ಕರಾವಳಿ

ಶಿಶುವಿನ ಅಕಾಲಿಕ ಜನನದಿಂದ ಅಗುವ ತೊಡಕುಗಳು

Pinterest LinkedIn Tumblr

ಮಗುವಿನ ಅಕಾಲಿಕ ಜನನವನ್ನು ಮೊದಲೇ ತಿಳಿದುಕೊಳ್ಳಲು ಸಾಧ್ಯವಿಲ್ಲ. ಇದು ಭ್ರೂಣ ಅಥವಾ ತಾಯಿಯ ಅಥವಾ ಇಬ್ಬರ ಆರೋಗ್ಯ ಸಮಸ್ಯೆಗಳಿಂದಲೂ ಉಂಟಾಗಬಹುದು. ಸಾಮಾನ್ಯವಾಗಿ, ಜರಾಯು(ಪ್ಲಾಸೆಂಟಾ) ಗರ್ಭಾವಸ್ಥೆಯಲ್ಲಿ ಗರ್ಭಕೋಶದಿಂದ ಪ್ರತ್ಯೇಕವಾದರೆ ಅಥವಾ ಗರ್ಭಾಕಂಠ ಅವಧಿಗೆ ಮುನ್ನ ತೆರೆದುಕೊಂಡರೆ ಅಕಾಲಿಕ ಜನನ ಉಂಟಾಗುತ್ತದೆ.

ಐದು ವರ್ಷದೊಳಗಿನ ಮಕ್ಕಳ ಮರಣದಲ್ಲಿ ನ್ಯೂಮೋನಿಯಾ, ಅತಿಸಾರ, ಮಲೇರಿಯಾ, ಗಾಯಗಳು ಮತ್ತು ಮೆನಿಂಜೈಟಿಸ್ ಅಥವಾ ಮೆದುಳುಜ್ವರದ ನಂತರ ಅಕಾಲಿಕ ಜನನ ಅತಿದೊಡ್ಡ ಕಾರಣವಾಗಿ ಪರಿಣಮಿಸಿದೆ. ವಿಶ್ವದೆಲ್ಲೆಡೆ ಅವಧಿಗೆ ಮುನ್ನ ಜನನದಿಂದಾಗಿ ಮಕ್ಕಳು ಸಾವನ್ನಪ್ಪುತ್ತಾರೆ. ಆದರೆ ಈ ಸಮಸ್ಯೆ ಕಡಿಮೆ ಆದಾಯದ ದೇಶಗಳಲ್ಲಿ ಹೆಚ್ಚು ಗಾಢವಾಗಿ ಗೋಚರಿಸುತ್ತದೆ.

ಇದಕ್ಕೆ ಪ್ರಮುಖ ಕಾರಣ ಸೂಕ್ತ ಮತ್ತು ಉತ್ತಮ ವೈದ್ಯಕೀಯ ಸೌಕರ್ಯಗಳ ಅಭಾವ. 2013ರಲ್ಲಿ ನಡೆದ ಸಂಶೋಧನೆಯೊಂದರ ಪ್ರಕಾರ ಭಾರತದಲ್ಲಿ ಪ್ರತಿ ವರ್ಷ ಸುಮಾರು ಮೂವತ್ತುಲಕ್ಷಕ್ಕೂ ಹೆಚ್ಚು ನವಜಾತ ಶಿಶುಗಳು ಅಕಾಲಿಕ ಜನನ ಸಮಸ್ಯೆಗಳಿಂದಾಗಿ ಸಾವನ್ನಪ್ಪುತ್ತಾರೆ ಎಂದು ಕಂಡುಬಂದಿದೆ ಮತ್ತು ಈ ಸಂಖ್ಯೆ ವಿಶ್ವದಲ್ಲೇ ಅತಿ ಹೆಚ್ಚಿನದ್ದಾಗಿದೆ.

ಅಕಾಲಿಕ ಜನನದಿಂದಾಗುವ ತೊಡಕುಗಳು:
40 ವಾರಗಳ ಗರ್ಭಧಾರಣೆ ಆರೋಗ್ಯವಂತವಾದದ್ದು. 37 ವಾರಗಳಿಗೆ ಮುಂಚಿತವಾಗಿ ಜನಿಸಿದ ಮಕ್ಕಳನ್ನು ಅಕಾಲಿಕ ಜನನ ಅಥವಾ ಅವಧಿಪೂರ್ವ ಜನನ ಎಂದು ಪರಿಗಣಿಸಲಾಗುತ್ತದೆ. ಈ ಮಕ್ಕಳು ಸಾವನ್ನಪ್ಪುವ ಅಪಾಯದಲ್ಲಿರುತ್ತಾರೆ. ಏಕೆಂದರೆ ಅವರ ಆರೋಗ್ಯ ಬಹಳ ಸೂಕ್ಷ್ಮವಾಗಿರುತ್ತದೆ, ಸೋಂಕುಗಳಿಗೆ ಬೇಗನೇ ತುತ್ತಾಗುತ್ತಾರೆ; ಹುಟ್ಟುವ ಸಂದರ್ಭದಲ್ಲಿ ಅವರ ದೇಹದ ಅಂಗಾಂಗಗಳು ಸಂಪೂರ್ಣವಾಗಿ ಬೆಳವಣಿಗೆ ಆಗಿರುವುದಿಲ್ಲ. ಹೀಗೆಂದು ಅಕಾಲಿಕವಾಗಿ ಜನಿಸಿದ ಎಲ್ಲ ಮಕ್ಕಳಿಗೂ ಈ ಸಮಸ್ಯೆಗಳು ಎದುರಾಗುತ್ತವೆ ಎಂದಿಲ್ಲ.

ಅವಧಿಗೆ ಮುನ್ನ ಜನಿಸಿರುವುದರಿಂದ ಅಲ್ಪಾವಧಿ ಮತ್ತು ದೀರ್ಘಾವಧಿ ಆರೋಗ್ಯ ಸಮಸ್ಯೆಗಳು ಅವರನ್ನು ಕಾಡಬಹುದು. ಅಕಾಲಿಕ ಜನನವಾದ ಮೊದಲ ಕೆಲವು ವಾರಗಳಲ್ಲಿ ಶಿಶುಗಳನ್ನು ಕಾಡುವ ಕೆಲವು ಸಮಸ್ಯೆಗಳೆಂದರೆ, ಉಸಿರಾಟದ ತೊಂದರೆ, ಹೃದಯಸಂಬಂಧಿ ಸಮಸ್ಯೆಗಳು, ಕಡಿಮೆ ರಕ್ತದೊತ್ತಡ, ಮೆದುಳಿನಲ್ಲಿ ರಕ್ತಸ್ರಾವದ ಅಪಾಯ, ವೇಗವಾಗಿ ದೇಹದ ಉಷ್ಣತೆ ಕಡಿಮೆಯಾಗುವುದು, ಜಠರ ಮತ್ತು ಕರುಳಿನ ಸಮಸ್ಯೆಗಳು, ರಕ್ತಹೀನತೆ, ಕಾಮಾಲೆ, ಹೈಪೋಗ್ಲೈಸೀಮಿಯಾ ಮತ್ತು ನಂಜು ಅಥವಾ ಸೆಪ್ಸಿಸ್. ದೀರ್ಘಾವಧಿಯಲ್ಲಿ ಅಕಾಲಿಕ ಜನನದ ಶಿಶುಗಳು ಸೆರೆಬ್ರಲ್ ಪಾಲ್ಸಿ, ಅರಿವಿನ ಕೌಶಲ ಕುಗ್ಗುವಿಕೆ, ದೃಷ್ಟಿ  ಮತ್ತು ಶ್ರವಣ ಸಂಬಂಧಿ ಸಮಸ್ಯೆಗಳು ಹಾಗೂ ಕೆಲವು ನಡವಳಿಕೆ ಮತ್ತು ಮಾನಸಿಕ ಸಮಸ್ಯೆಗಳಿಂದಲೂ ಬಳಲುವ ಅಪಾಯವಿರುತ್ತದೆ.

ಕಾರಣ ಮತ್ತು ಅಪಾಯದ ಅಂಶಗಳು;ಅಕಾಲಿಕ ಜನನವನ್ನು ಸದಾ ಮೊದಲೇ ತಿಳಿದುಕೊಳ್ಳಲು ಸಾಧ್ಯವಿಲ್ಲ. ಇದು ಭ್ರೂಣ ಅಥವಾ ತಾಯಿಯ ಅಥವಾ ಇಬ್ಬರ ಆರೋಗ್ಯ ಸಮಸ್ಯೆಗಳಿಂದಲೂ ಉಂಟಾಗಬಹುದು. ಸಾಮಾನ್ಯವಾಗಿ, ಜರಾಯು (ಪ್ಲಾಸೆಂಟಾ) ಗರ್ಭಾವಸ್ಥೆಯಲ್ಲಿ ಗರ್ಭಕೋಶದಿಂದ ಪ್ರತ್ಯೇಕವಾದರೆ ಅಥವಾ ಗರ್ಭಕಂಠ ಅವಧಿಗೆ ಮುನ್ನ ತೆರೆದುಕೊಂಡರೆ ಅಕಾಲಿಕ ಜನನ ಉಂಟಾಗುತ್ತದೆ. ಕೆಲವು ಕಾರಣಗಳು ಗರ್ಭಿಣಿಯನ್ನು ಅಕಾಲಿಕವಾಗಿ ಮಗುವನ್ನು ಪ್ರಸವಿಸುವಂತೆ ಮಾಡುತ್ತವೆ.

ಅವು ಯಾವುವೆಂದರೆ:

ಈ ಹಿಂದೆ ಉಂಟಾದ ಅಕಾಲಿಕ ಜನನ, ಅವಳಿ, ತ್ರಿವಳಿ ಅಥವಾ ಅದಕ್ಕಿಂತ ಹೆಚ್ಚು ಮಕ್ಕಳಿಗೆ ಗರ್ಭಧಾರಣೆ, ಚಿಕಿತ್ಸೆ ನೀಡದ ಮೂತ್ರದ್ವಾರ ಮತ್ತು ಯೋನಿಯ ಸೋಂಕುಗಳು, ಗರ್ಭಧಾರಣೆಯ ನಡುವೆ ಸರಿಯಾದ ಅಂತರ ಕಾಯ್ದುಕೊಳ್ಳದೆ ಇರುವುದು, ಮದ್ಯಪಾನ, ಧೂಮಪಾನ, ಮಾದಕದ್ರವ್ಯ ಸೇವನೆ, ಅಪೌಷ್ಟಿಕತೆ, ರಕ್ತಹೀನತೆ, ಗರ್ಭಧಾರಣೆಯ ಮುಂಚೆ ಅತಿಕಡಿಮೆ ಅಥವಾ ಅತಿಹೆಚ್ಚು ದೇಹತೂಕವನ್ನು ಹೊಂದಿರುವುದು, ಗರ್ಭಧಾರಣೆಯ ಸಂದರ್ಭದಲ್ಲಿ ಅಸಮರ್ಪಕ ದೇಹತೂಕದ ಹೆಚ್ಚಳ, ಅತಿಯಾದ ರಕ್ತದೊತ್ತಡ, ಮಧುಮೇಹ, ಮಾನಸಿಕ ಒತ್ತಡ, ದೈಹಿಕ ಗಾಯ ಅಥವಾ ಆಘಾತ ಮತ್ತು ಗರ್ಭಪಾತದ ಪುನರಾವರ್ತನೆ ಮುಂತಾದ ಕಾರಣಗಳು ಅಕಾಲಿಕ ಜನನಕ್ಕೆ ದಾರಿ ಮಾಡಿಕೊಡುತ್ತವೆ.

ಚಿಕಿತ್ಸೆಗಳು:

ಅನಾರೋಗ್ಯದಿಂದಿರುವ ಮತ್ತು ಅಕಾಲಿಕ ಜನನವಾದ ಮಕ್ಕಳನ್ನು ವಿಶೇಷ ನವಜಾತ ತೀವ್ರ ನಿಗಾ ಘಟಕ(NICU)ಗಳಲ್ಲಿ ವಾರಗಳು ಅಥವಾ ತಿಂಗಳುಗಳವರಗೆ ಇರಿಸಲಾಗುತ್ತದೆ. ಇಲ್ಲಿ ಅವರಿಗೆ ಅತ್ಯಗತ್ಯವಾದ ವೈದ್ಯಕೀಯ ಸೌಕರ್ಯ, ಶುಶ್ರೂಷೆ ನೀಡಿ ವೈದ್ಯಕೀಯ ಸಹಾಯ ಇಲ್ಲದೇ ಬದುಕಲು ಸಾಧ್ಯವಾಗುವವರಗೆ ಜೋಪಾನ ಮಾಡಲಾಗುತ್ತದೆ.

ಅಕಾಲಿಕ ಜನನವಾದ ಮಕ್ಕಳ ವಿಶೇಷ ತೀವ್ರ ನಿಗಾ ಘಟಕ ಈ ಸೌಕರ್ಯಗಳನ್ನು ಒಳಗೊಂಡಿದೆ: ನವಜಾತ ಶಿಶುಗಳ ಪರಿಶೀಲನಾ ಪರೀಕ್ಷೆಗಳು: ಪ್ರಸವಪೂರ್ವ ಜನಿಸಿದ ಮಕ್ಕಳಿಗೆ ಹುಟ್ಟಿದ ತಕ್ಷಣ ಕೆಲವು ರಕ್ತಪರೀಕ್ಷೆಗಳು, ಎಕ್ಸರೇ, ಎಕೋಕಾರ್ಡಿಯೋಗ್ರಾಮ್ ಮತ್ತು ಉಸಿರಾಟದ ಲಯವನ್ನು ತಿಳಿಯಲು ಅಲ್ಟ್ರಾಸೌಂಡ್ ಸ್ಕ್ಯಾನ್, ಹೃದಯದ ಬಡಿತ, ದೃಷ್ಟಿ, ಹೃದಯ ಮತ್ತು ಶ್ವಾಸಕೋಶದ ಬೆಳವಣಿಗೆ, ಯಕೃತ್ತು, ಅಂತಃಸ್ರಾವಕ ಅಥವಾ ಎಂಡೋಕ್ರೈನ್ ಮತ್ತು ಜೀರ್ಣಕಾರಕ ಕ್ರಿಯೆ ಹಾಗೂ ದ್ರವಗಳ ಒಳ ಮತ್ತು ಹೊರಚಲನೆಗಳನ್ನು ವಿವರವಾಗಿ ಪರಿಶೀಲಿಸಲಾಗುತ್ತದೆ. ಈ ಎಲ್ಲ ಪರೀಕ್ಷೆಗಳನ್ನು ಶಿಶು ಎಷ್ಟು ಅಕಾಲಿಕವಾಗಿ ಜನಿಸಿದೆ ಎನ್ನುವುದರ ಮೇಲೆ ನಿರ್ಧರಿಸಲಾಗುತ್ತದೆ.

ಕೃತಕ ಶಾಖೋಪಕರಣ(Incubator): ಅವಧಿಪೂರ್ವ ಜನಿಸಿದ ಶಿಶುಗಳು ಬಹಳ ವೇಗವಾಗಿ ದೇಹದ ಶಾಖವನ್ನು ಕಳೆದುಕೊಳ್ಳುತ್ತಾರೆ. ಅವರ ದೇಹದಲ್ಲಿ ಕೊಬ್ಬು ಸಂಗ್ರಹವಾಗಿರುವುದಿಲ್ಲ, ಇದರಿಂದ ಅವರ ದೇಹದ ಉಷ್ಣತೆ ಬಹಳ ಅಪಾಯಕಾರಿಯಾಗಿ ಕಡಿಮೆಯಾಗುತ್ತ ಲಘೂಷ್ಣತೆಯ ಹಂತ ತಲುಪಬಹುದು. ಆದ್ದರಿಂದ ಅಕಾಲಿಕ ಜನನವಾದ ಶಿಶುಗಳನ್ನು ಕೃತಕ ಶಾಖೋಪಕರಣದಲ್ಲಿ ಇರಿಸಲಾಗುತ್ತದೆ.

ಇದು ಶಿಶುವಿನ ದೇಹದ ಉಷ್ಣತೆಯನ್ನು ಕಾಯ್ದುಕೊಳ್ಳಲು ಸಹಾಯ ಮಾಡುತ್ತದೆ. ತಾಯಂದಿರಿಗೆ ಇಂಥ ಮಕ್ಕಳನ್ನು ‘ಕಾಂಗರೂತಾಯಿ’ಯಂತೆ ಜೋಪಾನವಾಗಿ ಹಿಡಿದುಕೊಳ್ಳಲು ವಿಶೇಷವಾಗಿ ತಿಳಿಸಿಕೊಡಲಾಗುತ್ತದೆ.

ಈ ರೀತಿಯಲ್ಲಿ ತಾಯಿಯ ಎದೆಗೆ ಹತ್ತಿರದಲ್ಲಿ ಮಗುವನ್ನು ಹಿಡಿದುಕೊಳ್ಳುವುದರಿಂದ ಶಿಶುವಿನ ಚರ್ಮಕ್ಕೆ ತಾಯಿಯ ಚರ್ಮ ತಾಕುವುದರಿಂದ ಮಗುವಿನ ಹೃದಯಬಡಿತ ಮತ್ತು ಉಸಿರಾಟದ ಲಯ ಸ್ಥಿರಗೊಳ್ಳುವುದಲ್ಲದೇ ಮಗುವಿನ ದೇಹದ ಉಷ್ಣತೆಯನ್ನು ನಿಯಂತ್ರಿಸಿ, ಆಮ್ಲಜನಕದ ಗತಿಯನ್ನು ಉತ್ತಮಗೊಳಿಸುವುದರ ಜೊತೆಗೆ ಶಿಶುವಿನ ದೇಹದ ಕ್ಯಾಲೊರಿಗಳನ್ನು ಸಂರಕ್ಷಿಸುತ್ತದೆ ಎಂದು ಸಂಶೋಧನೆಗಳಿಂದ ದೃಢಪಟ್ಟಿದೆ. ಇದೇ ರೀತಿ ಕಾಂಗರೂ ತಂದೆಯ ಆರೈಕೆ ವಿಧಾನದಿಂದ ತಂದೆ ಮತ್ತು ಮಗುವಿನ ನಡುವಿನ ಬಂಧ ಮತ್ತಷ್ಟು ಬಲಿಷ್ಟವಾಗುತ್ತದೆ.

ಆಹಾರದ ನಾಳಗಳು: ಕೆಲವು ಅಕಾಲಿಕ ಶಿಶುಗಳಿಗೆ ತಮ್ಮ ಬಾಯಿಯಿಂದ ತಿನ್ನಲು ಸಾಧ್ಯವಾಗುವುದಿಲ್ಲ. ಹಾಗಾಗಿ ಅವುಗಳಿಗೆ ನೇರವಾಗಿ ಅಭಿದಮನಿಯೊಳಗೆ ಆಹಾರವನ್ನು ನೀಡುವ ವ್ಯವಸ್ಥೆ ಮಾಡಲಾಗುತ್ತದೆ. ಮತ್ತೆ ಕೆಲವು ಬಾರಿ ಮೂಗು ಅಥವಾ ಬಾಯಿಯಿಂದ ನೇರವಾಗಿ ಶಿಶುವಿನ ಹೊಟ್ಟೆಗೆ ನಾಳವನ್ನು ಜೋಡಿಸಿ ಆ ಮೂಲಕ ಆಹಾರವನ್ನು ನೀಡಲಾಗುತ್ತದೆ.

ದ್ರವ ಮೇಲ್ವಿಚಾರಣೆ ಮತ್ತು ಮರುಪೂರ್ಣ: ದ್ರವ, ಸೋಡಿಯಂ ಮತ್ತು ಪೊಟ್ಯಾಶಿಯಂ ಮಟ್ಟವನ್ನು ಹತ್ತಿರದಿಂದ ಗಮನಿಸಲಾಗುತ್ತದೆ. ಒಂದು ವೇಳೆ ಇವುಗಳಲ್ಲಿ ವ್ಯತ್ಯಯ ಕಂಡುಬಂದರೆ, ಅಭಿದಮನಿಗೆ ಸೇರಿಸಿರುವ ನಾಳದ ಮೂಲಕ ಅಗತ್ಯ ಪ್ರಮಾಣದಲ್ಲಿ ದ್ರವಗಳನ್ನು ನೀಡಲಾಗುತ್ತದೆ.

ಉಸಿರಾಟದ ಬೆಂಬಲ: ಕೆಲವು ಅಕಾಲಿಕ ಶಿಶುಗಳ ಶ್ವಾಸಕೋಶ ಸರಿಯಾಗಿ ಬೆಳವಣಿಗೆ ಆಗಿರುವುದಿಲ್ಲ. ಆದ್ದರಿಂದ ಮೂಗಿನ ಮೂಲಕ ಶ್ವಾಸನಾಳಕ್ಕೆ ನೇರವಾಗಿ ಹಾಕಿರುವ ಟ್ಯೂಬ್ ಅಥವಾ ನಾಳದಿಂದ ವೆಂಟಿಲೇಟರ್ ಮೂಲಕ ಆಮ್ಲಜನಕ ಸರಬರಾಜು ಮಾಡಲಾಗುತ್ತದೆ.

ಕಾಮಾಲೆಗಾಗಿ ಬಿಲಿರುಬಿನ್ ಬೆಳಕಿನ ಚಿಕಿತ್ಸೆ: ರಕ್ತದಲ್ಲಿ ಬಿಲಿರುಬಿನ್ ಎನ್ನುವ ವಸ್ತುವಿನ ಶೇಖರಣೆಯಿಂದಾಗಿ ಕಾಮಾಲೆ ಅಥವಾ ಜಾಂಡೀಸ್ ಕಾಣಿಸಿಕೊಳ್ಳುತ್ತದೆ. ಹಾಗಾಗಿ ಅಕಾಲಿಕವಾಗಿ ಜನಿಸಿದ ಶಿಶುಗಳನ್ನು ಬಿಲಿರುಬಿನ್ ಬೆಳಕು ಎನ್ನುವ ವಿಶೇಷ ಬೆಳಕಿನ ಅಡಿಯಲ್ಲಿ ಇರಿಸಲಾಗುತ್ತದೆ. ಈ ಬೆಳಕಿಗೆ ಶಿಶುವನ್ನು ಒಡ್ಡುವುದರಿಂದ ರಕ್ತದಲ್ಲಿನ ಬಿಲಿರುಬಿನ್ ಪ್ರಮಾಣ ನಾಶವಾಗುತ್ತದೆ.

ರಕ್ತ ವರ್ಗಾವಣೆ: ರಕ್ತದ ಕಣಗಳನ್ನು ಉತ್ಪತ್ತಿಸಲು ಅಸಮರ್ಥವಾದ ಅಕಾಲಿಕ ಶಿಶುಗಳಿಗೆ ರಕ್ತವನ್ನು ವರ್ಗಾವಣೆ ಮಾಡುವ ಮೂಲಕ ಅವಶ್ಯ ಪ್ರಮಾಣದಲ್ಲಿ ರಕ್ತಪೂರೈಕೆ ಮಾಡಲಾಗುತ್ತದೆ. ಶಿಶುವು ತನ್ನ ಸ್ವಶಕ್ತಿಯಿಂದ ಉಸಿರಾಡಲು, ಎದೆಹಾಲು ಅಥವಾ ಬಾಟಲಿಯಿಂದ ಹಾಲು ಕುಡಿಯಲು ಸಮರ್ಥವಾಗಿ, ಸೂಕ್ತವಾದ ದೇಹದ ಉಷ್ಣತೆಯನ್ನು ಕಾಪಾಡಿಕೊಂಡು ತೂಕ ಹೆಚ್ಚಿಸಿಕೊಳ್ಳಲು ಪ್ರಾರಂಭಿಸುತ್ತಿದ್ದಂತೆ ಆಸ್ಪತ್ರೆಯಿಂದ ಮನೆಗೆ ಕಳಿಸಲಾಗುತ್ತದೆ.

Comments are closed.