ಮಡಿಕೇರಿ: ಜೀವವೈವಿಧ್ಯ ತಾಣವಾಗಿರುವ ಪಶ್ಚಿಮಘಟ್ಟ ಸಂರಕ್ಷಣೆ ಬಗ್ಗೆ ಡಾ.ಕಸ್ತೂರಿರಂಗನ್ ಸಮಿತಿ ನೀಡಿರುವ ವರದಿಯನ್ನು ತೀವ್ರವಾಗಿ ವಿರೋಧಿಸುತ್ತಿರುವ ಕೊಡಗು ಜಿಲ್ಲೆಯ ಜನರ ಅಹವಾಲು ಆಲಿಸಲು ರಾಜ್ಯಮಟ್ಟದ ತಜ್ಞರ ಸಮಿತಿಯ ಸದಸ್ಯರು ನ. 28ರಂದು ಮಡಿಕೇರಿಗೆ ಆಗಮಿಸಲಿದ್ದಾರೆ.
ಇನ್ನೊಂದೆಡೆ, ಸಮಿತಿ ಸದಸ್ಯರು ಭೇಟಿ ನೀಡಿದ ಸಂದರ್ಭದಲ್ಲಿ ಕಸ್ತೂರಿರಂಗನ್ ವರದಿ ವಿರೋಧಿ ಸಮಿತಿಯ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲು ಕೆಲವು ಸಂಘಟನೆಗಳು ನಿರ್ಧರಿಸಿವೆ.
ರಾಜ್ಯಮಟ್ಟದ ತಜ್ಞರ ಸಮಿತಿಯ ಸದಸ್ಯರಾಗಿರುವ ಬ್ರಿಜೇಶ್‌ಕುಮಾರ್ ದೀಕ್ಷಿತ್ ಹಾಗೂ ವಿಪಿನ್ ಸಿಂಗ್ ಅವರು ಮಡಿಕೇರಿಗೆ ಆಗಮಿಸಲಿದ್ದು, ಅಂದು ಮಧ್ಯಾಹ್ನ 3 ಗಂಟೆಗೆ ಜಿಲ್ಲಾಧಿಕಾರಿ ಕಚೇರಿಯ ಕೋಟೆ ವಿಧಾನಸಭಾಂಗಣದಲ್ಲಿ ಸಾರ್ವಜನಿಕರ ಅಹವಾಲುಗಳನ್ನು ಆಲಿಸಲಿದ್ದಾರೆ.
ಬರುವ ಕುರಿತು ‘ಪ್ರಜಾವಾಣಿ’ಗೆ ಖಚಿತಪಡಿಸಿರುವ ಬ್ರಿಜೇಶ್‌ಕುಮಾರ್ ದೀಕ್ಷಿತ್ ಅವರು, ‘ಪರಿಸರ ಸೂಕ್ಷ್ಮ ವಲಯಕ್ಕೆ ಸಂಬಂಧಿಸಿದಂತೆ ಸಾರ್ವಜನಿಕರ ಅಹವಾಲು ಪಡೆಯಲು ಬರುತ್ತಿದ್ದೇವೆ. ಜನರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ಸ್ವತಂತ್ರರಾಗಿದ್ದಾರೆ. ಅವರ ಅಭಿಪ್ರಾಯಗಳನ್ನು ಸಂಗ್ರಹಿಸಿ ಮುಂದಿನ ವಾರ ಸರ್ಕಾರದ ಮುಂದೆ ಇಡುತ್ತೇವೆ’ ಎಂದು ಹೇಳಿದರು.
ಜಿಲ್ಲಾಧಿಕಾರಿ ಅನುರಾಗ್ ತಿವಾರಿ ಮಾತನಾಡಿ, ‘ಜಿಲ್ಲೆಯ ಜನರ ಅಭಿಪ್ರಾಯವನ್ನು ಪಡೆಯಲು ನೇರವಾಗಿ ರಾಜ್ಯ ಸಮಿತಿ ಸದಸ್ಯರೇ ಇಲ್ಲಿಗೆ ಆಗಮಿಸುತ್ತಿದ್ದಾರೆ. ಜನರು ಮುಕ್ತವಾಗಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಬಹುದು. ಆಕ್ಷೇಪಣೆ ಅಥವಾ ಸಹಮತ ಯಾವುದಾದರೂ ಸರಿ, ಲಿಖಿತವಾಗಿ ನೀಡಿದರೆ ಒಳ್ಳೆಯದು’ ಎಂದರು.
‘ಈ ಸಭೆಯನ್ನು ಸಂಪೂರ್ಣವಾಗಿ ವಿಡಿಯೊ ಚಿತ್ರೀಕರಣ ಮಾಡಲಾಗುವುದು. ಇದರ ಒಂದು ಪ್ರತಿಯನ್ನು ಸರ್ಕಾರಕ್ಕೆ ಕಳುಹಿಸಿಕೊಡುತ್ತೇವೆ. ಸಾರ್ವಜನಿಕರು ತಮ್ಮ ಅಭಿಪ್ರಾಯವನ್ನು ತಿಳಿಸಬೇಕು. ಯಾವುದೇ ರೀತಿಯ ಗಲಾಟೆಗೆ ಅವಕಾಶ ನೀಡುವುದಿಲ್ಲ. ಸೂಕ್ತ ಪೊಲೀಸ್ ಬಂದೋಬಸ್ತ್ ಮಾಡಲಾಗುವುದು’ ಎಂದು ಹೇಳಿದರು.
ಸಮಿತಿಯ ಶಿಫಾರಸು: ವಿಶಿಷ್ಟ ಜೀವ ವೈವಿಧ್ಯ ಹೊಂದಿರುವ ಪಶ್ಚಿಮಘಟ್ಟವನ್ನು ಸಂರಕ್ಷಿಸಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಕಸ್ತೂರಿರಂಗನ್ ಸಮಿತಿಯು ವರದಿ ನೀಡಿದೆ. ಪಶ್ಚಿಮಘಟ್ಟದ ಸುತ್ತಲಿನ ಪ್ರದೇಶವನ್ನು ಪರಿಸರ ಸೂಕ್ಷ್ಮ ಪ್ರದೇಶವೆಂದು ಗುರುತಿಸಿದ್ದು, ಈ ಪ್ರದೇಶದಲ್ಲಿ ಗಣಿಗಾರಿಕೆ ನಿಷೇಧಿಸುವುದು, ಪರಿಸರದ ಮೇಲೆ ಹಾನಿಯುಂಟು ಮಾಡುವ ಕೈಗಾರಿಕೆಗಳನ್ನು ನಿಷೇಧಿಸುವುದು,
ನಗರೀಕರಣ ಮತ್ತು ಅಭಿವೃದ್ಧಿ ಕಾಮಗಾರಿಗಳ ಮೇಲೆ ನಿಯಂತ್ರಣ, ಕೃಷಿಯಲ್ಲಿ ರಾಸಾಯನಿಕ ಕೀಟನಾಶಕ ಬಳಸದಂತೆ ನಿಷೇಧ, ಜಲವಿದ್ಯುತ್ ಸ್ಥಾವರ ಹಾಗೂ ದೊಡ್ಡ ಪ್ರಮಾಣದ ಕಟ್ಟಡಗಳ ನಿರ್ಮಾಣಕ್ಕೆ ನಿಷೇಧ ಸೇರಿದಂತೆ ಹಲವು ಶಿಫಾರಸುಗಳನ್ನು ಮಾಡಿದೆ.
ಸಮಿತಿಯು ಗುರುತಿಸಿರುವ ಪರಿಸರ ಸೂಕ್ಷ್ಮ ವಲಯದ ವ್ಯಾಪ್ತಿಯಲ್ಲಿ ಕೊಡಗು ಸೇರಿದಂತೆ ರಾಜ್ಯದ ಹತ್ತು ಜಿಲ್ಲೆಗಳು ಸೇರ್ಪಡೆಯಾಗಿದ್ದು, ಒಟ್ಟು 1,550 ಗ್ರಾಮಗಳು ಇದರ ವ್ಯಾಪ್ತಿಯೊಳಗೆ ಬರುತ್ತವೆ. ಕೊಡಗಿನ 53 ಗ್ರಾಮಗಳು ಇದಕ್ಕೆ ಒಳಪಟ್ಟಿವೆ.
ವಿರೋಧ: ವರದಿಯ ಶಿಫಾರಸುಗಳನ್ನು ಜಾರಿಗೆ ತಂದರೆ ಇಲ್ಲಿ ವಾಸವಾಗಿರುವ ಜನರಿಗೆ ತೊಂದರೆಯಾಗುತ್ತದೆ. ಕಲ್ಲು ಗಣಿಗಾರಿಕೆ ಹಾಗೂ ಮರಳು ಗಣಿಗಾರಿಕೆ ಮೇಲೆ ನಿಷೇಧ ಹೇರಿದರೆ ಕಟ್ಟಡ ಕಾಮಗಾರಿಗಳು, ಅಭಿವೃದ್ಧಿ ಕಾಮಗಾರಿಗಳನ್ನು ಮಾಡುವುದು ಹೇಗೆ? ರಾಸಾಯನಿಕ, ಕೀಟನಾಶಕಗಳ ಮೇಲೆ ನಿಷೇಧ ಹೇರಿದರೆ ಕೃಷಿ ಮಾಡುವುದು ಹೇಗೆ? ಮರ ಕಡಿಯುವುದರ ಮೇಲೆ ನಿರ್ಬಂಧ ವಿಧಿಸಿದರೆ ಮನೆ ಕಟ್ಟುವುದು ಹೇಗೆ ಎಂದು ಜನರು ಆತಂಕಕ್ಕೆ ಒಳಗಾಗಿದ್ದಾರೆ.