ಕರಾವಳಿ

ದುಡ್ಡಿನ ಬಗ್ಗೆ ನಮಗೆ ತಿಳಿಯದ ಸತ್ಯ, ಅಸತ್ಯತೆಗಳು

Pinterest LinkedIn Tumblr

ದುಡ್ಡೇ ದೊಡ್ಡಪ್ಪ ಎಂಬ ಕನ್ನಡದ ಗಾದೆ ಹಣಕಾಸಿನ ವ್ಯವಸ್ಥೆ ಬಂದಾಗಿನಿಂದಲೂ ಎಲ್ಲಾ ಕಾಲಕ್ಕೂ ಸಲ್ಲುವ ಸತ್ಯವಾಗಿದೆ. ನಮ್ಮ ನಿತ್ಯದ ಜೀವನಕ್ಕೆ ಹಣ ಬೇಕೇ ಬೇಕು. ಪುರಾಣಗಳಲ್ಲಿ ಪಾಂಡಿತ್ಯಕ್ಕೆ ಅತಿ ಹೆಚ್ಚಿನ ಮತ್ತು ಹಣಕ್ಕೆ ಅತಿ ಕಡಿಮೆ ಪ್ರಾಶಸ್ತ್ಯ ನೀಡಲಾಗುತ್ತಿತ್ತು.

ಕುಬೇರನ ಬಳಿ ಯಾವ ಪಾಂಡಿತ್ಯವೇ ಇಲ್ಲದ ಕಾರಣ ದೇವರು ಹಣವನ್ನು ಕೊಟ್ಟನಂತೆ. ಆದರೆ ಇಂದು ಇದು ತೀರಾ ವ್ಯತಿರಿಕ್ತವಾಗಿದೆ. ಹಣವಂತರಿಗೇ ಹೆಚ್ಚಿನ ಮನ್ನಣೆ ದೊರೆಯುತ್ತಿದ್ದು ಪಾಂಡಿತ್ಯವುಳ್ಳವರು ಹಣವಂತರ ದಾಸರಾಗಿರುವುದು ಬರಿಗಣ್ಣಿಗೇ ರಾಚುವಂತೆ ಕಾಣುವ ಸತ್ಯ. ಹಣಕಾಸಿನ ವ್ಯವಸ್ಥೆ ಕಾಲ ಬದಲಾದಂತೆಯೇ ಬದಲಾಗುತ್ತಾ ಇಂದು ಕರೆನ್ಸಿ ನೋಟುಗಳ ಮತ್ತು ನಾಣ್ಯಗಳ ರೂಪ ಪಡೆದಿದೆ.

ಇದನ್ನು ನಕಲು ಮಾಡಲು ಸಾಧ್ಯವಿಲ್ಲದಂತೆ ತಯಾರಿಸುವುದೇ ಯಾವುದೇ ದೇಶಕ್ಕೆ ಮೊತ್ತ ಮೊದಲು ಎದುರಾಗುವ ಸವಾಲು.
ಇದನ್ನು ಪೂರ್ಣಗೊಳಿಸಲು ಎಷ್ಟೋ ಸಲ ನಾಣ್ಯದ ಮುಖಬೆಲೆಗಿಂತಲೂ ಹೆಚ್ಚಿನ ಖರ್ಚನ್ನು ಮಾಡಬೇಕಾಗುತ್ತದೆ. ಉದಾಹರಣೆಗೆ ಒಂದು ರೂ ನೋಟು ತಯಾರಿಸಲು 1.14 ರೂ ಖರ್ಚಾಗುತ್ತದೆಂದು ಆರ್ ಬಿ ಐ ಇದನ್ನು ಮುದ್ರಿಸುವುದನ್ನೇ ನಿಲ್ಲಿಸಿದೆ. ಬದಲಿಗೆ ನಾಣ್ಯಗಳನ್ನು ಚಲಾವಣೆಗೆ ಬಿಟ್ಟಿದೆ. ಬನ್ನಿ, ಇಂತಹ ಅಚ್ಚರಿಯ ಕೆಲವು ಮಾಹಿತಿಗಳನ್ನು ನೋಡೋಣ:

ಮಾಹಿತಿ .1
90% ರಷ್ಟು ಅಮೇರಿಕಾದ ಡಾಲರುಗಳಲ್ಲಿ ಮಾದಕ ಪದಾರ್ಥವಾದ ಕೋಕೇಯ್ನ್ ನ ಅಂಶಗಳು ಕಂಡುಬಂದಿವೆ. ಸಂಶೋಧನೆಗಳು ಇದನ್ನು ಸಾಬೀತುಪಡಿಸಿವೆ. ಅಂದರೆ ಹೆಚ್ಚು ಡಾಲರು ಇದ್ದವರಿಗೆ ಹೆಚ್ಚು ಅಮಲು ಎಂದು ಅರ್ಥೈಸಿಕೊಳ್ಳಬಹುದೇ?

ಮಾಹಿತಿ .2
The Southern Medical Journal ಎಂಬ ಪತ್ರಿಕೆ ಪ್ರಕಟಿಸಿದ ಪ್ರಕಾರ 94% ರಷ್ಟು ಡಾಲರು ನೋಟುಗಳಲ್ಲಿ ಅಮಲಿನ ಪದಾರ್ಥಗಳ ಅಂಶಗಳು ಕಂಡುಬಂದಿವೆ. ಇನ್ನು ಮುಂದೆ ಪ್ರತಿ ಬಾರಿ ಡಾಲರು ನೋಟನ್ನು ಮುಟ್ಟಿದ ಬಳಿಕ ಕೈತೊಳೆಯದೇ ಬೇರಾವ ಕೆಲಸವನ್ನೂ ಮಾಡದಿರಿ. ವಿಶೇಷವಾಗಿ ಊಟ.

ಮಾಹಿತಿ .3
ಇನ್ನೊಂದು ಮಾಹಿತಿಯ ಪ್ರಕಾರ ಕಾಗದದ ನೋಟುಗಳನ್ನು ಮುದ್ರಿಸಿ ಚಲಾವಣೆಗೆ ತಂದ ದೇಶ ಚೀನಾ. ಇಲ್ಲಿ 1,400 ವರ್ಷಗಳ ಹಿಂದೆ ಕಾಗದ ಹಣಕಾಸಿನ ರೂಪದಲ್ಲಿ ಚಲಾವಣೆಯಲ್ಲಿತ್ತು ಎಂದು ಉತ್ಖತನದಿಂದ ತಿಳಿದುಬಂದಿದೆ.

ಮಾಹಿತಿ .4
ಒಂದು ವೇಳೆ ನಿಮ್ಮ ಜೇಬಿನಲ್ಲಿ ಹತ್ತು ಡಾಲರು ನೋಟು ಇದ್ದು, ನಿಮಗೆ ಬೇರಾವ ಸಾಲವೂ ಇಲ್ಲದೇ ಇದು ನಿಮ್ಮ ಬೆವರಿನ ಗಳಿಕೆಯೇ ಆಗಿದ್ದರೆ ಅತ್ಯಂತ ಹರ್ಷ ಪಡಿ. ಏಕೆಂದರೆ ಅಮೇರಿಕಾದ ಕಾಲು ಭಾಗ ಜನತೆಗಿಂತಲೂ ನೀವೇ ಶ್ರೀಮಂತರು.

ಮಾಹಿತಿ .5
ಒಂದು ವೇಳೆ ಬಿಲ್ ಗೇಟ್ಸ್ ರವರು ಪ್ರತಿದಿನ ಒಂದು ಮಿಲಿಯನ್ ಡಾಲರುಗಳನ್ನು ಖರ್ಚು ಮಾಡುತ್ತಾ ಹೋದರೂ ಅವರ ಹತ್ತಿರ ಇರುವ ಅಷ್ಟೂ ಹಣ ಖರ್ಚಾಗಲು 218 ವರ್ಷ ಬೇಕು. ತಾಳಿ ಅವಸರ ಪಡಬೇಡಿ, ಖರ್ಚು ಮಾಡಲಿಕ್ಕೆ ಅವರು ನಿಮ್ಮನ್ನು ಕರೆದಿಲ್ಲ.

ಮಾಹಿತಿ .6
ಎರಡನೇ ಮಹಾಯುದ್ಧದ ವೇಳೆ ಸೈಬೀರಿಯಾ ಮತ್ತು ಏಷಿಯಾ ಪ್ರದೇಶದಲ್ಲಿ ಟೀಪುಡಿಯಿಂದ ಮಾಡಿದ್ದ ಇಟ್ಟಿಗೆಗಳನ್ನು ಹಣಕಾಸಿನ ರೂಪದಲ್ಲಿ ಬಳಸಲಾಗುತ್ತಿತ್ತು.

ಮಾಹಿತಿ .7
ಒಂದು ವೇಳೆ ಡಾಲರು ನೋಟಿನ ಮೇಲೆ ಶೀತವಿರುವ ವ್ಯಕ್ತಿ ಸೀನಿದ ಬಳಿಕ ವೈರಸ್ಸು ಆಶ್ರಯ ಪಡೆದರೆ ಮುಂದಿನ ಎರಡು ವಾರಗಳ ಕಾಲ ಆ ವೈರಸ್ಸುಗಳು ಡಾಲರುಗಳಲ್ಲಿರುವ ಆಹಾರವನ್ನು ಸೇವಿಸುತ್ತಾ ಜೀವಂತವಾಗಿರುತ್ತವೆ. ಹಾಗಾದರೆ ಡಾಲರು ಮುಟ್ಟಬೇಕೆಂದರೆ ರಬ್ಬರ್ ಗ್ಲವ್ಸ್ ಗಳನ್ನು ಹಾಕಿಕೊಳ್ಳಬೇಕೇ?

ಮಾಹಿತಿ .8
ಇನ್ನೊಂದು ಅತಿ ಬೇಸರದ ಸಂಗತಿ ಎಂದರೆ ವಿಶ್ವದಲ್ಲಿ ಅತಿ ಹೆಚ್ಚಿನ ವಿಚ್ಛೇದನ ಪ್ರಕರಣಗಳ ಮೂಲ ಹಣಕಾಸಿನ ವ್ಯವಸ್ಥೆ ಅಥವಾ ಗಳಿಕೆಗೆ ಸಂಬಂಧಿಸಿದ್ದಾಗಿರುತ್ತದೆ.

ಮಾಹಿತಿ .9
ಇನ್ನೊಂದು ಸಂಶೋಧನೆಯ ಮೂಲಕ ಸಾಬೀತುಪಡಿಸಲಾಗಿರುವಂತೆ 50% ಅಮೇರಿಕನ್ನರು ತುರ್ತು ಪರಿಸ್ಥಿತಿಯಲ್ಲಿ ಅಗತ್ಯವಾಗಿ ಪಾವತಿಸಬೇಕಾದ ನಾನೂರು ಡಾಲರುಗಳನ್ನೂ ಸಾಲ ಮಾಡದೇ ಪಾವತಿಸಲು ಅಸಮರ್ಥರಾಗಿದ್ದಾರೆ. ಅಂದರೆ ಹೊರಗಡೆ ಥಳುಕು ಒಳಗಡೆ ಹುಳುಕು ಎಂದು ನಮ್ಮ ಹಿರಿಯರು ಹೇಳಿದ್ದು ಸತ್ಯವಾದಂತಾಯಿತು.

ಮಾಹಿತಿ .10
ಡಾಲರುಗಳನ್ನು ಕಾಗದರಿಂದ ಮಾಡಿದ್ದಾರೆ ಎಂದು ನೀವು ತಿಳಿದುಕೊಂಡಿದ್ದರೆ ನಿಮಗೆ ದಕ್ಕುವ ಅಂಕಗಳು ಸೊನ್ನೆ. ಏಕೆಂದರೆ ಡಾಲರು ನೋಟುಗಳನ್ನು ತಯಾರಿಸುವುದು ಹತ್ತಿಯಿಂದ. ಛೇ, ಛೇ ಹಾಗೆಲ್ಲಾ ಡಾಲರು ನೋಟಿನಿಂದ ಬೆವರು ಒರೆಸಿಕೊಳ್ಳಬಾರದು.

Comments are closed.