ಕರಾವಳಿ

ಪಾಕ್‌ ಪರ ಘೋಷಣೆ ಕೂಗಿದಾತನಿಗೆ ಜಿಲ್ಲಾ ಸರ್ಜನ್ ನಿಗಾದಲ್ಲಿ ಚಿಕಿತ್ಸೆ

Pinterest LinkedIn Tumblr

ಕುಂದಾಪುರ: ಇಲ್ಲಿನ ಮಿನಿ ವಿಧಾನಸೌಧದಲ್ಲಿ ಪಾಕ್‌ ಪರ ಘೋಷಣೆ ಕೂಗಿದ ವ್ಯಕ್ತಿಯನ್ನು ಬುಧವಾರ ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ನ್ಯಾಯಾಲಯ ಆರೋಪಿಯನ್ನು ಜಿಲ್ಲಾಸ್ಪತ್ರೆಯ ಸರ್ಜನ್‌ ಅವರ ಸುಪರ್ದಿಗೆ ನೀಡಿದೆ.

ಆರೋಪಿ ಕೋಡಿ ಸರಕಾರಿ ಆಸ್ಪತ್ರೆ ಬಳಿಯ ನಿವಾಸಿ ರಾಘವೇಂದ್ರ ಗಾಣಿಗ (43) ಸೋಮವಾರ ಇಲ್ಲಿನ ಮಿನಿವಿಧಾನಸೌಧದಲ್ಲಿ ಪಾಕಿಸ್ಥಾನ ಜಿಂದಾಬಾದ್‌ ಘೋಷಣೆ ಕೂಗಿದ್ದ. ಪೊಲೀಸರು ಬಂಧಿಸಿ ನ್ಯಾಯಾಧೀಶರೆದುರು ಹಾಜರುಪಡಿಸಿದಾಗ ನ್ಯಾಯಾಲಯ ಮಾ. 16ರ ವರೆಗೆ ನ್ಯಾಯಾಂಗ ಬಂಧನ ವಿಧಿಸಿತ್ತು. ಈ ಮಧ್ಯೆ ಪೊಲೀಸರು ಕೃತ್ಯದ ಹಿಂದೆ ಯಾರದ್ದಾದರೂ ಪ್ರೇರಣೆ ಇದೆಯೇ ಎನ್ನುವ ಬಗೆಗಿನ ತನಿಖೆ ಹಿನ್ನೆಲೆ ಹೆಚ್ಚಿನ ವಿಚಾರಣೆಗೆ ಆರೋಪಿಯನ್ನು ಪೊಲೀಸ್‌ ಕಸ್ಟಡಿಗೆ ಕೇಳಿದ್ದರು. ಅದಕ್ಕಾಗಿ ಬುಧವಾರ ಹಿರಿಯಡಕ ಜೈಲಿನಿಂದ ಕರೆತಂದು ಜೆ.ಎಂ.ಎಫ್.ಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಆರೋಪಿ ಪರ ವಕೀಲರು ಆರೋಪಿ ರಾಘವೇಂದ್ರ ಮಾನಸಿಕ ಅಸ್ವಸ್ಥನಾಗಿದ್ದು, ಯಾವುದೇ ದುರುದ್ದೇಶವಿಲ್ಲದೇ ಘೋಷಣೆ ಕೂಗಿದ್ದಾನೆ. ಆರೋಪಿಗೆ ಚಿಕಿತ್ಸೆ ಅಗತ್ಯವಿದ್ದು, ಜಾಮೀನು ನೀಡಬೇಕು ಎಂದು ವಾದಿಸಿದ್ದರು.

ನ್ಯಾಯಾಧೀಶರು ಆರೋಪಿಯನ್ನು ಜಿಲ್ಲಾ ಸರ್ಜನ್‌ ಅವರಿಗೆ ಒಪ್ಪಿಸಿ ಅವರ ನಿಗಾದಲ್ಲಿ ಇರಿಸುವಂತೆ ಸೂಚಿಸಿದರು. ಮಾ. 13ರ ವರೆಗೆ ಅವರು ನಿಗಾವಹಿಸಿ ಬಳಿಕ ಅವರ ವರದಿ ಆಧಾರದಲ್ಲಿ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಬೇಕೇ, ಪೊಲೀಸ್‌ ಕಸ್ಟಡಿಗೆ ಒಪ್ಪಿಸಬೇಕೇ ಎಂಬ ಕುರಿತು ಸೂಚಿಸುವುದಾಗಿ ಹೇಳಿದ್ದಾರೆ.

Comments are closed.