ಕರಾವಳಿ

ಭಟ್ಕಳದಲ್ಲಿ ಒಂದೇ ದಿನ 12 ಕೊರೋನಾ ಪಾಸಿಟಿವ್ ಪ್ರಕರಣ

Pinterest LinkedIn Tumblr


ಕಾರವಾರ: ಕೊರೋನಾ ಭಯದಿಂದ ಹೊರಬರುವ ಹೊಸ್ತಿಲಲ್ಲಿ ನಿಂತಿದ್ದ ಉತ್ತರ ಕನ್ನಡ ಜಿಲ್ಲೆಯ ಭಟ್ಕಳಕ್ಕೆ ಮತ್ತೆ ಕೊರೋನಾ ವಕ್ಕರಿಸಿದೆ. ಒಂದಲ್ಲ ಎರಡಲ್ಲ ಒಂದೇ ದಿನ 12 ಪ್ರಕರಣ ಬೆಳಕಿಗೆ ಬಂದಿದ್ದು, ಕೇವಲ ಭಟ್ಕಳ ಅಷ್ಟೆ ಅಲ್ಲದೇ ಇಡೀ ಉತ್ತರ ಕನ್ನಡ ಜಿಲ್ಲೆಯ ಜನರನ್ನು ಆತಂಕಕ್ಕೆ ದೂಡಿದೆ.

ಆರಂಭದಲ್ಲಿ ಭಟ್ಕಳದಲ್ಲಿ ಒಟ್ಟು 12 ಜನರಲ್ಲಿ ಕೊರೋನಾ ಸೋಂಕು ಪತ್ತೆ ಆಗಿತ್ತು. ಕೊನೆಯ ಸೋಂಕಿತ ವ್ಯಕ್ತಿ ಏಪ್ರಿಲ್ ಅಂತ್ಯದಲ್ಲಿ ಗುಣಮುಖರಾಗಿ ಮನೆ ಸೇರಿದ್ದರು. ಏಪ್ರಿಲ್ 14ನೇ ತಾರೀಕಿನಂದು ಕೊನೆಯದಾಗಿ ಸೋಂಕು ಪತ್ತೆ ಆಗಿತ್ತು. ಬಳಿಕ 20 ದಿನದವರೆಗೂ ಜಿಲ್ಲೆಯ ಯಾವ ತಾಲೂಕಿನಲ್ಲೂ ಕೊರೋನಾ ಸೋಂಕಿತರು ಪತ್ತೆ ಆಗಿರಲಿಲ್ಲ. ಜತೆಗೆ ಭಟ್ಕಳದಲ್ಲೂ ಕೂಡಾ ಕೊರೋನಾ ಸದ್ದು ಅಡಗಿತ್ತು. ಜಿಲ್ಲೆ ಕೊರೋನಾ ಮುಕ್ತ ಆಯಿತು ಎನ್ನುವಾಗಲೇ 20 ದಿನದ ಬಳಿಕ 18 ವರ್ಷದ ಯುವತಿಯಲ್ಲಿ ಕೊರೋನಾ ಸೋಂಕು ಕಾಣಿಸಿಕೊಳ್ಳುವ ಮೂಲಕ ಆತಂಕ ಹುಟ್ಟಿಸಿತು. ಈಗ ಇದರ ಬೆನ್ನಲ್ಲೇ ಈ ಯುವತಿಯ ಸಂಪರ್ಕದಿಂದ ಒಂದೇ ದಿನಕ್ಕೆ 12 ಜನರಲ್ಲಿ ಸೋಂಕು ಕಾಣಿಸಿಕೊಂಡಿದ್ದು, ಭಟ್ಕಳದ ಜನತೆಯನ್ನು ಬೆಚ್ಚಿ ಬೀಳಿಸಿದೆ. ಇನ್ನು ಮುಂದಿನ ದಿನದಲ್ಲಿ ಭಟ್ಕಳದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗುವ ಲಕ್ಷಣಗಳು ಹೆಚ್ಚಾಗಿದೆ.

ಭಟ್ಕಳದ 18 ವರ್ಷದ ಸೋಂಕಿತ ಯುವತಿಯ ಅಕ್ಕ, ಭಾವ ಏಪ್ರಿಲ್ 21ರಂದು ಪಕ್ಕದ ಜಿಲ್ಲೆ ಮಂಗಳೂರಿನ ಫಸ್ಟ್ ನ್ಯೂರೊ ಆಸ್ಪತ್ರೆಗೆ ತೆರಳಿ ತಮ್ಮ 5 ತಿಂಗಳ ಮಗುವಿಗೆ ಚಿಕಿತ್ಸೆ ಪಡೆದು ವಾಪಾಸ್ ಬಂದಿದ್ದರು. ಈ ಸಮಯದಲ್ಲಿ ಮೊದಲು ಇವರ ಸಂಪರ್ಕಕ್ಕೆ ಸಿಕ್ಕಿದ್ದು ಇವರ ಸಂಬಂಧಿ 18 ವರ್ಷದ ಸೋಂಕಿತೆ ಯುವತಿ. ಈ ಯುವತಿಯಲ್ಲಿ ಕಾಣಿಸಿಕೊಂಡ ಸೋಂಕಿನಿಂದ ಈಕೆಯ ಸಂಪರ್ಕದಲ್ಲಿ ಇದ್ದ ಇವರ ಸಂಬಂಧಿ ಮತ್ತು ಅಕ್ಕಪಕ್ಕದ ಮನೆಯವರು ಸೇರಿ ಒಟ್ಟು 12 ಜನರಲ್ಲಿ ಸೋಂಕು ಕಾಣಿಸಕೊಂಡಿದೆ.

ಜಿಲ್ಲಾಡಳಿತಕ್ಕೆ ಫಸ್ಟ್ ನ್ಯೂರೊ ಆಸ್ಪತ್ರೆಯೇ ಸೋಂಕಿನ ಮೂಲ ಎಂದು ತಿಳಿಯುತ್ತಿದ್ದಂತೆ ಒಟ್ಟು 100ಕ್ಕೂ ಹೆಚ್ಚು ಜನರ ಮಾದರಿಯನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು, ವರದಿಗಾಗಿ ಕಾಯಲಾಗುತ್ತಿದೆ.

ಒಟ್ಟಾರೆ ಮಂಗಳೂರಿನ ಫಸ್ಟ್ ನ್ಯೂರೊ ಆಸ್ಪತ್ರೆಯ ನಂಟಿನ ಕೊರೋನಾ ಗಂಟು ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ ಭಾರೀ ಆತಂಕ ತಂದಿದೆ. ದುಬೈನಿಂದ ಸೋಂಕು ತಂದವರಕ್ಕಿಂತಲೂ ಹೆಚ್ಚು ಆತಂಕ ಈಗ ಫಸ್ಟ್ ನ್ಯೂರೋ ಆಸ್ಪತ್ರೆಯ ಸಂಪರ್ಕದಿಂದ ಬಂದಿದ್ದು, ಜಿಲ್ಲೆಯ ಜನ ಕಂಗಾಲಾಗಿದ್ದಾರೆ.

Comments are closed.