ಕರ್ನಾಟಕ

ರಾಘವೇಶ್ವರ ಶ್ರೀ ಸಮರ್ಥ ಪುರುಷ: ಹೈಕೋರ್ಟ್‌ನಲ್ಲಿ ವಾದ

Pinterest LinkedIn Tumblr

ವೈದ್ಯ ಪರೀಕ್ಷೆಯ ಅಗತ್ಯವಿಲ್ಲ: ಹೈಕೋರ್ಟ್‌ನಲ್ಲಿ ವಾದ-

Raghaveshwara_Swami_0

ಬೆಂಗಳೂರು: ಅತ್ಯಾಚಾರ ಆರೋಪ ಎದುರಿಸುತ್ತಿರುವ ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತಿ ಸ್ವಾಮೀಜಿ ಸಮರ್ಥ ಪುರುಷ, ಆ ಬಗ್ಗೆ ಯಾವುದೇ ವಿವಾದ ಇಲ್ಲ. ಅಗತ್ಯಬಿದ್ದರೆ ಆ ಕುರಿತು ಪ್ರಮಾಣಪತ್ರ ಸಲ್ಲಿಸಲು ಸಿದ್ಧ ಎಂದು ಸ್ವಾಮೀಜಿ ಪರ ವಕೀಲರು ಶುಕ್ರವಾರ ಹೈಕೋರ್ಟ್‌ಗೆ ತಿಳಿಸಿದರು.

ತನಿಖಾಧಿಕಾರಿಗಳು ವೈದ್ಯ ಪರೀಕ್ಷೆ ನಡೆಸಲು ಅಧಿಕಾರವಿರುವ ಅಪರಾಧ ದಂಡ ಸಂಹಿತೆ ಸೆಕ್ಷನ್ 53 ಹಾಗೂ 53ಎ ಸಂವಿಧಾನದ ವಿಧಿಬದ್ಧತೆ ಪ್ರಶ್ನಿಸಿ ಸಲ್ಲಿಸಿರುವ ಅರ್ಜಿ ವಿಚಾರಣೆ ವೇಳೆ ನ್ಯಾ. ಎ.ಎನ್.ವೇಣುಗೋಪಾಲ ಗೌಡ ಅವರಿದ್ದ ನ್ಯಾಯಪೀಠದ ಮುಂದೆ ಸ್ವಾಮೀಜಿ ಪರ ವಕೀಲ ಕೆ.ಜಿ.ರಾಘವನ್ ಈ ವಿಷಯ ತಿಳಿಸಿದರು.

ಸುಮಾರು ಎರಡು ಗಂಟೆ ಸ್ವಾಮೀಜಿ ಪರ ವಾದ ಮಂಡಿಸಿ ಸುಪ್ರೀಂಕೋರ್ಟ್‌ನ ಹಲವು ತೀರ್ಪು ಉಲ್ಲೇಖಿಸಿದ ರಾಘವನ್, ತಮ್ಮ ವಾದದ ಮುಕ್ತಾಯ ಹಂತದಲ್ಲಿ ”ನಿತ್ಯಾನಂದ ಅವರು ಹೇಳಿಕೊಂಡಂತೆ ಸ್ವಾಮೀಜಿ ತಾವು ಪುರುಷರಲ್ಲ ಎಂದು ಎಲ್ಲೂ ಹೇಳಿಲ್ಲ. ಇದನ್ನು ನಾವು ಅರ್ಜಿಯಲ್ಲೂ ಹೇಳಿದ್ದೇವೆ. ಸಂಪೂರ್ಣ ಪುರುಷರಾದರೆ ಮಾತ್ರ ಮಠದ ಪೀಠ ಏರಲು ಸಾಧ್ಯ. ಸ್ವಾಮೀಜಿ ಸಂಪೂರ್ಣ ಪುರುಷರಾಗಿದ್ದಾರೆ ಹಾಗಾಗಿಯೇ ಅವರು ಆ ಪೀಠದಲ್ಲಿದ್ದಾರೆ. ಅವರಿಗೆ ಪುರುಷತ್ವವಿದೆ ಹಾಗೂ ಅವರು ದೈಹಿಕವಾಗಿ ಆರೋಗ್ಯವಂತರಾಗಿದ್ದಾರೆ,” ಎಂದರು.

ಪಲಾಯನವಿಲ್ಲ
”ಸ್ವಾಮೀಜಿ ತನಿಖೆಗೆ ಸಹಕಾರ ನೀಡುತ್ತಿದ್ದಾರೆ. ಪಲಾಯನ ಮಾಡುತ್ತಿಲ್ಲ . ವೈದ್ಯ ಪರೀಕ್ಷೆಯಿಂದ ಶ್ರೀಗಳ ಖಾಸಗಿತನಕ್ಕೆ ಧಕ್ಕೆ ಆಗುತ್ತದೆ. ಅವರ ವೈಯಕ್ತಿಕ ಹಕ್ಕು ಉಲ್ಲಂಘನೆಯಾಗುತ್ತದೆ. ಸಿಐಡಿ ಪೊಲೀಸರು ವೈದ್ಯ ಪರೀಕ್ಷೆಗೆ ನೀಡಿರುವ ನೋಟಿಸ್‌ನಲ್ಲಿ ಕಾರಣ ನೀಡಿಲ್ಲ. ಪರೀಕ್ಷೆಯ ಸ್ವರೂಪ ಹಾಗೂ ಸಮಯ ಉಲ್ಲೇಖಿಸಿಲ್ಲ,” ಎಂದು ಹೇಳಿದರು.

”ಸಿಆರ್‌ಪಿಸಿ ಸೆಕ್ಷನ್ 53ಕ್ಕೆ, ತಿದ್ದುಪಡಿ ಮಾಡಿ 2005ರಲ್ಲಿ 53ಎ ತಂದು ಅದರಡಿ ಮಹಿಳೆಯರು ತಮ್ಮ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ ಎಂದು ದೂರು ನೀಡಿದರೆ ಆರೋಪಿಯನ್ನು ವೈದ್ಯ ಪರೀಕ್ಷೆಗೆ ಒಳಪಡಿಸುವ ಏಕಪಕ್ಷೀಯ ನಿರ್ಧಾರವನ್ನು ತನಿಖಾಧಿಕಾರಿ ಕೈಗೊಳ್ಳಬಹುದು ಎಂದಿದೆ. ಆದರೆ ಇದರಿಂದ ಸಂವಿಧಾನದ 21 ಹಾಗೂ 23ನೇ ವಿಧಿ ಅನ್ವಯ ವ್ಯಕ್ತಿಯ ಖಾಸಗಿತನಕ್ಕೆ ಧಕ್ಕೆ ಬರುತ್ತದೆ. ಅವರ ಹಕ್ಕುಗಳ ಉಲ್ಲಂಘನೆ ಆಗುತ್ತದೆ,” ಎಂದೂ ಸ್ವಾಮೀಜಿ ಪರ ವಕೀಲರು ನ್ಯಾಯಪೀಠಕ್ಕೆ ತಿಳಿಸಿದರು.

ಎಷ್ಟು ಕಾನೂನಿದ್ದರೂ ಕಷ್ಟ
ವಿಚಾರಣೆ ವೇಳೆ ನ್ಯಾ. ಎ.ಎನ್.ವೇಣುಗೋಪಾಲ ಗೌಡ ಅವರು ಸಮಾಜದಲ್ಲಿ ಮಹಿಳೆಯರ ಮೇಲಾಗುತ್ತಿರುವ ದೌರ್ಜನ್ಯ ಪ್ರಸ್ತಾಪಿಸಿ ”ನಮ್ಮಲ್ಲಿ ಎಷ್ಟು ಕಾನೂನುಗಳಿದ್ದರೂ ಸಾಕಾಗುತ್ತಿಲ್ಲ. ಮಹಿಳೆಯರನ್ನು ರಕ್ಷಿಸಲು ಇನ್ನು ಎಷ್ಟು ಕಾನೂನುಗಳನ್ನು ಜಾರಿಗೊಳಿಸಬೇಕೋ. ದೈಹಿಕವಾಗಿ ಪುರುಷರಷ್ಟು ಸಬಲರಲ್ಲದ ಮಹಿಳೆಯರು ಅನುಭವಿಸುತ್ತಿರುವ ಕಷ್ಟ ಅವರಿಗೇ ಗೊತ್ತು. ಶೇ. 50ಕ್ಕೂ ಹೆಚ್ಚು ಮಹಿಳೆಯರು ಒಂದಲ್ಲಾ ಒಂದು ರೀತಿ ದೌರ್ಜನ್ಯಕ್ಕೆ ಒಳಗಾಗುತ್ತಿದ್ದಾರೆ, ” ಎಂದರು.

”60 ವರ್ಷದ ನಂತರ ಎಲ್ಲರೂ ರಕ್ತ, ಮೂತ್ರ ಪರೀಕ್ಷೆ ಸೇರಿದಂತೆ ಹಲವು ರೀತಿಯ ವೈದ್ಯ ಪರೀಕ್ಷೆಗಳನ್ನು ಎದುರಿಸಲೇಬೇಕಾಗುತ್ತದೆ. ಅದೇ ರೀತಿ ಇದೂ ಒಂದು ಪರೀಕ್ಷೆ ಅಂತ ಹೋಗಿ ಬರೋದಿಕ್ಕೆ ಆಗೋದಿಲ್ವೆ,” ಎಂದು ನ್ಯಾಯಮೂರ್ತಿಗಳು ಲಘು ಧಾಟಿಯಲ್ಲಿ ಹೇಳಿದರು. ವಿಚಾರಣೆ ಸೋಮವಾರ ಮುಂದುವರಿಯಲಿದೆ.

ಸ್ವಾಮೀಜಿಗಳಿಂದಲೇ ಹುಟ್ಟಿದ ಕಾನೂನುಗಳು
ವಿಚಾರಣೆ ವೇಳೆ ಸ್ವಾಮೀಜಿ ಪರ ವಕೀಲರು ಸೆಲ್ವಿ ಪ್ರಕರಣ ಉಲ್ಲೇಖಿಸುತ್ತಾ, ಅದರಲ್ಲಿ ವ್ಯಕ್ತಿಯ ಖಾಸಗಿತನಕ್ಕೆ ಧಕ್ಕೆ ತರುವಂತಿಲ್ಲ ಎಂದಿದೆ ಎಂದರು. ಆಗ ಅಸಿಸ್ಟೆಂಟ್ ಸಾಲಿಸಿಟರ್ ಜನರಲ್ ಕೃಷ್ಣ ಎಸ್.ದೀಕ್ಷಿತ್ ”ನಮ್ಮಲ್ಲಿ ಎಷ್ಟೊ ಕಾನೂನುಗಳು ಹುಟ್ಟಲು ಸ್ವಾಮೀಜಿಗಳೇ ಕಾರಣರಾಗಿದ್ದಾರೆ. ಇಂಗ್ಲೀಷ್ ಪದ್ಧತಿಯಲ್ಲಿ ವಕೀಲರ ಕ್ರಿಯಾಶೀಲತೆಯಿಂದಾಗಿ ಎಷ್ಟೋ ಕಾನೂನುಗಳು ಹುಟ್ಟಿಕೊಂಡಿವೆ. ಆದರೆ ನಮ್ಮ ದೇಶದಲ್ಲಿ ಲಕ್ಷ್ಮೀನಂದ ತೀರ್ಥ ಸ್ವಾಮಿಯಾರ್, ಕೇಶವಾನಂದ ಭಾರತಿ, ಭಗವಾನ್ ದಾಸ್, ನಿತ್ಯಾನಂದ ಪ್ರಕರಣ, ಇದೀಗ ರಾಘವೇಶ್ವರ ಭಾರತಿ ಪ್ರಕರಣವೂ ಹೊಸ ಕಾನೂನು ಸೃಷ್ಟಿಗೆ ದಾರಿ ಮಾಡಿಕೊಡುತ್ತಿದೆ,” ಎಂದು ಲಘು ಧಾಟಿಯಲ್ಲಿ ಹೇಳಿದರು.

Write A Comment