ಕರಾವಳಿ

‘ಟೋಲ್’ ಹೋರಾಟಕ್ಕೆ ಸಿಕ್ಕ ಗೆಲುವು; ಕೋಟ ಜಿಪಂ ವ್ಯಾಪ್ತಿಯಲ್ಲಿ ವಾಹನ ಸವಾರರಿಗೆ ಶುಲ್ಕ ವಿನಾಯತಿ

Pinterest LinkedIn Tumblr

ಉಡುಪಿ: ಪಾಸ್ಟ್ ಟ್ಯಾಗ್ ವ್ಯವಸ್ಥೆ ಜಾರಿ ಬಂದ ಬಳಿಕ ಸ್ಥಳೀಯರಿಗೆ ಟೋಲ್ ನಲ್ಲಿ ಶುಲ್ಕ ವಿನಾಯತಿ ಆಗ್ರಹಿಸಿ ನಿರಂತರವಾಗಿ ಸಾಸ್ತಾನದಲ್ಲಿ ನಡೆದ ಪ್ರತಿಭಟನೆಗೆ ಯಶಸ್ಸು ದೊರಕಿದ್ದು ಕೋಟ ಜಿಲ್ಲಾಪಂಚಾಯತ್ ವ್ಯಾಪ್ತಿಯ ವಾಹನ ಸವಾರರಿಗೆ ಶುಲ್ಕ ರಹಿತವಾಗಿ ಸಂಚರಿಸಲು ಅನುಮತಿ ದೊರಕಿದೆ.

ಸ್ಥಳೀಯರಿಗೆ ಟೋಲ್ ವಿನಾಯತಿಗೆ ಆಗ್ರಹಿಸಿ ಹೆದ್ದಾರಿ ಜಾಗೃತಿ ಸಮಿತಿಯ ವತಿಯಿಂದ ಆಯೋಜಿಸಿರುವ ಪ್ರತಿಭಟನೆ ಸಾಸ್ತಾನ ಟೋಲ್ ನಲ್ಲಿ ಸಾವಿರಾರು ಸಂಖ್ಯೆಯಲ್ಲಿ ಸ್ಥಳೀಯರ ಉಪಸ್ಥಿತಿಯಲ್ಲಿ ನಡೆದಿದ್ದು ಸಮಿತಿಯ ಐದು ಮಂದಿ ಸದಸ್ಯರು, ಲೋಕಸಭಾ ಸದಸ್ಯರು, ಶಾಸಕರು, ಜಿಲ್ಲಾಡಳಿತ ಮತ್ತು ನವಯುಗ ಕಂಪೆನಿಯೊಂದಿಗೆ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸಭೆ ನಡೆದಿದ್ದು, ಸಭೆಯಲ್ಲಿ ಜನಪ್ರತಿನಿಧಿಗಳು ಸ್ಥಳೀಯರಿಗೆ ಸಂಪೂರ್ಣ ಶುಲ್ಕ ವಿನಾಯತಿಗೆ ಆಗ್ರಹಿಸಿದರು.ಹೆದ್ದಾರಿ ಜಾಗೃತಿ ಸಮಿತಿಯ ಪರವಾಗಿ ಅಧ್ಯಕ್ಷರಾದ ಶ್ಯಾಮಸುಂದರ್ ನಾಯರಿ, ಪದಾಧಿಕಾರಿಗಳಾದ ಆಲ್ವಿನ್ ಅಂದ್ರಾದೆ, ದಿನೇಶ್ ಗಾಣಿಗ, ಸತೀಶ್ ಪೂಜಾರಿ ಭೋಜ ಪೂಜಾರಿ ಮೊದಲಾದವರು ಸಭೆಯಲ್ಲಿ ಭಾಗವಹಿಸಿದ್ದರು.

ಸಭೆಯಲ್ಲಿದ ಸಂಸದೆ ಶೋಭಾ ಕರಂದ್ಲಾಜೆ, ಮತ್ತು ಉಡುಪಿ ಶಾಸಕ ರಘುಪತಿ ಭಟ್ ಅವರು ಸ್ಥಳೀಯರಿಗೆ ಯಾವುದೇ ಕಾರಣಕ್ಕೂ ಟೋಲ್ ಪಡೆಯದಂತೆ ಪಟ್ಟು ಹಿಡಿದರು. ಇದಕ್ಕೆ ನವಯುಗ ಕಂಪೆನಿ ಒಪ್ಪದೆ ಇದ್ದಾಗ ಆಕ್ರೋಶಗೊಂಡ ಶಾಸಕ ರಘುಪತಿ ಭಟ್ ಮತ್ತು ಸಂಸದರು ಕಂಪೆನಿಗೆ ಟೋಲ್ ಪ್ಲಾಜಾಗಳಲ್ಲಿ ಮುಂದಿನ ದಿನಗಳಲ್ಲಿ ಮುಂದಿನ ದಿನಗಳಲ್ಲಿ ಜಿಲ್ಲಾಡಳಿತ ಯಾವುದೇ ಭದ್ರತೆ ನೀಡುವುದನ್ನು ನಿಲ್ಲಿಸುವಂತೆ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಸೂಚಿಸಿದರು.

ವಿಸ್ತ್ರತ ಚರ್ಚೆಯ ಬಳಿಕ ಜಿಲ್ಲಾಡಳಿತ ಹಾಗೂ ಜನಪ್ರತಿನಿಧಿಗಳು ಹೆದ್ದಾರಿ ಜಾಗೃತಿ ಸಮಿತಿಯ ಸದಸ್ಯರ ಮನವಿಗೆ ಪೂರಕವಾಗಿ ಸ್ಪಂದಿಸಿ ಕೋಟ ಜಿಲ್ಲಾ ಪಂಚಾಯತ್ ವ್ಯಾಪ್ತಿಯಲ್ಲಿ ಈವರೆಗೆ ಸ್ಥಳೀಯರಿಗೆ ಇದ್ದ ಶುಲ್ಕ ವಿನಾಯತಿ ಮುಂದುವರೆಸಲು ನವಯುಗ ಕಂಪೆನಿ ಸಂಬಂದಪಟ್ಟವರು ಒಪ್ಪಿಗೆ ಸೂಚಿಸಿದರು.

ಸಭೆಯ ಬಳಿಕ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಹೆದ್ದಾರಿ ಜಾಗೃತಿ ಸಮಿತಿಯ ಪದಾಧಿಕಾರಿಗಳು ಶುಲ್ಕ ವಿನಾಯತಿಯ ಘೋಷಣೆಯನ್ನು ಮಾಡಿದರು. ಅಲ್ಲದೆ ಸ್ಥಳೀಯ ಕೋಟ ಜಿಪಂ ವ್ಯಾಪ್ತಿಯ ವಾಹನಗಳ ದಾಖಲೆಗಳನ್ನು ಪಂಚಾಯತ್ ಹಂತದಲ್ಲಿ ಪಡೆದುಕೊಂಡು ಅವರಿಗೆ ಸ್ಟಿಕ್ಕರ ನೀಡುವದರ ಕುರಿತು ಮುಂದಿನ ದಿನಗಳಲ್ಲಿ ಚಿಂತನೆ ನಡೆಸಲಾಗುವುದು ಎಂದರು.

Comments are closed.