ಬೆಂಗಳೂರು: ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ವಿರುದ್ಧದ ಭೂ ಹಗರಣದ ವಿಚಾರಣೆಗೆ ಕರ್ನಾಟಕ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿದೆ.
ಬೆಂಗಳೂರಿನ ಶ್ರೀಗಂಧ ಕಾವಲ್‌ನಲ್ಲಿನ ನಾಲ್ಕು ಎಕರೆ ಭೂಮಿಯನ್ನು ಶೆಟ್ಟರ್ ಸಿಎಂ ಆಗಿದ್ದಾಗ ಅಕ್ರಮವಾಗಿ ಮಂಜೂರು ಮಾಡಿದ್ದಾರೆ ಎಂಬ ಆರೋಪವನ್ನು ಶೆಟ್ಟರ್ ಎದುರಿಸುತ್ತಿದ್ದು, ಇಂದು ವಿಚಾರಣೆ ನಡೆಸಿದ ಕೋರ್ಟ್ ಭೂ ಹಗರಣದ ವಿಚಾರಣೆಗೆ ಮಧ್ಯಂತರ ತಡೆಯಾಜ್ಞೆ ನೀಡಿದ್ದು, ಮುಂದಿನ ವಿಚಾರಣೆಯನ್ನು ಡಿಸೆಂಬರ್ 5ಕ್ಕೆ ಮುಂದೂಡಿದೆ.
ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಎ. ಪ್ರಸಾದ್ ಅವರು ಬೆಂಗಳೂರು ಮಹಾನಗರ ಕಾರ್ಯಪಡೆ(ಬಿಎಂಟಿಎಫ್)ಗೆ ಸಲ್ಲಿಸಿದ್ದ ದೂರಿನ ಅನ್ವಯ ಜಗದೀಶ್ ಶೆಟ್ಟರ್ ಅವರ ವಿರುದ್ಧ ಎಫ್‌ಐಆರ್ ದಾಖಲಾಗಿದ್ದು. ವಿಚಾರಣೆ ನಡೆಯುತ್ತಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಜಗದೀಶ್ ಶೆಟ್ಟರ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಇಂದು ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ ಶೆಟ್ಟರ್ ವಿಚಾರಣೆ ನಡೆಸದಂತೆ ಬಿಎಂಟಿಎಫ್‌ಗೆ ಮಧ್ಯಂತರ ತಡೆಯಾಜ್ಞೆ ನೀಡಿದೆ. ಅರ್ಜಿಯ ವಿಚಾರಣೆಯನ್ನು ಡಿ. 5ಕ್ಕೆ ಮುಂದೂಡಿದೆ.
ಬೆಂಗಳೂರಿನ ಶ್ರೀಗಂಧ ಕಾವಲ್‌ನಲ್ಲಿರುವ ನಾಲ್ಕು ಎಕರೆ ಭೂಮಿಯನ್ನು ಶೆಟ್ಟರ್ ಸಿಎಂ ಆಗಿದ್ದಾಗ ಅಕ್ರಮವಾಗಿ ಮಂಜೂರು ಮಾಡಿದ್ದಾರೆ ಎಂದು ರಾಜ್ಯ ಒಕ್ಕಲಿಗರ ಸಂಘದ ಪ್ರಧಾನ ಕಾರ್ಯದರ್ಶಿ ಪ್ರೋ. ನಾಗರಾಜ್ ಆರೋಪಿಸಿದ್ದು, ಐಪಿಸಿ ಸೆಕ್ಷನ್ 420, 218, 166, 192(ಎ)ಮತ್ತು (ಬಿ) ಅಡಿಯಲ್ಲಿ ಜಗದೀಶ್ ಶೆಟ್ಟರ್, ಎಸ್ ಸುಂದರೇಶ್ ಮತ್ತು ಇತರೆ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಾಗಿದೆ.