ಕರಾವಳಿ

ಮಂಗಳೂರಿನ ಮರೋಳಿಯಲ್ಲಿ ಚಿರತೆ ಪತ್ತೆಗಾಗಿ ಮುಂದುವರಿದ ಕಾರ್ಯಾಚರಣೆ

Pinterest LinkedIn Tumblr

ಮಂಗಳೂರು: ನಗರದ ಮರೋಳಿ ಜಯನಗರದಲ್ಲಿ ಭಾನುವಾರ ಸಂಜೆ ಪತ್ತೆಯಾಗಿ ಆತಂಕ ಮೂಡಿಸಿದ್ದ ಚಿರತೆಯನ್ನು ಸೆರೆಗೆ ಕಾರ್ಯಾಚರಣೆ ಮುಂದುವರಿದಿದೆ. ಅರಣ್ಯ ಅಧಿಕಾರಿಗಳು ಕೂಂಬಿಂಗ್ ಮುಂದುವರಿಸಿದ್ದು, ಬೋನು ಇಟ್ಟು ಸೆರೆಗೆ ಯತ್ನಿಸಿದ್ದಾರೆ.

ಭಾನುವಾರ ಸಂಜೆ 6:30ರ ವೇಳೆಗೆ ಜಯನಗರ 4ನೇ ಕ್ರಾಸ್‌ನಲ್ಲಿ ಚಿರತೆ ಹೋಲುವ ಪ್ರಾಣಿ ಪತ್ತೆಯಾಗಿದ್ದು, ಇದನ್ನು ನಿಧಿ ಶೆಟ್ಟಿ ಎಂಬ ಬಾಲಕಿ ಮೊಬೈಲ್‌ನಲ್ಲಿ ಸೆರೆಹಿಡಿದಿದ್ದಳು. ಕೂಡಲೇ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದ್ದು, ರಾತ್ರಿಯಾದ ಕಾರಣ ಯಾವುದೇ ಕಾರ್ಯಾಚರಣೆ ನಡೆಸಲು ಸಾಧ್ಯವಾಗಿರಲಿಲ್ಲ. ಸೋಮವಾರ ಈ ವ್ಯಾಪ್ತಿಯಲ್ಲಿ ಮಂಗಳೂರು ವಲಯ ಅರಣ್ಯಾಧಿಕಾರಿ ಪ್ರಶಾಂತ್ ಪೈ ನೇತೃತ್ವದ ತಂಡ ಆಗಮಿಸಿ ಶೋಧ ನಡೆಸಿದಾಗ, ಹೆಜ್ಜೆ ಗುರುತು ಆಧಾರದಲ್ಲಿ ಆ ಪ್ರಾಣಿ ಚಿರತೆಯೇ ಎಂದು ಖಚಿತಪಡಿಸಿದ್ದರು. ಆ ಬಳಿಕ ದಿನವಿಡೀ ಕಾರ್ಯಾಚರಣೆ ನಡೆಸಿದ್ದರೂ ಯಾವುದೇ ಸುಳಿವು ಪತ್ತೆಯಾಗಿರಲಿಲ್ಲ.

ಮಂಗಳವಾರ ಬೆಳಗ್ಗೆ ಇಲಾಖೆಯ 15 ಅಧಿಕಾರಿಗಳು ಮತ್ತೆ ಜಯನಗರ ಪರಿಸರದಲ್ಲಿ ಹುಡುಕಾಟ ಮುಂದುವರಿಸಿದ್ದಾರೆ. ಕಂಕನಾಡಿಯ ಕನಪದವು, ಮಾರ್ತಕಂಪೌಂಡ್, ಬಲ್ಲಾಳ್‌ಗುಡ್ಡೆ ವ್ಯಾಪ್ತಿಯಲ್ಲಿ ಚಿರತೆಯ ಹೆಜ್ಜೆ ಗುರುತು ಪತ್ತೆಯಾಗಿದ್ದು, ಅದೇ ಸ್ಥಳದಲ್ಲಿ ಬೋನು ಅಳವಡಿಸಲಾಗಿದ್ದು ಕಾರ್ಯಾಚರಣೆ ಮುಂದುವರಿಸಲಾಗಿದೆ

ಕಾರ್ಯಾಚರಣೆಯಲ್ಲಿ ವಲಯ ಅರಣ್ಯಾಧಿಕಾರಿ ಪ್ರಶಾಂತ್ ಪೈ, ವಲಯ ಅರಣ್ಯಾಧಿಕಾರಿ ಸಂಜಯ್ ಪೈ, ಉಪವಲಯ ಅರಣ್ಯಾಧಿಕಾರಿ ಸಂಜಯ್, ಅರಣ್ಯ ರಕ್ಷಕರಾದ ವೀಣಾ, ಸೋಮಲಿಂಗ ಹಿಪ್ಪರಗಿ, ಶಿವು, ಉರಗ ರಕ್ಷಕ ಅತುಲ್ ಪೈ ಇದ್ದರು.

 

Comments are closed.