ಮಂಗಳೂರು,ಜುಲೈ.31: ಸೋಮವಾರ ರಾತ್ರಿ ಮಂಗಳೂರಿನ ತೊಕ್ಕೊಟ್ಟು ಸಮೀಪದ ನೇತ್ರಾವತಿ ನದಿ ಸೇತುವೆ ಬಳಿಯಿಂದ ನಿಗೂಢವಾಗಿ ನಾಪತ್ತೆಯಾಗಿದ್ದ ಕೆಫೆ ಕಾಫಿ ಡೇ ಸಂಸ್ಥಾಪಕ, ಕೇಂದ್ರದ ಮಾಜಿ ಸಚಿವ ಹಾಗೂ ಮಾಜಿ ಮುಖ್ಯಮಂತ್ರಿ ಎಸ್ ಎಂ ಕೃಷ್ಣ ಅವರ ಅಳಿಯ ಸಿದ್ಧಾರ್ಥ ಅವರ ಮೃತದೇಹ ಬುಧವಾರ ಮುಂಜಾನೆ ಪತ್ತೆಯಾಗಿದೆ.
ಮೃತದೇಹವು ನಗರದ ಹೈಗೆ ಬಜಾರ್ ಸಮೀಪದ ಐಸ್ ಪ್ಲಾಂಟ್ ಬಳಿ ಪತ್ತೆಯಾಗಿದೆ ಎಂದು ತಿಳಿದುಬಂದಿದೆ. ಸುಮಾರು 36 ಗಂಟೆಗಳ ತೀವ್ರ ಶೋಧದ ನಂತರ ಹೊಯಿಗೆ ಬಜಾರ್‌ನ ಅಳಿವೆ (ನದಿ ಮತ್ತು ಸಮುದ್ರ ಸೇರುವ ಸ್ಥಳ) ಬಾಗಿಲ ಬಳಿ ಬುಧವಾರ ಬೆಳಗ್ಗೆ 6.30ಕ್ಕೆ ಸಿದ್ದಾರ್ಥ್ ಅವರ ದೇಹ ಪತ್ತೆಯಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.ಮೃತದೇಹವನ್ನು ಮಂಗಳೂರಿನ ವೆನ್‌ಲಾಕ್ ಆಸ್ಪತ್ರೆಗೆ ರವಾನಿಸ ಲಾಗಿದೆ. ಅಲ್ಲಿ ಅವರ ಮರಣೋತ್ತರ ಪರೀಕ್ಷೆ ನಡೆಯಲಿದೆ.
ಸೋಮವಾರ ಬೆಳಗ್ಗೆ ಸಕಲೇಶಪುರಕ್ಕೆ ತೆರಳುವುದಾಗಿ ಹೇಳಿ ಹೋಗಿದ್ದ ಸಿದ್ಧಾರ್ಥ ಅವರು, ಮಂಗಳೂರಿಗೆ ಹೋಗಿದ್ದರು. ಮಾರ್ಗದುದ್ದಕ್ಕೂ ಅವರು ಹಲವರಿಗೆ ಕರೆ ಮಾಡಿ ‘ಐ ಆ್ಯಮ್ ಸಾರಿ’ ಎಂದು ಹೇಳುತ್ತಿದ್ದರು ಎಂದು ಅವರ ಚಾಲಕ ಹೇಳಿಕೊಂಡಿದ್ದರು. ಇದೀಗ ಸಿದ್ಧಾರ್ಥ ಅವರ ಮೃತದೇಹ ಮಂಗಳೂರಿನ ಹೊಯಿಗೆ ಬಜಾರ್ ಸಮುದ್ರ ಅಳಿವೆ ಬಾಗಿಲ ಬಳಿ ಪತ್ತೆಯಾಗಿದೆ.
ಸ್ಥಳೀಯ ಮೀನುಗಾರರು ಬೆಳಗ್ಗೆ ಮೀನುಗಾರಿಕೆಗೆಂದು ತೆರಳಿದ್ದಾಗ ನದಿ ದಡದಲ್ಲಿ ಮೃತದೇಹ ಕಂಡಿದೆ. ಇದು ಸಿದ್ಧಾರ್ಥ ಅವರ ಮೃತದೇಹವೇ ಇರಬಹುದೇ ಎಂಬ ಸಂಶಯದೊಂದಿಗೆ ಹತ್ತಿರಕ್ಕೆ ತೆರಳಿದ ಮೀನುಗಾರರಿಗೆ ಆ ದೇಹ ಸಿದ್ಧಾರ್ಥ ಅವರದ್ದೇ ಎಂದು ಖಚಿತವಾಗಿದೆ.
ಈ ಕುರಿತು ಮಾತನಾಡಿರುವ ಮಂಗಳೂರು ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್, ಇಂದು ಮುಂಜಾನೆ 6.30ರಲ್ಲಿ ಮೃತದೇಹ ಪತ್ತೆಯಾಯಿತು. ಈ ಬಗ್ಗೆ ಕುಟುಂಬಸ್ಥರಿಗೆ ಮಾಹಿತಿ ನೀಡಲಾಗಿದೆ. ಮುಂದಿನ ವಿಧಿ ವಿಧಾನಗಳ ಬಗ್ಗೆ ಕುಟುಂಬ ಸದಸ್ಯರು ನಿರ್ಧರಿಸುತ್ತಾರೆ. ದೇಹವನ್ನು ವೆನ್‌ಲಾಕ್ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ತಿಳಿಸಿದರು.
ಕುಟುಂಬದ ಸದಸ್ಯರಿಗೆ ಫೋಟೊ ಕಳುಹಿಸಲಾಗಿದೆ. ಅವರು ಮೃತದೇಹವನ್ನು ಗುರುತಿಸಿದ್ದಾರೆ. ಸಿದ್ದಾರ್ಥ ಅವರ ಜೇಬಿನಲ್ಲಿ ಅವರ ಹಳೆಯ ಮೊಬೈಲ್ ಪತ್ತೆಯಾಗಿದೆ. ಮೃತದೇಹದ ಮರಣೋತ್ತರ ಪರೀಕ್ಷೆ ನಡೆದ ಬಳಿಕ ಮುಂದಿನ ಕ್ರಮಗಳು ಜರಗಲಿವೆ. ಸಿದ್ದಾರ್ಥ ಅವರ ಆಪ್ತರಾಗಿದ್ದ ಶೃಂಗೇರಿ ಶಾಸಕ ಟಿ.ಡಿ.ರಾಜೇಗೌಡ ಅವರು ವೆನ್‌ಲಾಕ್ ಆಸ್ಪತ್ರೆಯ ಆವರಣದಲ್ಲಿದ್ದು ಬೆಂಗಳೂರಿನಲ್ಲಿರುವ ಸಿದ್ದಾರ್ಥ ಅವರ ಕುಟುಂಬದ ಸದಸ್ಯರ ಜೊತೆ ಸಂಪರ್ಕದಲ್ಲಿದ್ದಾರೆ. ಕುಟುಂಬಸ್ಥರೆಲ್ಲರೂ ಇಲ್ಲಿಗೆ ಬಂದ ನಂತರ ಮೃತದೇಹವನ್ನು ಚಿಕ್ಕಮಗಳೂರಿನ ಚಟ್ನಹಳ್ಳಿಯ ಚೇತನಹಳ್ಳಿ ಎಸ್ಟೇಟ್‌ಗೆ ಕೊಂಡೊಯ್ಯಲಾಗುತ್ತದೆ ಎಂದು ಶಾಸಕ ಯು.ಟಿ ಖಾದರ್ ಅವರು ತಿಳಿಸಿದ್ದಾರೆ.














Comments are closed.