ಕರ್ನಾಟಕ

ನಿತ್ಯಾನಂದ ಸ್ವಾಮೀಜಿ ಲೈಂಗಿಕ ಸಾಮರ್ಥ್ಯ ಪರೀಕ್ಷೆ: ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ರಕ್ತ, ಮೂತ್ರ ಮಾದರಿ

Pinterest LinkedIn Tumblr

nityananda_godman_1_0ರಾಮನಗರ: ಬಿಡದಿ ಧ್ಯಾನಪೀಠದ ನಿತ್ಯಾನಂದ ಸ್ವಾಮೀಜಿಯು ತನ್ನ ಲೈಂಗಿಕ ಸಾಮರ್ಥ್ಯ­ವನ್ನು ಕಡಿಮೆ ಮಾಡುವ ಯಾವುದಾ­ದರೂ ಔಷಧಿಯನ್ನು ಸೇವಿಸಿದ್ದಾರೆಯೇ ಎಂಬುದನ್ನು ಪತ್ತೆ ಮಾಡಲು ಅವರ ರಕ್ತ ಮತ್ತು ಮೂತ್ರದ ಮಾದರಿಗಳನ್ನು ವಿಧಿ ವಿಜ್ಞಾನ  ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಎಂಬ ವಿಷಯವನ್ನು ಸಿಐಡಿ ಪೊಲೀಸರು ಮಂಗಳವಾರ ರಾಮನಗರ ನ್ಯಾಯಾಲಯಕ್ಕೆ ಸಲ್ಲಿಸಿ­ರುವ ವೈದ್ಯಕೀಯ ವರದಿಯಲ್ಲಿ ಹೇಳಲಾಗಿದೆ.

ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಈ ಕುರಿತು ಸೂಕ್ತ ವ್ಯವಸ್ಥೆ ಇಲ್ಲದ ಕಾರಣ, ಹೆಚ್ಚಿನ ಪರೀಕ್ಷೆ ಅಗತ್ಯವಿರುವುದರಿಂದ ವಿಧಿ ವಿಜ್ಞಾನ ಪ್ರಯೋಗಾ­ಲಯಕ್ಕೆ ರವಾನಿಸಲಾಗಿದೆ. ನಿತ್ಯಾನಂದ ಸ್ವಾಮೀಜಿ ಅವರು ರಕ್ತ­ದೊತ್ತಡ ಮತ್ತು ಮಧುಮೇಹಕ್ಕೆ ಸಂಬಂಧಿ­ಸಿ­ದಂತೆ ಮಾತ್ರೆ­ಗಳನ್ನು ಸೇವಿಸುತ್ತಿರುವುದರಿಂದ ಲೈಂಗಿಕ ಕ್ರಿಯೆ ನಡೆಸುವ ಸಾಮರ್ಥ್ಯ ಕುಂದಿರಬಹುದು ಎಂದು ವೈದ್ಯರ ತಂಡ ಅಭಿಪ್ರಾಯ ಪಟ್ಟಿದೆ.

ನಿತ್ಯಾನಂದ ಸ್ವಾಮೀಜಿ ಲೈಂಗಿಕ ಕ್ರಿಯೆಯಲ್ಲಿ ತೊಡ­ಗಿಸಿ­ಕೊಳ್ಳಲು ಅಸ­ಮರ್ಥ ಎಂಬುದಕ್ಕೆ ಯಾವುದೇ ಪುರಾವೆ ವೈದ್ಯಕೀಯ ತಪಾಸಣೆ ವೇಳೆ ಲಭ್ಯ­ವಾಗಿಲ್ಲ ಎಂದು ಡಾ.ಸಿ.ಆರ್. ಚಂದ್ರಶೇಖರ್, ಡಾ.ಕೆ.ಎಂ. ವೀರ­ಣ್ಣಗೌಡ, ಡಾ.ಎಸ್.ವೆಂಕಟರಾಘವ, ಡಾ.ಎಚ್. ಚಂದ್ರಶೇಖರ್ ಅವರು ಅಭಿಪ್ರಾಯ­ಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ನಿತ್ಯಾನಂದ ಸ್ವಾಮೀಜಿ ತನ್ನ ವಯಸ್ಸಿಗೆ ತಕ್ಕಂತೆ ದೈಹಿಕ ಬೆಳವಣಿಗೆ ಹೊಂದಿದ್ದಾರೆ. ಅವರ ವೃಷಣಗಳು ಮತ್ತು ಶಿಶ್ನ ವಯಸ್ಸಿಗೆ ತಕ್ಕಂತೆ ಸಹಜ ಬೆಳವಣಿಗೆ ಕಂಡಿವೆ. ಶಿಶ್ನದ ‘ಡೋಪ್ಲರ್’ ಪರೀಕ್ಷೆಗೆ ನಿತ್ಯಾನಂದ ಒಪ್ಪಿಗೆ ನೀಡದ ಕಾರಣ ಮತ್ತಷ್ಟು ನಿಖರ ಅಂಶಗಳು ಲಭ್ಯವಾಗಿಲ್ಲ ಎಂದು ವೈದ್ಯರು ಅಭಿಪ್ರಾಯ­ಪಟ್ಟಿದ್ದಾರೆ.

ಅಲ್ಲದೆ ಅವರು ಯಾವುದೇ ಅಸ್ವಾಭಾ­ವಿಕ ಲೈಂಗಿಕ ಕ್ರಿಯೆಯಲ್ಲಿ ತೊಡಗಿಸಿ­ಕೊಂಡಿರುವ ಬಗ್ಗೆಯೂ ಕುರುಹು­­ಗಳು ಲಭ್ಯವಾಗಿಲ್ಲ ಎಂಬ ಅಂಶವನ್ನು ವರದಿಯಲ್ಲಿ ಪ್ರಸ್ತಾಪಿಸಿದ್ದಾರೆ ಎಂದು ಗೊತ್ತಾಗಿದೆ.

ಆಶ್ರಮದ ಪ್ರಕಟಣೆ: ಲೈಂಗಿಕ ಚಟುವಟಿಕೆ ನಡೆಸಲು ನಿತ್ಯಾನಂದ ಸ್ವಾಮೀಜಿ ಸಮರ್ಥ ಎಂಬ ಅಭಿಪ್ರಾಯ­ವನ್ನು ವೈದ್ಯಕೀಯ ವರದಿ­ಯಲ್ಲಿ ಎಲ್ಲಿಯೂ ವೈದ್ಯರು ತಿಳಿಸಿಲ್ಲ. ಅಲ್ಲದೆ ಲೈಂಗಿಕ ಕ್ರಿಯೆಯಿಂದ ಬರುವ ‘ಹರ್ಪೆಸ್‌’ ಸೇರಿದಂತೆ ಯಾವುದೇ ಕಾಯಿಲೆಯೂ ಸ್ವಾಮೀಜಿಗೆ ಇಲ್ಲ ಎಂಬುದನ್ನು ವರದಿ ದೃಢಪಡಿಸಿದೆ ಎಂದು ಬಿಡದಿ ಧ್ಯಾನಪೀಠ ಆಶ್ರಮದ ಪ್ರಕಟಣೆ ತಿಳಿಸಿದೆ.

Write A Comment