ಕರಾವಳಿ

ಅಬ್ಬಕ್ಕ ಉತ್ಸವ ಪೂರ್ವಭಾವಿಯಾಗಿ ಬೀಚ್ ಸ್ವಚ್ಛತೆ

Pinterest LinkedIn Tumblr

ಮಂಗಳೂರು ಫೆಬ್ರವರಿ, 25: ಮಾರ್ಚ್ ಎರಡು ಮತ್ತು ಮೂರರಂದು ನಡೆಯಲಿರುವ ಉಳ್ಳಾಲ ವೀರರಾಣಿ ಅಬ್ಬಕ್ಕ ಉತ್ಸವಕ್ಕೆ ಪೂರ್ವಭಾವಿಯಾಗಿ  ಜಿಲ್ಲಾಡಳಿತದ ಮಾರ್ಗದರ್ಶನದಂತೆ ಉಳ್ಳಾಲ ನಗರಸಭೆ ಮತ್ತು ಸುತ್ತಮುತ್ತಲ ಶಾಲಾ ವ್ಯಾಪ್ತಿಯ ವಿದ್ಯಾರ್ಥಿಗಳಿಂದ ಬೀಚ್ ಕ್ಲೀನಿಂಗ್ ಕಾರ್ಯಕ್ರಮ ನಡೆಯಿತು.

ಬೆಳಗ್ಗೆ 7 ಗಂಟೆಗೆ ಸಿ‌ಎಂಸಿ ಆಯುಕ್ತರಾದ ವಾಣಿ ವಿ ಆಳ್ವ ಅವರು ಬೀಚ್ ಕ್ಲೀನಿಂಗ್‌ಗೆ ಚಾಲನೆ ನೀಡಿದರು. ಅಬ್ಬಕ್ಕ ಉತ್ಸವ ಸಮಿತಿಯ ಸದಸ್ಯರು ಈ ಸಂದರ್ಭದಲ್ಲಿ ಹಾಜರಿದ್ದರು. ಸ್ವಚ್ಛತಾ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಮತ್ತು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ ಸೆಲ್ವಮಣಿ ಆರ್ ಅವರು ಸ್ಥಳೀಯರೊಂದಿಗೆ ಮಾತನಾಡಿ ಅಬ್ಬಕ್ಕ ಉತ್ಸವದ ಆಯೋಜನೆ ಮತ್ತು ಈ ಸಂಬಂಧ ಆಯೋಜಿಸಿರುವ ಸ್ವಚ್ಛತಾ ಕಾರ್ಯಕ್ರಮದ ಬಗ್ಗೆ ಮಾತನಾಡಿದರು.

ಉಳ್ಳಾಲದ ವೀರರಾಣಿ ಅಬ್ಬಕ್ಕ ಉತ್ಸವವನ್ನು ಮಾಡಲು ಈಗಾಗಲೇ ಸಿದ್ಧತೆಗಳಾಗಿದ್ದು, ಅದ್ದೂರಿಯಾಗಿ ಉತ್ಸವ ನಡೆಯಲಿದೆ ಎಂದ ಜಿಲ್ಲಾಧಿಕಾರಿಗಳು, ಅಬ್ಬಕ್ಕ ಉತ್ಸವ ಯಶಸ್ಸಿಗೆ ಸ್ಥಳೀಯರ ಸಹಕಾರ ಅಗತ್ಯವೆಂದರಲ್ಲದೆ, ವೇದಿಕೆ ನಿರ್ಮಾಣದ ಬಗ್ಗೆ ನೀಲಿ ನಕಾಶೆ ತಯಾರಿಸಿ ಪೊಲೀಸರೊಂದಿಗೆ ಚರ್ಚಿಸಿ ಸೂಕ್ತ ಕ್ರಮಕೈಗೊಳ್ಳುವ ಭರವಸೆಯನ್ನು ನೀಡಿದರು. ಉತ್ಕೃಷ್ಟ ಸಾಂಸ್ಕೃತಿಕ ಕಾರ್ಯಕ್ರಮ ಈ ಸಂದರ್ಭದಲ್ಲಿ ಆಯೋಜನೆಯಾಗಿದ್ದು, ಸ್ಥಳೀಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಯಶಸ್ವಿ ಗೊಳಿಸಿ ಎಂದರು.

ವಿದ್ಯಾರ್ಥಿಗಳು ಹಾಗೂ ಸ್ವಯಂ ಸೇವಕರ ಸಹಕಾರದೊಂದಿಗೆ ಉಳ್ಳಾಲ ನಗರಸಭೆ ಒಂದು ಟನ್ ಕಸವನ್ನು ವಿಲೇ ಮಾಡಲಾಯಿತು. ಸುಮಾರು ಒಂದು ಲಾರಿಯಷ್ಟು ಪ್ಲಾಸ್ಟಿಕ್ ತ್ಯಾಜ್ಯವನ್ನು ಸಂಗ್ರಹಿಸಿ ವಿಲೇ ಮಾಡಲಾಯಿತು.

Comments are closed.