
ಮಂಗಳೂರು ಸೆಪ್ಟಂಬರ್ 26 ; ಬೆಳೆಯುವ ಮಕ್ಕಳ ಪೌಷ್ಟಿಕಾಂಶ ಹೀರಿ ಬೆಳೆಯುವ ಜಂತುಹುಳಗಳ ನಿವಾರಣೆಗಾಗಿ ಅಲ್ಪೆಂಡಝೋಲ್ ಮಾತ್ರೆ ಪ್ರತಿಯೊಬ್ಬ ವಿದ್ಯಾರ್ಥಿಗಳು ಸೇವಿಸುವಂತೆ ಶಿಕ್ಷಕರು ನೋಡಿಕೊಳ್ಳಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ ಆರ್ ಸೆಲ್ವಮಣಿ ಹೇಳಿದರು.
ಬುಧವಾರ ಸರಕಾರಿ ಮಹಿಳಾ ಪದವಿ ಪೂರ್ವ ಕಾಲೇಜು ರಥಬೀದಿ ಮಂಗಳೂರು ಇಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಪದವಿಪೂರ್ವ ಶಿಕ್ಷಣ ಇಲಾಖೆ, ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ ಹಾಗೂ ಸರಕಾರಿ ಮಹಿಳಾ ಪದವಿ ಪೂರ್ವ ಕಾಲೇಜು ರಥಬೀದಿ ಮಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ರಾಷ್ಟ್ರೀಯ ಜಂತುಹುಳ ನಿವಾರಣಾ ಕಾರ್ಯಕ್ರಮದ ಉದ್ಘಾಟಿಸಿ ಅವರು ಮಾತನಾಡಿದರು.
ಬಯಲು ಶೌಚದಿಂದಾಗಿ, ಬರಿಗಾಲಿನಲ್ಲಿ ನಡೆದಾಗ ಹಾಗೂ ಕಲುಷಿತ ಕೈಗಳಿಂದ ಆಹಾರ ಸೇವನೆ ಮಾಡುವುದರಿಂದ ಜಂತು ಹುಳುಗಳು ದೇಹದೊಳಗೆ ಪ್ರವೇಶಿಸಿ ಕರುಳಿನಲ್ಲಿ ವಾಸಿಸುವ ಜೀವಿಗಳಾಗಿ ಬೆಳೆಯುತ್ತದೆ. ಇವುಗಳು ಮಕ್ಕಳಲ್ಲಿನ ಪೌಷ್ಠಿಕಾಂಶ ಹೀರುವುದರಿಂದ ರಕ್ತ ಹೀನತೆ ಉಂಟು ಮಾಡಿ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಶಾಲೆಯ ಮಕ್ಕಳಲ್ಲಿನ ಕಲಿಕಾ ಸಾಮಥ್ರ್ಯ ಮತ್ತು ಆರೋಗ್ಯ ಸುಧಾರಿಸುವ ನಿಟ್ಟಿನಲ್ಲಿ ಜಂತು ಹುಳುಗಳು ದೇಹದೊಳಗೆ ಪ್ರವೇಶಿಸದಂತೆ ಮುನ್ನಚ್ಚರಿಕೆ ವಹಿಸಿ ಎಂದು ಸಲಹೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ವಾಸುದೇವ ಕಾಮತ್, ಹಿಂದೆ ಬಹುತೇಕ ಮಕ್ಕಳಲ್ಲಿ ಪೂರ್ವ ಕಾಲದಲ್ಲಿ ಜಂತು ಹುಳು ಸಮಸ್ಯೆ ಕಾಣುತ್ತಿತ್ತು, ಆದರೆ ಇತ್ತೀಚಿನ ದಿನಗಳಲ್ಲಿ ಆ ಸಮಸ್ಯೆ ತುಂಬಾ ಕಡಿಮೆಯಾಗಿದೆ. ಜಂತುಹುಳಗಳ ನಿವಾರಣೆಗಾಗಿ ಅಲ್ಪೆಂಡಝೋಲ್ ಮಾತ್ರೆ ಪ್ರತಿಯೊಬ್ಬ ವಿದ್ಯಾರ್ಥಿಯು ಸೇವಿಸಿಬೇಕು. ಪೋಷಕರು ಮಕ್ಕಳ ಆರೋಗ್ಯದ ಬಗ್ಗೆ ನಿಗಾವಹಿಸಿ, ಇಂತಹ ಕಾರ್ಯಕ್ರಮಗಳ ಪ್ರಯೋಜನ ಪಡೆದುಕೊಳ್ಳುವುದರ ಜೊತೆಗೆ ತಮ್ಮ ಸುತ್ತಮತ್ತಲಿನ ಜನತೆಗೂ ಈ ಜಂತುಹುಳುವಿನ ಬಗ್ಗೆ ಸೂಕ್ತ ಜಾಗೃತಿ ಮೂಡಿಸಬೇಕು ಎಂದು ಹೇಳಿದರು.
ಈ ಸಂಧರ್ಭದಲ್ಲಿ ಜಿಲ್ಲಾ ಆರೋಗ್ಯಾಧಿಕಾರಿ ಡಾ. ರಾಮಕೃಷ್ಣ ರಾವ್, ಆರ್.ಸಿ.ಎಚ್. ಅಧಿಕಾರಿ ಡಾ. ರಾಜೇಶ್, ತಾಲೂಕು ಆರೋಗ್ಯಾಧಿಕಾರಿ ಡಾ. ಸುಜಯ್ ಕುಮಾರ್ ಹಾಗೂ ನಗರ ಆರೋಗ್ಯ ಕೇಂದ್ರ, ವೈದ್ಯಾಧಿಕಾರಿ ಡಾ. ಚಂದ್ರಪ್ರಭಾ, ರಥಬೀದಿ ಸರಕಾರಿ ಮಹಿಳಾ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ವಿಷ್ಣುಮೂರ್ತಿ ಉಪಸ್ಥಿತರಿದ್ದರು
Comments are closed.