ಕುಂದಾಪುರ: ಪರಿಶಿಷ್ಟ ಜಾತಿಯ ಬಡ ಕುಟುಂಬಗಳಿಗೆ ಮನೆ ನಿರ್ಮಾಣಕ್ಕೆ ನೀಡುತ್ತಿರುವ ಅನುದಾನವನ್ನು 5 ಲಕ್ಷಕ್ಕೆ ಹೆಚ್ಚಿಸಲು ಮುಂದಾಗಿರುವ ಸಮಾಜ ಕಲ್ಯಾಣ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಕಾರ್ಯಕ್ಕೆ ಉತ್ತಮ ಅಭಿಪ್ರಾಯ ವ್ಯಕ್ತವಾಗಿದೆ.

ಕುಂದಾಪುರಕ್ಕೆ ಮಂಗಳವಾರ ಸಚಿವರು ಆಗಮಿಸಿದ್ದು ಕುಂದಾಪುರ ಶಾಸ್ತ್ರಿ ವೃತ್ತದಲ್ಲಿ ಸಚಿವರಿಗೆ ಸ್ವಾಗತ ಕೋರಲಾಯಿತು. ಉಡುಪಿ ಜಿಲ್ಲಾ ಬಿಜೆಪಿ ಎಸ್ಸಿ ಮೋರ್ಚಾ ಜಿಲ್ಲಾಧ್ಯಕ್ಷ ಗೋಪಾಲ ಕಳಿಂಜೆ ನೇತೃತ್ವದಲ್ಲಿ ಸಚಿವರನ್ನು ಅಭಿನಂದಿಸಲಾಯಿತು. ಈ ಸಂದರ್ಭ ಎಸ್ಸಿ ಮೋರ್ಚಾ ಪ್ರಧಾನಕಾರ್ಯದರ್ಶಿ ಕೃಷ್ಣಮೂರ್ತಿ ಡಿ.ಬಿ., ಪುರಸಭಾ ಸದಸ್ಯರು ಪ್ರಭಾಕರ್ ವಿ. ಮೊದಲಾದವರಿದ್ದರು.
ಬಳಿಕ ಮಾತನಾಡಿದ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಸೋಮವಾರದಂದು ವಿಕಾಸಸೌಧದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳ ಜತೆ ಸಭೆ ನಡೆಸಿದ್ದು ಪರಿಶಿಷ್ಟ ಜಾತಿಯ ಪ್ರತಿ ಕುಟುಂಬಗಳ ಮನೆ ನಿರ್ಮಾಣಕ್ಕೆ 1 ಲಕ್ಷ 70 ಸಾವಿರ ನೆರವು ನೀಡಲಾಗುತ್ತಿದೆ. ಈ ಮೊತ್ತದಿಂದ ಒಳ್ಳೆಯ ಮನೆ ನಿರ್ಮಿಸಲು ಸಾಧ್ಯವಿಲ್ಲ. ಆದ್ದರಿಂದ ಪ್ರತಿ ಫಲಾನುಭವಿಗೆ 5 ಲಕ್ಷ ಅನುದಾನ ನೀಡಲು ಅನುಮತಿ ಕೋರಿ ಮುಖ್ಯಮಂತ್ರಿಯವರಿಗೆ ಪ್ರಸ್ತಾವ ಸಲ್ಲಿಸಲಾಗುವುದು ಎಂದರು.
ರಾಜ್ಯದಲ್ಲಿ 17 ಸಾವಿರ ಕೋಟಿ ಬೃಹತ್ ಮೊತ್ತವಿರುವ ಇಲಾಖೆ ಸಮಾಜ ಕಲ್ಯಾಣ ಇಲಾಖೆಯದ್ದಾಗಿದ್ದು 25 ಲಕ್ಷ ಪರಿಶಿಷ್ಟ ಜಾತಿ ಕುಟುಂಬಗಳಿದೆ. ಆ ಕುಟುಂಬಗಳ ಸರ್ವೇ ನಡೆಸಿ ಮನೆ ನೀಡಲು ಅಗತ್ಯ ಕ್ರಮ ಕೈಗೊಳ್ಳಲಾಗುತ್ತದೆ. ಒಂದು ವರ್ಷ ಕಾಲ ಸಮಾಜ ಕಲ್ಯಾಣ ಇಲಾಖೆಯಲ್ಲಿ ಅನಗತ್ಯ ವೆಚ್ಚಕ್ಕೆ ಕಡಿವಾಣ ಹಾಕಲಾಗುವುದು. ಅನಿವಾರ್ಯ ಅಲ್ಲದ ಯೋಜನೆಗಳನ್ನು ತಡೆ ಹಿಡಿಯಲಾಗುವುದು. ಪರಿಶಿಷ್ಟ ಜಾತಿಯ ಕುಟುಂಬಗಳಿಗೆ ಉತ್ತಮವಾದ ಮನೆ, ಶೌಚಾಲಯ, ಶುದ್ಧ ಕುಡಿಯುವ ನೀರು, ವಿದ್ಯುತ್ ಸಂಪರ್ಕ, ಗುಣಮಟ್ಟದ ಆರೋಗ್ಯ ಸೌಲಭ್ಯ ಮತ್ತು ಅವರ ಮಕ್ಕಳಿಗೆ ಉತ್ತಮವಾದ ಶಿಕ್ಷಣ, ಹಕ್ಕುಪತ್ರ ನೀಡಿ ಸಮಾಜವನ್ನು ಮುಖ್ಯವಾಹಿನಿಗೆ ತರಲು ಆದ್ಯತೆ ನೀಡಲಾಗುವುದು. ಸಮಾಜ ಕಲ್ಯಾಣ ಇಲಾಖೆಯಲ್ಲಿ ಸಂಪೂರ್ಣವಾಗಿ ಪಾರದರ್ಶಕತೆ ತರಲಾಗುವುದು ಎಂದು ಸಚಿವರು ತಿಳಿಸಿದರು.
ಓಬಿಸಿ ಮೋರ್ಚಾದ ಐರೋಡಿ ವಿಠಲ್ ಪೂಜಾರಿ ಮೊದಲಾದವರು ಈ ಸಂದರ್ಭದಲ್ಲಿ ಇದ್ದರು.
(ವರದಿ- ಯೋಗೀಶ್ ಕುಂಭಾಸಿ)
Comments are closed.