ಕರಾವಳಿ

ಯಡಮೊಗೆ ಉದಯ್ ಕೊಲೆ ಪ್ರಕರಣದ ತಲೆಮರೆಸಿಕೊಂಡಿರುವ ಆರೋಪಿಯ ನಿರೀಕ್ಷಣಾ ಜಾಮೀನು ಅರ್ಜಿ ವಜಾ

Pinterest LinkedIn Tumblr

ಕುಂದಾಪುರ: ಸಾಮಾಜಿಕ ಕಾರ್ಯಕರ್ತರಾಗಿದ್ದ ಯಡಮೊಗೆ ಉದಯ್ ಗಾಣಿಗ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಮಂದಿ ಆರೋಪಿಗಳ ಪೈಕಿ ಐವರ ಬಂಧನವಾಗಿದೆ. ತಲೆಮರೆಸಿಕೊಂಡಿರುವ ಧನುಷ್ ಯಡಿಯಾಳ ಎನ್ನುವಾತನ ನಿರೀಕ್ಷಣಾ ಜಾಮೀನು ಅರ್ಜಿ ತಿರಸ್ಕರಿಸಿ ಕುಂದಾಪುರದ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ರವೀಂದ್ರ ಎಂ. ಜೋಷಿ ಆದೇಶಿಸಿದ್ದಾರೆ.

(ಕೊಲೆಯಾದ ಉದಯ್ ಗಾಣಿಗ)

ಕೊಲೆ‌ ಕೇಸಿನ ಪ್ರಮುಖ ರುವಾರಿ ಪ್ರಾಣೇಶ್ ಯಡಿಯಾಳನ ಪುತ್ರ ಧನುಷ್ ಕೃತ್ಯ ನಡೆದ ದಿನದಿಂದ ತಲೆಮರೆಸಿಕೊಂಡಿದ್ದು ಈತನ ಮೇಲೆ ಕೊಲೆ ಸಂಚಿನಲ್ಲಿ ಭಾಗಿಯಾಗಿರುವುದು‌ ಮತ್ತು ಕೊಲೆ‌ ನಡೆದ ಸ್ಥಳದಲ್ಲಿ ಇದ್ದ ಆರೋಪವಿದೆ. ವಕೀಲರ ಮೂಲಕ ನ್ಯಾಯಾಲಯಕ್ಕೆ ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಿದ್ದು ಪ್ರಕರಣ ತನಿಖಾ ಹಂತದಲ್ಲಿರುವುದರಿಂದ ಆರೋಪಿಗೆ ಜಾಮೀನು ನೀಡಿದಲ್ಲಿ ಸಾಕ್ಷ್ಯ ನಾಶ ಸಂಭವವಿರುವ ಕಾರಣ ನಿರೀಕ್ಷಣಾ ಜಾಮೀನು ನೀಡಬಾರದು ಎಂದು ಪ್ರಾಸಿಕ್ಯೂಶನ್‌ ಪರ ಜಿಲ್ಲಾ ಸರಕಾರಿ ಅಭಿಯೋಜಕ ಬೇಳೂರು ಪ್ರಕಾಶ್‌ಚಂದ್ರ ಶೆಟ್ಟಿ ನ್ಯಾಯಾಲಯದಲ್ಲಿ ವಾದಿಸಿದ್ದರು.

ಕಳೆದ ಮೂರ್ನಾಲ್ಕು ದಿನದ ಹಿಂದಷ್ಟೇ ಈ ಕೊಲೆ ಕೇಸಿನಲ್ಲಿ ಬಂಧಿತರಾದ ಐವರ ಪೈಕಿ ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಬಾಲಚಂದ್ರ ಭಟ್ ಎಂಬಾತ ತನ್ನ ವಕೀಲರ ಮೂಲಕ ಸೆಶನ್ಸ್ ನ್ಯಾಯಾಲಯಕ್ಕೆ ಜಾಮೀನು ಅರ್ಜಿ ಸಲ್ಲಿಸಿದ್ದು ತಿರಸ್ಕೃತವಾಗಿತ್ತು.

ಕೊಲೆ‌ ಪ್ರಕರಣದ ಹಿನ್ನೆಲೆ…
ಜೂ.5 ಶನಿವಾರ ರಾತ್ರಿ ವೇಳೆ ಯಡಮೊಗೆ ಗ್ರಾಮಪಂಚಾಯತ್ ಅಧ್ಯಕ್ಷ ಪ್ರಾಣೇಶ್ ಯಡಿಯಾಳ್ ಹಾಗೂ ಆತನ‌ ತಂಡ ಉದಯ್ ಗಾಣಿಗ ಅವರ ಮೈಮೇಲೆ ಕಾರು ಹತ್ತಿಸಿ ಆ ಬಳಿಕ ದೊಣ್ಣೆಯಿಂದ ಹೊಡೆದು ಕೊಲೆ ಮಾಡಿದ ಬಗ್ಗೆ ಉದಯ್ ಗಾಣಿಗ ಅವರ ಪತ್ನಿ‌ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಕೊಲೆ ಪ್ರಕರಣದ ಪ್ರಮುಖ ಆರೋಪಿ ಪ್ರಾಣೇಶ್ ಯಡಿಯಾಳನನ್ನು ಮಾರನೇ ದಿನ (ಭಾನುವಾರ) ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ನ್ಯಾಯಾಂಗ ಬಂಧನ ವಿಧಿಸಲಾಗಿತ್ತು. ಪ್ರಕರಣದ ಎರಡನೇ ಆರೋಪಿ ರಾಜೇಶ್ ಭಟ್ ಹಾಗೂ ಕೃತ್ಯಕ್ಕೆ ಕುಮ್ಮಕ್ಕು ನೀಡಿದ ಆರೋಪದಡಿ ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಬಾಲಚಂದ್ರ ಭಟ್ ಬಂಧನವಾಗಿತ್ತು. ಮುಂದುವರಿದು ಆರೋಪಿ ಮನೋಜ್ ಕುಮಾರ್ ಹಾಗೂ ಯಡಮೊಗೆ ಪಂಚಾಯತ್ ಸದಸ್ಯ ಸದಾಶಿವ ನಾಯ್ಕ್ ಎನ್ನುವರನ್ನು ಬಂಧಿಸಲಾಗಿದ್ದು ಎಲ್ಲರೂ ನ್ಯಾಯಾಂಗ ಬಂಧನದಲ್ಲಿದ್ದಾರೆ. ಆದರೆ ಧನುಷ್ ಪರಾರಿಯಾಗಿದ್ದ.

 

Comments are closed.