ಕರ್ನಾಟಕ

ಕಾವೇರಿ: ಮತ್ತೆ ತಮಿಳುನಾಡು ಕ್ಯಾತೆ

Pinterest LinkedIn Tumblr

krsಚೆನ್ನೈ(ಐಎಎನ್‌ಎಸ್‌): ಕುಡಿಯುವ ನೀರಿನ ಯೋಜನೆಗಾಗಿ ಕಾವೇರಿ ನದಿಗೆ ಎರಡು ಅಣೆಕಟ್ಟು ನಿರ್ಮಿಸಲು ಮುಂದಾಗಿರುವ ಕರ್ನಾಟಕದ ಕ್ರಮಕ್ಕೆ ತಡೆಯಾಜ್ಞೆ ನೀಡುವಂತೆ  ತಮಿಳುನಾಡು ಸರ್ಕಾರ ಸುಪ್ರೀಂಕೋರ್ಟ್‌ಗೆ ಮನವಿ ಮಾಡಿದೆ.

ಕುಡಿಯುವ ನೀರು ಯೋಜನೆ ನೆಪದಲ್ಲಿ ಕರ್ನಾಟಕ ಸರ್ಕಾರ, ಮೇಕೆದಾಟುವಿನಲ್ಲಿ ಎರಡು ಅಣೆಕಟ್ಟುಗಳನ್ನು ನಿರ್ಮಿಸಲು ಮುಂದಾಗಿದೆ. ಇದಕ್ಕೆ ತಡೆಯಾಜ್ಞೆ ನೀಡಬೇಕೆಂದು ಕೋರಿ ಸುಪ್ರೀಂಕೋರ್ಟ್‌ಗೆ ಮನವಿ ಮಾಡಲಾಗಿದೆ ಎಂದು ತಮಿಳುನಾಡು ಮುಖ್ಯಮಂತ್ರಿ ಓ.ಪನ್ನೀರಸೆಲ್ವಂ ಮಂಗಳವಾರ ಇಲ್ಲಿ ತಿಳಿಸಿದರು.

ಅಣೆಕಟ್ಟು ನಿರ್ಮಾಣ ಕೈಬಿಡುವಂತೆ ಕರ್ನಾಟಕದ ಮೇಲೆ ಒತ್ತಡ ಹೇರಲು ಪ್ರಧಾನಿ ನರೇಂದ್ರ ಮೋದಿ ಅವರಿಗೂ ಪತ್ರ ಬರೆಯಲಾಗಿದೆ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಕರ್ನಾಟಕ ಸರ್ಕಾರ ಕುಡಿಯುವ ನೀರು ಯೋಜನೆ ನೆಪದಲ್ಲಿ ಕಾವೇರಿ ನದಿ ತಟದಲ್ಲಿ ನೀರಾವರಿ, ಜಲ ವಿದ್ಯುತ್‌, ಏತ ನೀರಾವರಿಗೆ ಸಂಬಂಧಿಸಿದಂತೆ ತಮಿಳುನಾಡು ಸರ್ಕಾರದ ಅಭಿಪ್ರಾಯ ಪಡೆಯದೆ ಯಾವುದೇ ನಿರ್ಧಾರ ತೆಗೆದುಕೊಳ್ಳಬಾರದು ಎಂದೂ ಪನ್ನೀರ್‌ಸೆಲ್ವಂ ಮೋದಿ ಅವರಿಗೆ ಬರೆದಿರುವ ಪತ್ರದಲ್ಲಿ ಆಗ್ರಹಿಸಿದ್ದಾರೆ.

ತಮಿಳುನಾಡು ಸರ್ಕಾರವನ್ನು ಸಂಪರ್ಕಿಸದೆ ಕಾವೇರಿ ವಿಚಾರಕ್ಕೆ ಸಂಬಂಧಿಸಿದಂತೆ ಕರ್ನಾಟಕದ ಯಾವುದೇ ಯೋಜನೆಗಳಿಗೂ ಸಮ್ಮತಿ ನೀಡಬಾರದು ಎಂದು ಕೇಂದ್ರ ಪರಿಸರ ಹಾಗೂ ಅರಣ್ಯ ಸಚಿವಾಲಯ ಹಾಗೂ ಜಲ ಸಂಪನ್ಮೂಲ ಸಚಿವಾಲಯಕ್ಕೆ ನಿರ್ದೇಶಿಸಬೇಕು ಎಂದೂ ಪ್ರಧಾನಿ ಅವರನ್ನು ಕೋರಲಾಗಿದೆ ಎಂದರು.

Write A Comment