ಕರಾವಳಿ

ಮೀನುಗಾರರ ಸಾಲಮನ್ನದ ಬಗ್ಗೆ ಉಡುಪಿ, ಕಾಪು ಶಾಸಕರ ಸಮಕ್ಷಮ ಉಡುಪಿಯಲ್ಲಿ ಮೀನುಗಾರಿಕಾ ಸಚಿವ ಕೋಟ ಸಭೆ

Pinterest LinkedIn Tumblr

ಉಡುಪಿ: ಮೀನುಗಾರರ ಸಾಲ ಮನ್ನಾ ಯೋಜನೆಗೆ ಸಂಬಂಧಪಟ್ಟಂತೆ ರಾಷ್ಟ್ರೀಕೃತ ಬ್ಯಾಂಕುಗಳ ಹಿರಿಯ ಅಧಿಕಾರಿಗಳು ಹಾಗೂ ಲೀಡ್ ಬ್ಯಾಂಕ್ ಮ್ಯಾನೇಜರ್ ಅವರೊಂದಿಗೆ ಪ್ರಮುಖ ಮೀನುಗಾರರ ಸಹಕಾರ ಸಂಘಗಳ ಅಧ್ಯಕ್ಷರು, ಕಾರ್ಯದರ್ಶಿಗಳು ಹಾಗೂ ಮೀನುಗಾರಿಕಾ ಇಲಾಖೆಯ ಅಧಿಕಾರಿಗಳ ಸಭೆ ಮೀನುಗಾರಿಕಾ ಮಂತ್ರಿ ಕೋಟ ಶ್ರೀನಿವಾಸ ಪೂಜಾರಿ‌ಯವರ ಶಾಸಕರ ಸಮಕ್ಷಮ ಉಡುಪಿ ಜಿಲ್ಲಾಧಿಕಾರಿಯವರ ಕಚೇರಿಯಲ್ಲಿ ನಡೆಯಿತು.

ಸಾಲಮನ್ನಾದ ಬಗ್ಗೆ ಸಾಲಗಾರರ ಖಾತೆಗೆ ಹಣ ಜಮಾವಣೆ ಆಗುವ ಕುರಿತು ಲೀಡ್ ಬ್ಯಾಂಕ್ ಮ್ಯಾನೇಜರ್ ಅಂಕಿ ಅಂಶಗಳೊಂದಿಗೆ ಮಾಹಿತಿ ನೀಡುತ್ತಾ, ಈಗಾಗಲೇ ಆರ್ಥಿಕ ಇಲಾಖೆಯ ಮೂಲಕ 60 ಕೋಟಿಗೂ ಮಿಕ್ಕಿ ಹಣ ಬಿಡುಗಡೆಯಾದ ಹಿನ್ನಲೆಯಲ್ಲಿ, ಫಲಾನುಭವಿಗಳ ಡಾಟಾ ಎಂಟ್ರಿ ಮುಗಿಯುತ್ತಾ ಬಂದಿದೆ. ಸದ್ಯದಲ್ಲೇ ಸಾಲಗಾರರ ಖಾತೆಗೆ ಹಣ ಜಮಾವಣೆ ಆಗಲಿದೆ ಎಂದು ವಿವರಿಸಿದರು.

ಮೀನುಗಾರಿಕಾ ಇಲಾಖೆಯ ಅಧಿಕಾರಿಗಳು ಹಾಗೂ ಮೀನುಗಾರಿಕಾ ಸಹಕಾರ ಸಂಘಗಳ ಕಾರ್ಯದರ್ಶಿಯವರು, ಸಾಲ ಕೊಟ್ಟ ಬ್ಯಾಂಕುಗಳ ಸಂಪರ್ಕದಲ್ಲಿ ನಾವಿದ್ದು, ಡಾಟಾ ಎಂಟ್ರಿಗೆ ನಮ್ಮ ಕಡೆಯ ಸಿಬ್ಬಂದಿಗಳು ಸಹಕಾರ ನೀಡುತ್ತಿದ್ದಾರೆ ಎಂದು ವಿವರಿಸಿದರು.

ಸಚಿವ ಕೋಟ ಮಾತನಾಡುತ್ತಾ, ಕೋವಿಡ್ -19 ಸಂಕಷ್ಟದ ದಿನಗಳಲ್ಲಿ ಹಣ ಬಿಡುಗಡೆ ಮಾಡಿರುವುದಕ್ಕೆ ಮುಖ್ಯಮಂತ್ರಿಗಳಿಗೆ ಅಭಿನಂದನೆ ಹೇಳಿ, ತುರ್ತಾಗಿ ಮೀನುಗಾರರ ಖಾತೆಗೆ ಹಣ ಜಮಾವಣೆ ಮಾಡಲು ಕ್ರಮ ಕೈಗೊಳ್ಳಬೇಕೆಂದು ಸೂಚಿಸಿದರು.

ಸಭೆಯಲ್ಲಿ ಶಾಸಕರಾದ ಕೆ. ರಘುಪತಿ ಭಟ್, ಲಾಲಾಜಿ ಆರ್ ಮೆಂಡನ್, ಜಿಲ್ಲಾ ಪಂಚಾಯತ್ ಅಧ್ಯಕ್ಷ ದಿನಕರ ಬಾಬು, ಜಿಲ್ಲಾಧಿಕಾರಿಗಳಾದ ಜಿ. ಜಗದೀಶ್, ದ.ಕ ಹಾಗೂ ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಷನ್ ಅಧ್ಯಕ್ಷ ಯಶ್ ಪಾಲ್ ಸುವರ್ಣ, ಅಪರ ಜಿಲ್ಲಾಧಿಕಾರಿ , ಮೀನುಗಾರಿಕೆ ಇಲಾಖೆಯ ಉಪ ನಿರ್ದೇಶಕರು, ಲೀಡ್ ಬ್ಯಾಂಕ್ ಅಧಿಕಾರಿಗಳು ಹಾಗೂ ವಿವಿಧ ಪ್ರಾಥಮಿಕ ಮೀನುಗಾರಿಕೆ ಸಹಕಾರ ಸಂಘಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.

Comments are closed.