ ಕಾಯ್ದೆ, ಐಪಿಸಿ ಕಲಂ 504, 506, 153(ಎ) ಹಾಗೂ 295 ಅನ್ವಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿದ್ದರು.

Write A Comment