ಕರಾವಳಿ

ಮತದಾರರು ಆಮಿಷಗಳಿಗೆ ಬಲಿಯಾಗದೇ ಮತ ಚಲಾಯಿಸಬೇಕು : ಜಿಲ್ಲಾ ನ್ಯಾಯಾಧೀಶರು

Pinterest LinkedIn Tumblr

ಉಡುಪಿ: ಚುನಾವಣಾ ಸಂದರ್ಭದಲ್ಲಿ ಮತದಾರರು, ಅಭ್ಯರ್ಥಿಗಳು ಒಡ್ಡುವ ಯಾವುದೇ ಆಮಿಷಗಳಿಗೆ ಬಲಿಯಾಗದೆ, ಪ್ರಾಮಾಣಿಕವಾಗಿ ಮತ್ತು ನ್ಯಾಯ ಸಮ್ಮತವಾಗಿ ಮತ ಚಲಾಯಿಸಿ, ಚುನಾವಣೆಯ ಘನತೆಯನ್ನು ಎತ್ತಿ ಹಿಡಿಯಬೇಕು ಎಂದು ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಜೆ.ಎನ್. ಸುಬ್ರಹ್ಮಣ್ಯ ಹೇಳಿದರು.

ಅವರು ಉಡುಪಿಯ ಪುರಭವನದಲ್ಲಿ, ಜಿಲ್ಲಾಡಳಿತ ಮತ್ತು ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ನಡೆದ ರಾಷ್ಟ್ರೀಯ ಮತದಾರರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಮತದಾನ ಮಾಡಲು ಅರ್ಹತೆ ಪಡೆದ ಪ್ರತಿಯೊಬ್ಬರೂ ಚುನಾವಣೆಯಲ್ಲಿ ತಪ್ಪದೇ ಮತ ಚಲಾಯಿಸಬೇಕು. ಮತದಾನ ಮಾಡಲು ಆಮಿಷ ನೀಡುವವರ ಕುರಿತು ಎಚ್ಚರದಿಂದಿರಬೇಕು. ಯಾವುದೇ ಒತ್ತಡ, ಆಮಿಷ, ಪ್ರಭಾವಗಳಿಗೆ ಒಳಗಾಗದೇ ಪ್ರಾಮಾಣಿಕತೆಯಿಂದ ತಮ್ಮ ಅಮೂಲ್ಯ ಮತ ಚಲಾಯಿಸಿ, ಯೋಗ್ಯ ಅಭ್ಯರ್ಥಿಯನ್ನು ಆಯ್ಕೆ ಮಾಡಬೇಕು.

ಚುನಾವಣೆಯಲ್ಲಿ ಹಣ ಹಂಚುವುದನ್ನು ತಡೆಯುವ ನಿಟ್ಟಿನಲ್ಲಿ, ಚುನಾವಣೆಗಿಂತ ಕನಿಷ್ಠ 2 ವರ್ಷಗಳ ಮುಂಚೆ, ಹಣ ಸಂಗ್ರಹ ಮಾಡುವವರ ಕುರಿತು ನಿಗಾವಹಿಸುವುದರಿಂದ, ಮತದಾರರಿಗೆ ಅಕ್ರಮ ಹಣ ವಿತರಣೆ ಮಾಡುವುದನ್ನು ತಡೆಯಲು ಸಾಧ್ಯ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಮತದಾರರ ಪ್ರತಿಜ್ಞಾ ವಿಧಿಯನ್ನು ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಬೋಧಿಸಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಕಾವೇರಿ, ಸಂವಿಧಾನ ನೀಡಿರುವ ಮತದಾನದ ಹಕ್ಕನ್ನು ಜವಾಬ್ದಾರಿಯಿಂದ ಚಲಾಯಿಸಿ. ಪ್ರಜಾಪ್ರಭುತ್ವದ ಯಶಸ್ಸಿಗೆ ಚುನಾವಣೆ ಅಗತ್ಯವಾಗಿದ್ದು, ಮತದಾನದಿಂದ ಉತ್ತಮ ಜನಪ್ರತಿನಿಧಿಯನ್ನು ಆಯ್ಕೆ ಮಾಡಿದಲ್ಲಿ ದೇಶದ ಪ್ರಗತಿ ಸಾಧ್ಯವಾಗಲಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಜಿ.ಜಗದೀಶ್ ಮಾತನಾಡಿ, ಉಡುಪಿ ಜಿಲ್ಲೆಯಲ್ಲಿ 10,16,660 ಮತದಾರರಿದ್ದು, ಈ ವರ್ಷ 20,000 ಯುವ ಮತದಾರರನ್ನು ಸೇರ್ಪಡೆ ಮಾಡುವ ಗುರಿ ಹೊಂದಿದ್ದು, ಕೊರೋನಾದಿಂದ ಕಾಲೇಜುಗಳು ಪೂರ್ಣ ಪ್ರಮಾಣದಲ್ಲಿ ಆರಂಭಗೊಳ್ಳದ ಹಿನ್ನಲೆಯಲ್ಲಿ 9,702 ಮಂದಿ ಯುವ ಮತದಾರರ ಸೇರ್ಪಡೆಯಾಗಿದ್ದು, 18 ವರ್ಷ ತುಂಬಿದ ಪ್ರತಿಯೊಬ್ಬರೂ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ ಮಾಡಲು ಅರ್ಹರಿದ್ದು, ಜಿಲ್ಲೆಯ ಎಲ್ಲಾ ಕಾಲೇಜುಗಳಿಗೆ ಕೂಡಲೇ ಮತದಾರರ ಪಟ್ಟಿ ಸೇರ್ಪಡೆ ಕುರಿತು ಅರ್ಜಿ ಫಾರಂಗಳನ್ನು ಕಳುಹಿಸಲಾಗುವುದು. ಎಲ್ಲಾ ವಿದ್ಯಾರ್ಥಿಗಳು ಅರ್ಜಿಗಳನ್ನು ಭರ್ತಿ ಮಾಡಿ ಮತದಾರರ ಪಟ್ಟಿಗೆ ಸೇರ್ಪಡೆಗೊಳ್ಳುವ ಜೊತೆಗೆ, ಮತದಾರರ ಪಟ್ಟಿಗೆ ಇನ್ನೂ ಸೇರ್ಪಡೆಗೊಳ್ಳದ ತಮ್ಮ ನೆರೆ ಹೊರೆಯವರನ್ನೂ ಸೇರ್ಪಡೆ ಮಾಡಿ. ಚುನಾವಣೆ ಸಂದರ್ಭದಲ್ಲಿ ಹಣ, ಜಾತಿ, ಭಾಷೆ, ಧರ್ಮದ ಆಮಿಷಗಳಿಗೆ ಬಲಿಯಾಗದೇ ಸಮರ್ಥ ವ್ಯಕ್ತಿಗೆ ಮತ ಚಲಾಯಿಸಿ ಎಂದು ಹೇಳಿದರು.

ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು ಸ್ವಾಗತಿಸಿದರು.
ಜಿಲ್ಲಾ ಪಂಚಾಯತ್ ಸಿಇಓ ಡಾ.ನವೀನ್ ಭಟ್, ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್, ಕುಂದಾಪುರ ಉಪ ವಿಭಾಗಾಧಿಕಾರಿ ರಾಜು, ಉಡುಪಿ ತಹಸೀಲ್ದಾರ್ ಪ್ರದೀಪ್ ಕುರ್ಡೆಕರ್, ಡಿಡಿಪಿಐ ಎನ್.ಹೆಚ್.ನಾಗೂರ, ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ಭಾಸ್ಕರ್ ಶೆಟ್ಟಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಯುವ ಮತದಾರರಿಗೆ ಎಪಿಕ್ ಕಾರ್ಡ್ ವಿತರಣೆ ಹಾಗೂ ರಾಷ್ಟ್ರೀಯ ಮತದಾರರ ದಿನಾಚರಣೆ ಅಂಗವಾಗಿ ಏರ್ಪಡಿಸಿದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.

Comments are closed.