ಕರಾವಳಿ

ಮಹಿಳೆಯರ ಕರುಳಿನ ಈಸ್ಟ್‌ ಸೋಂಕು ನಿವಾರಣೆ ಮೊಸರು ಸಹಕಾರಿ

Pinterest LinkedIn Tumblr

ಮೊಸರು ಈಸ್ಟ್‌ ಸೋಂಕನ್ನು ನಿವಾರಿಸಲು ಸಹಾಯ ಮಾಡುತ್ತದೆ ಎಂಬುದು ಬಹಳ ಹಿಂದಿನ ಕಾಲದಿಂದಲೂ ಇರುವ ನಂಬಿಕೆ ಮತ್ತು ಆ ನಂಬಿಕೆಯು ಈಗಲೂ ಮುಂದುವರಿಯುತ್ತಿದೆ. ಒಬ್ಬ ಮಹಿಳೆಗೆ ಆಗಾಗ ಈಸ್ಟ್‌ ಸೋಂಕು ಆಗುತ್ತಿದ್ದರೆ, ಅವರಿಗೆ ಪ್ರತಿದಿನವೂ ಒಂದೊಂದು ಕಪ್‌ ಮೊಸರನ್ನು ಆರು ತಿಂಗಳವರೆಗೆ ಕೊಟ್ಟರೆ ಅವರ ಸೋಂಕಿನ ಪ್ರಮಾಣವು 75% ನಷ್ಟು ಕಡಿಮೆ ಆಗುತ್ತದೆ ಎಂದು ಸಂಶೋಧನೆಗಳಿಂದ ಸಾಬೀತಾಗಿದೆ.

ಮೊಸರಿನಲ್ಲಿ ಲ್ಯಾಕ್ಟೋಬ್ಯಾಸಿಲ್ಲಸ್‌ ಅಸಿಡೋಫೈಲಸ್‌ ಎಂಬ ಬ್ಯಾಕ್ಟೀರಿಯ ಇದ್ದು, ಇದು ಒಂದು ರೀತಿಯ ಸ್ನೇಹಿ ಬ್ಯಾಕ್ಟೀರಿಯಾ ಆಗಿದ್ದು, ಇದು ಮಹಿಳೆಯರ ಜನನಾಂಗದಲ್ಲಿ ಮತ್ತು ಕರುಳಿನಲ್ಲಿ ಈಸ್ಟ್‌ ಬೆಳವಣಿಗೆ ಆಗುವುದನ್ನು ನಿಯಂತ್ರಿಸುತ್ತದೆ ಮತ್ತು ಜನನಾಂಗದಲ್ಲಿ ನೈಸರ್ಗಿಕ ವಾತಾವರಣವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಮನೆಯಲ್ಲಿಯೇ ತಯಾರಿಸಿದ ಮೊಸರಿಗಿಂತಲೂ ಪ್ಯಾಕ್‌ ಮಾಡಲಾದ ಮೊಸರಿನಲ್ಲಿ ಈ ಬ್ಯಾಕ್ಟೀರಿಯಾ ಕಡಿಮೆ ಪ್ರಮಾಣದಲ್ಲಿ ಇರುತ್ತದೆ.

ಇದು ಮಾತ್ರ ಅಲ್ಲದೆ, ಗಾಯಗಳನ್ನು ಸೋಂಕು ರಹಿತವಾಗಿ ಇರಿಸಲು, ಆಮಶಂಕೆಯನ್ನು ತಡೆಯಲು ಮತ್ತು ಈಸ್ಟ್‌ ಸೋಂಕು ಮರುಕಳಿಸುವುದನ್ನು ತಡೆಯಲು ಬೆಳ್ಳುಳ್ಳಿಯನ್ನೂ ಸಹ ಬಳಸಲಾಗುತ್ತದೆ. ಬೆಳ್ಳುಳ್ಳಿಯಲ್ಲಿ ಅನೇಕ ರಾಸಾಯನಿಕ ಸಂಯುಕ್ತಗಳು ಇದ್ದು, ಇವುಗಳಲ್ಲಿ ಕೆಲವು ಫ‌ಂಗಸ್‌ ಸೋಂಕಿನ ವಿರುದ್ಧ ಪರಿಣಾಮಕಾರಿ ಎಂಬುದಾಗಿ ಸಾಬೀತಾಗಿವೆ.

ಇಷ್ಟು ಮಾತ್ರ ಅಲ್ಲದೆ, ಬೆಳ್ಳುಳ್ಳಿಯು ನ್ಯೂರೋಫಿಲ್‌ಗ‌ಳು, ಮ್ಯಾಕ್ರೋಫೇಜಸ್‌ಗಳು ಮತ್ತು ಸೋಂಕುಗಳ ವಿರುದ್ಧ ಹೋರಾಡುವ ದೇಹದ ರೋಗ ಪ್ರತಿರೋಧಕ ವ್ಯವಸ್ಥೆಯ ಚಟುವಟಿಕೆಯನ್ನು ಉತ್ತೇಜಿಸುತ್ತದೆ. ದಿನದಲ್ಲಿ ಕೆಲವು ಎಸಳು ಬೆಳ್ಳುಳ್ಳಿಯನ್ನು ಸೇವಿಸುವುದು ಪ್ರಯೋಜನಕಾರಿ ಎನಿಸಬಹುದು. ಈ ಪ್ರಯೋಜನಗಳನ್ನು ಪಡೆಯುವುದಕ್ಕಾಗಿ ಬೆಳ್ಳುಳ್ಳಿಯನ್ನು ನೀವು ಹಸಿಯಾಗಿಯೇ ಸೇವಿಸಬೇಕು ಎಂದೇನೂ ಇಲ್ಲ. ಬೆಳ್ಳುಳ್ಳಿಯನ್ನು ಬೇಕ್‌ ಮಾಡಿದರೂ, ಹುರಿದರೂ ಅಥವಾ ಮೈಕ್ರೋವೇವ್‌ನಲ್ಲಿ ಬೇಯಿಸಿದರೂ ಸಹ ಅದು ತನ್ನ ಉತ್ತಮ ಗುಣಗಳನ್ನು ಕಳೆದುಕೊಳುವುದಿಲ್ಲ. ಹೆಚ್ಚಿನ ಪ್ರಯೋಜನವನ್ನು ಪಡೆಯುವುದಕ್ಕಾಗಿ ಬೆಳ್ಳುಳ್ಳಿಯನ್ನು ಜಜ್ಜಿ ಸೇವಿಸಬಹುದು ಅಥವಾ ಕತ್ತರಿಸಿಯೂ ಸೇವಿಸಬಹುದು ಹೀಗೆ ಮಾಡುವುದರಿಂದ ಇದು ಹೆಚ್ಚು ರಾಸಾಯನಿಕ ಸಂಯುಕ್ತಗಳನ್ನು ಬಿಡುಗಡೆ ಮಾಡುತ್ತದೆ.

ಇದರ ಜೊತೆಗೆ ವಿಟಾಮಿನ್‌-ಸಿ ಮತ್ತು ವಿಟಾಮಿನ್‌-ಇ ಗಳೂ ಸಹ ಈಸ್ಟ್‌ ಸೋಂಕನ್ನು ತಡೆಯಲು ಸಹಾಯ ಮಾಡುತ್ತವೆ. ಈ ವಿಟಾಮಿನ್‌ ಅಂಶಗಳು ಹೆಚ್ಚು ಇರುವ ಆಹಾರಗಳು ನಮ್ಮ ಶರೀರದ ರೋಗಪ್ರತಿರೋಧಕ ವ್ಯವಸ್ಥೆಯನ್ನು ಪ್ರಚೋದಿಸುತ್ತವೆ.

ವಿವಿಧ ರೀತಿಯ ಹಣ್ಣು ತರಕಾರಿಗಳನ್ನು ಸೇವಿಸುವುದರಿಂದ ನೀವು ಸಮೃದ್ಧವಾಗಿ ಬೀಟಾ ಕೆರೋಟಿನ್‌ ಮತ್ತು ವಿಟಾಮಿನ್‌-ಸಿ ಯನ್ನು ಪಡೆಯಬಹುದು. ಸಸ್ಯಜನ್ಯ ಎಣ್ಣೆಗಳಲ್ಲಿ ವಿಟಾಮಿನ್‌-ಇ ವಿಶೇಷ ರೂಪದಲ್ಲಿ ಇರುತ್ತದೆ. ಒಂದು ಮುಷ್ಟಿಯಷ್ಟು ಕಾಳುಗಳು ಮತ್ತು ಬೀಜಗಳನ್ನು ಸೇವಿಸುವುದರಿಂದಲೂ ಸಹ ವ್ಯಕ್ತಿಯ ದೈನಂದಿನ ಆವಶ್ಯಕತೆಯನ್ನು ಪೂರೈಸಿದಂತಾಗುತ್ತದೆ.

ಹೆಚ್ಚು ಸಿಹಿತಿನಿಸುಗಳು ಮತ್ತು ಸಕ್ಕರೆ ಸೇರಿಸಿದ ಆಹಾರವನ್ನು ಸೇವಿಸುವ ಮಹಿಳೆಯರು ಈಸ್ಟ್‌ ಸೋಂಕಿಗೆ ಒಳಗಾಗುವ ಸಾಧ್ಯತೆ ಹೆಚ್ಚು. ಹಾಗಾಗಿ ಈಸ್ಟ್‌ ಸೋಂಕಿನ ತೊಂದರೆ ಇರುವ ಮಹಿಳೆಯರು ಸಿಹಿತಿನಿಸನ್ನು ಕಡಿಮೆ ಸೇವಿಸಿದರೆ ಒಳ್ಳೆಯದು.

Comments are closed.