ಕುಂದಾಪುರ: ಎಎಸ್‍ಐಯೊಬ್ಬರು ನಿವೃತ್ತಿಯಾಗಬೇಕಿದ್ದ ದಿನವಾದ ಭಾನುವಾರ ಮಧ್ಯಾಹ್ನ ಬೀಳ್ಕೊಡುಗೆಯ ಸಂದರ್ಭ ಠಾಣೆಯಲ್ಲಿ ಊಟ ಮಾಡುತ್ತಿದ್ದಾಗಲೇ ಬ್ರೈನ್ ಹ್ಯಾಮರೇಜ್‍ಗೊಳಗಾಗಿ ಮಣಿಪಾಲ ಆಸ್ಪತ್ರೆಯಲ್ಲಿ ಎರಡು ದಿನಗಳ ಕಾಲ ಜೀವನ್ಮರಣ ಹೋರಾಟ ನಡೆಸಿ ಮೃತ ಪಟ್ಟಿದ್ದಾರೆ.
ಕೋಟ ಪೊಲೀಸ್ ಠಾಣೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಎಎಸ್‍ಐ ಆನಂದ ವೆಂಕಟ್ ದೇವಾಡಿಗ(60) ಎಂಬುವರೇ ಬ್ರೈನ್ ಹ್ಯಾಮರೇಜ್‍ಗೊಳಗಾಗಿ ಮೃತಪಟ್ಟವರು.
ಎಎಸ್‍ಐ ಆನಂದ ವೆಂಕಟ್ ಅವರು ಮೇ 31ರಂದು ನಿವೃತ್ತಿಯಾಗಬೇಕಿದ್ದ ಹಿನ್ನೆಲೆ ಭಾನುವಾರದಂದು ಠಾಣೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಬೀಳ್ಕೊಡುಗೆ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಭಾನುವಾರ ಮಧ್ಯಾಹ್ನ ಠಾಣೆಯೊಳಗೆ ಊಟ ಮಾಡುತ್ತಿದ್ದಾಗಲೇ ಆನಂದ ವೆಂಕಟ್ ಕುಸಿದು ಬಿದ್ದಿದ್ದಾರೆ. ತಕ್ಷಣ ವಾಹನದಲ್ಲಿ ಸಮೀಪದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯುಯ್ದು ಬಳಿಕ ಹೆಚ್ಚಿನ ಚಿಕಿತ್ಸೆಗೆ ತಕ್ಷಣ ಮಣಿಪಾಲ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ ಪರೀಕ್ಷಿಸಿದ ವೈದ್ಯರು ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟಿರುವುದಾಗಿ ತಿಳಿಸಿದ್ದು, ಐಸಿಯುನಲ್ಲಿ ಎರಡು ದಿನದಿಂದ ಆನಂದ ವೆಂಕಟ್‌ಅವರಿಗೆ ಚಿಕಿತ್ಸೆ ಕೊಡಲಾಗುತ್ತಿತ್ತು. ಮಂಗಳವಾರ ಅವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಮೃತ ಆನಂದ ವೆಂಕಟ್ ಅವರು ಪತ್ನಿ, ಪುತ್ರ ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.
Comments are closed.