ಕರ್ನಾಟಕ

ನಿಗಮ-ಮಂಡಳಿ ನೇಮಕ; ಸಿದ್ದರಾಮಯ್ಯ-ಪರಮೇಶ್ವರ್ ಸಭೆ ಅರ್ಧಕ್ಕೆ ಮೊಟಕು

Pinterest LinkedIn Tumblr

siddu-paramesh1

ಬೆಂಗಳೂರು, ಸೆ.15: ನಿಗಮ-ಮಂಡಳಿ ಅಧ್ಯಕ್ಷ, ಉಪಾಧ್ಯಕ್ಷರ ನೇಮಕದ ಸಂಬಂಧ ಸಿಎಂ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಉಪಸ್ಥಿತಿಯಲ್ಲಿ ಜರಗಿದ ಮಹತ್ವದ ಸಭೆ, ನಿಗಮ-ಮಂಡಳಿ ನೇಮಕದ ಸಂಬಂಧ ಒಮ್ಮತದ ತೀರ್ಮಾನಕ್ಕೆ ಬರಲಾಗದ ಹಿನ್ನೆಲೆಯಲ್ಲಿ ಅರ್ಧಕ್ಕೆ ಮೊಟಕುಗೊಂಡಿದೆ.

ಸೋಮವಾರ ನಗರದ ಖಾಸಗಿ ಹೊಟೇಲ್‌ನಲ್ಲಿ ಸಿದ್ದರಾಮಯ್ಯ ಹಾಗೂ ಪರಮೇಶ್ವರ್ ಉಪಸ್ಥಿತಿಯಲ್ಲಿ ಸಭೆ ಏರ್ಪಾಟಾಗಿತ್ತು. ಆದರೆ, ಸಭೆಯಲ್ಲಿ ‘ಉಪ ಮುಖ್ಯಮಂತ್ರಿ’ ಸ್ಥಾನ ಸೃಷ್ಟಿ ಹಾಗೂ ಸಚಿವ ಸಂಪುಟ ಪುನರ್ ರಚನೆಯ ಸಂಬಂಧ ಉಭಯ ನಾಯಕರ ಮಧ್ಯೆ ವಾಗ್ವಾದ ನಡೆದಿದ್ದು ‘ನಾನೊಂದು ತೀರ..ನೀನೊಂದು ತೀರ’ವೆಂಬಂತೆ ಸಭೆಯಿಂದ ಹೊರ ನಡೆದರೆಂದು ತಿಳಿದುಬಂದಿದೆ.

ಕಾಂಗ್ರೆಸ್ ಸರಕಾರವು ಅಧಿಕಾರಕ್ಕೆ ಬಂದಾಗಿನಿಂದಲೂ ನಿಗಮ ಮಂಡಳಿ ನೇಮಕ ಸಂಬಂಧ ಚರ್ಚೆ ನಡೆದಿತ್ತಾದರೂ, ಕಾರಣಾಂತರಗಳಿಂದ ನನೆಗುದಿಗೆ ಬಿದ್ದಿತ್ತು. ನಿಗಮ ಮಂಡಳಿ ಅಧ್ಯಕ್ಷ ಸೇರಿ ಸದಸ್ಯರ ನೇಮಕದ ಸಂಬಂಧ ದಿನವಿಡೀ ಸಭೆ ನಿಗದಿಯಾಗಿತ್ತು.

ಆದರೆ, ಮುಖಂಡರ ಮಧ್ಯೆ ಭಿನ್ನಾಭಿಪ್ರಾಯ ಸೃಷ್ಟಿ ಆದ ಹಿನ್ನೆಲೆಯಲ್ಲಿ ಆರಂಭಗೊಂಡ ಕೆಲವೇ ಕ್ಷಣಗಳಲ್ಲಿ ಸಭೆಯು ಮುಕ್ತಾಯ ಕಂಡಿದೆ.

‘ನಿಗಮ ಮಂಡಳಿ ನೇಮಕ ಸಂಬಂಧ ಪಟ್ಟಿ ಕಳುಹಿಸಿಕೊಡಿ ಅದನ್ನು ಪರಿಶೀಲಿಸಿ ಯಾರನ್ನು ನೇಮಕ ಮಾಡಬೇಕೆಂಬ ಬಗ್ಗೆ ನಾನು ತೀರ್ಮಾನಿಸುವೆ’ ಎಂದು ಹೇಳಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೊರ ನಡೆದಿದ್ದಾರೆ. ಸಿದ್ದರಾಮಯ್ಯನವರ ಈ ಧೋರಣೆಯನ್ನು ಖಂಡಿಸಿ ಪರಮೇಶ್ವರ್ ತೀವ್ರ ಅಸಮಾಧಾನಗೊಂಡಿದ್ದು ಸಭೆ ಏರ್ಪಡಿಸಿದ್ದ ಹೊಟೇಲ್‌ನ ಹಿಂಬಾಗಿಲಿನ ಮೂಲಕ ಹೊರ ಹೋಗಿದ್ದಾರೆಂದು ತಿಳಿದು ಬಂದಿದೆ.

ಎಲ್ಲಿ ಸಭೆ: ನಿಗಮ ಮಂಡಳಿ ನೇಮಕ ಸಂಬಂಧ ಎಲ್ಲಿ ಸಭೆ ನಡೆಸಬೇಕೆಂಬುದೇ ಆರಂಭಕ್ಕೆ ಗೊಂದಲ ಸೃಷ್ಟಿಯಾಗಿತ್ತು. ಈ ಮಧ್ಯೆ ಪರಮೇಶ್ವರ್ ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ಸಭೆ ನಡೆಸಿದರೆ ಸೂಕ್ತವೆಂಬ ತೀರ್ಮಾನಕ್ಕೆ ಸಿಎಂ ಆಕ್ಷೇಪಿಸಿದ ಹಿನ್ನೆಲೆಯಲ್ಲಿ ಖಾಸಗಿ ಹೊಟೇಲ್‌ನಲ್ಲಿ ಸಭೆ ನಡೆಸಲಾಯಿತು.

ಮಧ್ಯಾಹ್ನ 11:45ರ ಸುಮಾರಿಗೆ ಖಾಸಗಿ ಹೊಟೇಲ್‌ಗೆ ಬಂದ ಮುಖ್ಯಮಂತ್ರಿ ಸಿದ್ದರಾಮಯ್ಯ, ದಿನವೀಡಿ ಸಭೆ ನಡೆಸಲಿದ್ದಾರೆಂದು ಹೇಳಲಾಗಿತ್ತು. ಆದರೆ, ಕೇವಲ 45 ನಿಮಿಷಗಳಲ್ಲಿ ಸಭೆ ಮೊಟಕುಗೊಂಡಿತು. ಹೀಗಾಗಿ ಚಾತಕ ಪಕ್ಷಿಗಳಂತೆ ನಿಗಮ ಮಂಡಳಿ ಸ್ಥಾನದ ನಿರೀಕ್ಷೆಯಲ್ಲಿದ್ದ ಕಾರ್ಯಕರ್ತರಿಗೆ ತೀವ್ರ ನಿರಾಶೆಯಾಗಿದೆ.

ಏಳು ಸಾವಿರ ಅರ್ಜಿ: ರಾಜ್ಯದಲ್ಲಿನ 70 ನಿಗಮ ಮಂಡಳಿಗಳಿಗೆ ಕಾಂಗ್ರೆಸ್ ಪಕ್ಷದ ಶಾಸಕರು ಹಾಗೂ ಕಾರ್ಯಕರ್ತರಿಂದ ಸುಮಾರು 7 ಸಾವಿರ ಅರ್ಜಿ ಬಂದಿವೆ. 70 ಸ್ಥಾನಗಳ ಪೈಕಿ 10 ಮಂದಿ ಶಾಸಕರಿಗೆ ಹಾಗೂ 60 ಸಂಸ್ಥೆಗಳಲ್ಲಿ ಪಕ್ಷದ ಕಾರ್ಯಕರ್ತರಿಗೆ ಸ್ಥಾನ ಕಲ್ಪಿಸಲು ಉದ್ದೇಶಿಸಲಾಗಿದೆ ಎಂದು ಹೇಳಲಾಗಿದೆ.

ಪಕ್ಷದ ಶಾಸಕರು, ಬ್ಲಾಕ್ ಹಾಗೂ ಜಿಲ್ಲಾ ಕಾಂಗ್ರೆಸ್ ಸಮಿತಿ ಕಳುಹಿಸಿದ ಪಟ್ಟಿಯ ಅನ್ವಯ ನಿಗಮ ಮಂಡಳಿ ಸ್ಥಾನಗಳ ನೇಮಕಾತಿಗೆ ನಿರ್ಧರಿಸಲಾಗಿದೆ ಎಂದು ಹೇಳಲಾಗಿದೆ. ಆದರೆ, ಮುಖಂಡರ ಮಧ್ಯದ ವೈಯಕ್ತಿಕ ಜಿದ್ದಿಗೆ ನಿಗಮ ಮಂಡಳಿ ನೇಮಕಾತಿ ಪುನಃ ನನೆಗುದಿಗೆ ಬಿದ್ದಿದೆ.

ಸೆ.17ರಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯ ಉಸ್ತುವಾರಿ ದಿಗ್ವಿಜಯ್ ಸಿಂಗ್ ಅವರೊಂದಿಗೆ ನಿಗಮ ಮಂಡಳಿ ಅಧ್ಯಕ್ಷ, ಉಪಾಧ್ಯಕ್ಷರ ನೇಮಕ ಸಂಬಂಧ ಮತ್ತೊಂದು ಸುತ್ತಿನ ಚರ್ಚೆ ನಡೆಸಿ ಸೆ.20ರ ನಂತರ ಈ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳುವ ಸಾಧ್ಯತೆಗಳಿವೆ.

Write A Comment