ಕರ್ನಾಟಕ

ಋತುಮತಿಯಾದ ಗೊಲ್ಲರಹಟ್ಟಿ ಬಾಲಕಿಗೆ ಬಹಿಷ್ಕಾರ

Pinterest LinkedIn Tumblr

pvec281114mkm2ep

ಮೊಳಕಾಲ್ಮುರು: ಋತುಮತಿಯಾದ ಬಾಲಕಿಗೆ ಮನೆ ಪ್ರವೇಶ ಬಹಿಷ್ಕರಿಸುವ ಮೌಢ್ಯಾ­ಚರಣೆಯ ಘಟನೆ ಗುರುವಾರ ತಾಲ್ಲೂಕಿನ ಕೊಂಡ್ಲಹಳ್ಳಿಯಲ್ಲಿ ಬೆಳಕಿಗೆ ಬಂದಿದೆ.

ಗ್ರಾಮದ ಗೊಲ್ಲರಹಟ್ಟಿಯಲ್ಲಿರುವ ದಂಪತಿಯ 12 ವರ್ಷದ ಬಾಲಕಿ­ಯೊಬ್ಬಳು ಋತುಮತಿಯಾಗಿದ್ದ ಕಾರಣ ಗೊಲ್ಲರಹಟ್ಟಿಯಲ್ಲಿ ನಡೆದು ಕೊಂಡು ಬಂದಿದೆ ಎನ್ನಲಾದ ಮೂಢ ನಂಬಿಕೆ ಪ್ರಕಾರ ಮನೆ ಹೊರಗಡೆ ಹೊಂಗೆ ಹಾಗೂ ಬೇವಿನ ರೆಂಬೆಯ ತಾತ್ಕಾಲಿಕ ಪದಿ (ಕುಟೀರ) ನಿರ್ಮಿಸಿ ಅದರಲ್ಲಿ ವಾಸಕ್ಕೆ ಇಡಲಾಗಿತ್ತು.

ಈ ಬಗ್ಗೆ ಮಾಹಿತಿ ಹೊರೆತು ತಾಲ್ಲೂಕು ಶಿಶು ಅಭಿವೃದ್ಧಿ ಅಧಿಕಾರಿ ಜಿ.ಹೊನ್ನಪ್ಪ ಸ್ಥಳಕ್ಕೆ ಧಾವಿಸಿ, ಪೋಷಕರು ಹಾಗೂ ಸ್ಥಳೀಯರ ಮನವೊಲಿಸಿದರು.  ‘ಇಂಥ   ಆಚರಣೆ ಕಾನೂನು ಬಾಹಿರವಾಗಿದೆ. ಈ ಆಚರ­ಣೆ­ಯಿಂದ ಏನೂ ಅರಿಯದ ಬಾಲಕಿಗೆ ತೊಂದರೆಯಾಗುತ್ತಿದೆ. ಇದನ್ನು ತಪ್ಪಿಸ­ಬೇಕಾದ ಪೋಷಕರೇ ಇದಕ್ಕೆ ಮುಂದಾಗಿ­ರುವುದು ಸರಿಯಲ್ಲ’ ಎಂದು ಮನವೊಲಿಸಿದರು.

ಮನೆಯಲ್ಲಿ ಎಲ್ಲರ ಜತೆ ಇರಬೇಕಾದ ಬಾಲಕಿ ಪ್ರಕೃತಿದತ್ತವಾಗಿ ಋತುಮತಿ­ಯಾದ ಕಾರಣಕ್ಕೆ ಹೊರಗಡೆ ವಾಸ ಮಾಡಿಸುವುದು ಸರಿಯಲ್ಲ. ವಿಷಜಂತು­ಗಳ ಕಡಿತಕ್ಕೆ ಒಳಗಾದರೆ ಯಾರು ಹೊಣೆ? ಮೂಢನಂಬಿಕೆಯಿಂದ ಹೊರ­ಬಂದು ಮಾದರಿ ಸಮಾಜ ಸ್ಥಾಪನೆಗೆ ಸಹಕರಿಸಿ ಎಂದು ಮನವೊಲಿಸಿದ್ದರಿಂದ ಪೋಷ ಕರು ಪದಿಯನ್ನು ತೆಗೆದು ಹಾಕಿ ಮೂಢ ನಂಬಿಕೆ ಕೈಬಿಡುವುದಾಗಿ ಭರವಸೆ ನೀಡಿದರು.
ಗ್ರಾಮ ಪಂಚಾಯ್ತಿ ಅಧ್ಯಕ್ಷ ಸುರೇಶ್‌, ಪಿಡಿಒ ಬಸರಾಜ್‌, ಅಂಗನವಾಡಿ, ಆಶಾ ಕಾರ್ಯಕರ್ತೆ ಯರು ಉಪಸ್ಥಿತರಿದ್ದರು.

Write A Comment