ಕರ್ನಾಟಕ

ರಾಜ್ಯಕ್ಕೆ ಕಾಲಿಟ್ಟಿದೆ ಗ್ಯಾಸ್ ಗ್ಯಾಂಗ್ರಿನ್ ಎಂಬ ಮಾರಕ ರೋಗ

Pinterest LinkedIn Tumblr

gangrin

ಎಚ್.ಡಿ.ಕೋಟೆ, ನ.23: ಭೀತಿ ಹುಟ್ಟಿಸಿರುವ ಎಬೋಲಾ ಎಂಬ ಮಾರಕ ರೋಗ ನಿಯಂತ್ರಣಕ್ಕೆ ಹರಸಾಹಸ ಮಾಡುತ್ತಿರುವ ಬೆನ್ನಲ್ಲೇ ಈಗ ಮತ್ತೊಂದು ಹೊಸ ರೋಗ ಕಾಣಿಸಿಕೊಂಡು ವೈದ್ಯಕೀಯ ಲೋಕವನ್ನೇ ತಲ್ಲಣಗೊಳಿಸಿದೆ. ಗ್ಯಾಸ್‌ಗ್ಯಾಂಗ್ರಿನ್ ಎಂಬ ರೋಗ ಮೈಸೂರು ಜಿಲ್ಲೆಯ ಎಚ್.ಡಿ.ಕೋಟೆ ತಾಲ್ಲೂಕಿನಲ್ಲಿ ಕಾಣಿಸಿಕೊಂಡು ವ್ಯಕ್ತಿಯೊಬ್ಬನನ್ನು ಬಲಿ ಪಡೆದಿದೆ.

ದೇಹದ ಮಾಂಸಖಂಡಗಳೆಲ್ಲಾ ಕೊಳೆತಂತೆ ಮಾಡಿ ಯಾವುದೇ ಔಷಧ ನೀಡಿದರೂ ವ್ಯತಿರಿಕ್ತ ಪರಿಣಾಮ ಬೀರಿ ವ್ಯಕ್ತಿ ಸಾಯುವಂತೆ ಮಾಡುವ ಮಾರಕ ಕಾಯಿಲೆ ರಾಜ್ಯದಲ್ಲಿ ಈವರೆಗೆ ಮೂವರನ್ನು ಬಲಿ ಪಡೆದಿದೆ ಎಂದು ಸೆಂಟ್‌ಜಾನ್ ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ. ಈ ರೋಗ ಉಲ್ಭಣಗೊಂಡ ವ್ಯಕ್ತಿಯನ್ನು ಮುಟ್ಟಿದರೆ ಮತ್ತೊಬ್ಬರಿಗೆ ಈ ಕಾಯಿಲೆ ಹರಡುತ್ತದೆ.

ಇದನ್ನು ವೈದ್ಯಕೀಯ ಭಾಷೆಯಲ್ಲಿ ಗ್ಯಾಸ್‌ಗ್ಯಾಂಗ್ರಿನ್ ಎಂದು ಹೇಳಲಾಗುತ್ತದೆ. ಸದ್ಯ ಇದಕ್ಕೆ ಚಿಕಿತ್ಸೆ ಇಲ್ಲ. ಇದಕ್ಕೆ ನೀಡುವ ರೋಗನಿರೋಧಕ ಔಷಧ ರೋಗಿಯ ದೇಹದಲ್ಲಿ ವ್ಯತಿರಿಕ್ತ ಪರಿಣಾಮ ಭೀರಿ ರೋಗಿ ಸಾಯುವುದು ಖಚಿತ. ಇಂತಹ ಕಾಯಿಲೆಯಿಂದ ಎಚ್.ಡಿ.ಕೋಟೆಯ ವ್ಯಕ್ತಿಯೊಬ್ಬ ನಿನ್ನೆ ಸಾವನ್ನಪ್ಪಿದ್ದಾನೆ.

ತಾಲ್ಲೂಕಿನ ಹೊಮ್ಮರಗಳ್ಳಿ ಗ್ರಾಮದ ಪ್ರಕಾಶ್ (35) ಈ ರೋಗಕ್ಕೆ ಬಲಿಯಾಗಿದ್ದಾರೆ. ಮಾದಾಪುರ ಗ್ರಾಮದಲ್ಲಿ ಕೆಇಬಿಯ ಲೈನ್‌ಮೆನ್ ಆಗಿ ಕೆಲಸ ಮಾಡುತ್ತಿದ್ದ ಇವರಿಗೆ ನ.೧೫ರಂದು ಇದ್ದಕ್ಕಿದ್ದಂತೆ ಅನಾರೋಗ್ಯ ಕಾಡಿದೆ. ಸ್ಥಳೀಯ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದರೂ ಪ್ರಯೋಜನವಾಗಿಲ್ಲ. ಎರಡು-ಮೂರು ದಿನಗಳಲ್ಲಿ ಚಳಿಜ್ವರ ಕಾಣಿಸಿಕೊಂಡಿದ್ದು, ಮೈಸೂರಿನ ಕೆ.ಆರ್.ಆಸ್ಪತ್ರೆ, ಕಾಮಾಕ್ಷಿಆಸ್ಪತ್ರೆ, ಅಪಲೋ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದರೂ ಚಳಿಜ್ವರ ಬಿಟ್ಟಿಲ್ಲ. ಅಲ್ಲದೆ, ಏನಾಗಿದೆ ಎಂಬುದು ಪರೀಕ್ಷಿಸಿದ ವೈದ್ಯರಿಗೂ ಗೊತ್ತಾಗಿಲ್ಲ. ಕುಟುಂಬದವರು ಗುರುವಾರ ಪ್ರಕಾಶ್ ಅವರನ್ನು ಬೆಂಗಳೂರಿನ ಸೆಂಟ್‌ಜಾನ್ ಆಸ್ಪತ್ರೆಗೆ ಕರೆತಂದಿದ್ದಾರೆ. ಅಲ್ಲಿ ಪರೀಕ್ಷಿಸಿದ ವೈದ್ಯರಿಗೂ ಆರಂಭದಲ್ಲಿ ಕಾಯಿಲೆ ಏನು ಎಂಬುದು ಗೊತ್ತಾಗಿಲ್ಲ. ವೈರಾಣು ಜ್ವರವೆಂದು ಶಂಕಿಸಿ ಚಿಕಿತ್ಸೆ ನೀಡಿದರೂ ಪ್ರಯೋಜನವಾಗಿಲ್ಲ.

ಅಷ್ಟರಲ್ಲಿ ರೋಗಿ ವಿಷಮ ಸ್ಥಿತಿಗೆ ತಲುಪಿದ್ದರಿಂದ ವಿದೇಶದಿಂದ ವೈದ್ಯರನ್ನು ಕರೆಸಿ ಪರೀಕ್ಷಿಸಿದಾಗ ಪ್ರಕಾಶ್ ಅವರಿಗೆ ಗ್ಯಾಸ್‌ಗ್ಯಾಂಗ್ರಿನ್ ಎಂಬ ಕಾಯಿಲೆ ಇರುವುದು ಗೊತ್ತಾಗಿದೆ.

ಪ್ರಕಾಶ್ ಅವರಿಗೆ ಏನೇ ಔಷಧವನ್ನು ಚುಚ್ಚುಮದ್ದು ಮೂಲಕ ಕೊಟ್ಟರೂ ಅದು ರಕ್ತದಲ್ಲಿ ವಿಷವಾಗಿ ಪರಿಣಮಿಸುತ್ತಿತ್ತು ಎಂದು ಚಿಕಿತ್ಸೆ ನೀಡುತ್ತಿದ್ದ ವೈದ್ಯರು ರೋಗಿಯ ಕುಟುಂಬದವರಿಗೆ ವಿವರಿಸಿದ್ದಾರೆ. ರೋಗಿಯ ಸ್ಥಿತಿ ಗಂಭೀರವಾಗಿದ್ದರಿಂದ ವೈದ್ಯರು ಅದನ್ನು ಸವಾಲಾಗಿ ಸ್ವೀಕರಿಸಿ ಪೋಷಕರಿಗೆ ರೋಗದ ಮನವರಿಕೆ ಮಾಡಿಕೊಟ್ಟು ರೋಗಿ ಉಳಿಯುವ ಸಾಧ್ಯತೆಗಳು ಇಲ್ಲದ ಬಗ್ಗೆಯೂ ತಿಳಿಸಿದ್ದಾರೆ. ರೋಗಿಯ ರಕ್ತ ಪರೀಕ್ಷಿಸಿದಾಗ ಅದರಲ್ಲಿ ಬಿಳಿ ಕಣಗಳ ಸಂಖ್ಯೆ ಶೇ.೩೦ರಷ್ಟು ಇದ್ದರಿಂದ ರೋಗಿಯ ದೇಹದ ರಕ್ತವನ್ನು ಸಂಪೂರ್ಣವಾಗಿ ಹೊರ ತೆಗೆದು ಹೊಸ ರಕ್ತವನ್ನು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಚಿಕಿತ್ಸೆ ವೇಳೆ ರೋಗಿಯ ಸೊಂಟ ಭಾಗಕ್ಕೆ ಚುಚ್ಚು ಮದ್ದು ನೀಡಿದ್ದಾಗ ಅದು ವ್ಯತಿರಿಕ್ತ ಪರಿಣಾಮ ಬೀರಿ ಸೊಂಟ ಹಾಗೂ ಕೆಳಭಾಗದ ದೇಹದಲ್ಲಿ ಚರ್ಮವೆಲ್ಲ ಸುಟ್ಟಂತಾಗಿದೆ. ರೋಗ ಉಲ್ಭಣಗೊಂಡು ದೇಹದ ಮಾಂಸಖಂಡಗಳೆಲ್ಲಾ ಕೊಳೆತ ಸ್ಥಿತಿಗೆ ತಲುಪಿ ನಿನ್ನೆ ಸಂಜೆ ವೇಳೆಗೆ ಹೃದಯ, ಕಿಡ್ನಿ, ಶ್ವಾಸಕೋಶಗಳು ವೈಫಲ್ಯವಾಗಿ ಪ್ರಕಾಶ್ ಮೃತಪಟ್ಟಿದ್ದಾರೆ.

ಈ ಕಾಯಿಲೆ ಬೇರೊಬ್ಬರಿಗೂ ಹರಡುವ ಸಾಧ್ಯತೆಗಳಿವೆ ಎಂದು ತಿಳಿಸಿರುವ ವೈದ್ಯರು ಮೃತನ ದೇಹವನ್ನು ವೈಜ್ಞಾನಿಕವಾಗಿ ಪ್ಯಾಕಿಂಗ್ ಮಾಡಿ ಪೋಷಕರಿಗೆ ಒಪ್ಪಿಸಿದ್ದಾರೆ. ಗಾಜಿನ ಪೆಟ್ಟಿಗೆಯಲ್ಲಿ ದೇಹವನ್ನು ಸ್ವಗ್ರಾಮಕ್ಕೆ ತೆಗೆದುಕೊಂಡು ಹೋದ ಕುಟುಂಬದವರು ಇಂದು ದೇಹವನ್ನು ಮುಟ್ಟದೆ ಅಗ್ನಿಸ್ಪರ್ಶ ಮಾಡುವ ಮೂಲಕ ಅಂತ್ಯಸಂಸ್ಕಾರ ಮುಗಿಸಿದ್ದಾರೆ. ಮಗನಿಗೆ ಜ್ವರ ಕಾಣಿಸಿಕೊಂಡಾಗಿನಿಂದ ನಿನ್ನೆಯವರೆಗೂ ಚಿಕಿತ್ಸೆಗಾಗಿ ಸುಮಾರು ೮ಲಕ್ಷ ರೂ.ಗಳವರೆಗೂ ವೆಚ್ಚವಾಗಿದೆ. ಆದರೂ ಮಗ ಬದುಕಿ ಬರಲಿಲ್ಲ ಎಂದು ಪೋಷಕರು ಕಣ್ಣೀರು ಸುರಿಸಿದ್ದಾರೆ.

ಸಂಶೋಧನೆಗೆ ವರದಿ:
ರೋಗಿಯನ್ನು ಪರೀಕ್ಷಿಸಿ ಚಿಕಿತ್ಸೆ ನೀಡಿದ ವಿದೇಶದ ವೈದ್ಯರು ಕಾಯಿಲೆ ಕುರಿತು ಹಾಗೂ ಅದಕ್ಕೆ ಔಷಧ ಕಂಡು ಹಿಡಿಯಲು ಸಂಶೋಧನೆಗಾಗಿ ವೈದ್ಯಕೀಯ ಪರೀಕ್ಷೆಗಳ ಹಾಗೂ ನೀಡಿದ ಚಿಕಿತ್ಸೆಗಳ ವರದಿಯನ್ನು ತಮ್ಮೊಂದಿಗೆ ಕೊಂಡೊಯ್ದಿದ್ದಾರೆ ಎಂದು ಸೆಂಟ್‌ಜಾನ್ ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ.

Write A Comment