ಕರಾವಳಿ

ಶಿಕ್ಷಣ, ಧಾರ್ಮಿಕ ಕ್ಷೇತಕ್ಕೆ ಕೊಡುಗೆ ನೀಡಿದ ವೇ.ಮೂ. ಹಟ್ಟಿಯಂಗಡಿ ರಾಮಚಂದ್ರ ಭಟ್ ಇನ್ನಿಲ್ಲ

Pinterest LinkedIn Tumblr

ಕುಂದಾಪುರ:  ಹಟ್ಟಿಯಂಗಡಿ ಶ್ರೀ ಸಿದ್ದಿವಿನಾಯ ಕ್ಷೇತ್ರ ಅಭಿವೃದ್ಧಿ ಹಾಗೂ ಶೈಕ್ಷಣಿಕ ಸಂಸ್ಥೆ ಮೂಲಕ ಶಿಕ್ಷಣ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ ಹಟ್ಟಿಯಂಗಡಿ ಶ್ರೀ ಸಿದ್ದಿವಿನಾಯಕ ದೇವಸ್ಥಾನ ಆಡಳಿತ ಧರ್ಮದರ್ಶಿ ಎಚ್.ರಾಮಚಂದ್ರ ಭಟ್ (72) ಅಲ್ಪ ಕಾಲದ ಅಸೌಖ್ಯದಿಂದಾಗಿ ಶುಕ್ರವಾರ ಮಧ್ಯಾಹ್ನ ಬೆಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಪತ್ನಿ, ಇಬ್ಬರು ಗಂಡು ಹಾಗೂ ಇಬ್ಬರು ಹೆಣ್ಣು ಮಕ್ಕಳ ಅಗಲಿದ್ದಾರೆ.

ನಾಡಿನ ಹಲವು ಧಾರ್ಮಿಕ, ಶೈಕ್ಷಣಿಕ ಹಾಗೂ ಸಾಮಾಜಿಕ ಸಂಘ ಸಂಸ್ಥೆಯ ಪದಾಧಿಕಾರಿಯಾಗಿ ದುಡಿದಿದ್ದ ಅವರ ಅಧಿಕಾರವಧಿಯಲ್ಲಿ ಶ್ರೀ ಕ್ಷೇತ್ರ ಹಟ್ಟಿಯಂಗಡಿ ಹಲವು ಅಭಿವೃದ್ಧಿ ಕಾರ್ಯಗಳನ್ನು ಕಂಡಿತ್ತು. ತಂದೆ ಗಣಪಯ್ಯ ಭಟ್ಟರ ಕಾಲಾನಂತರ ದೇವಸ್ಥಾನದ ಜವಾಬ್ದಾರಿ ವಹಿಸಿಕೊಂಡಿದ್ದ ಅವರು ದೇಶಾದ್ಯಾಂತ ಭಕ್ತರ ಕ್ಷೇತ್ರಕ್ಕೆ ಕರೆ ತರುವಲ್ಲಿ ಯಶಸ್ವಿಯಾಗಿದ್ದು, ಚಿಕ್ಕ ಗುಡಿಯಲ್ಲಿದ್ದ ದೇವಸ್ಥಾನ ಶಿಲಾಮಯ ದೇವಸ್ಥಾನವಾಗಿ ಪರಿವರ್ತಿಸುವ ಮೂಲಕ ನಾಡಿನಾದ್ಯಂತ ಮಾತನಾಡುವ ಗಣಪತಿ ಕ್ಷೇತ್ರ ಎನ್ನುವ ಹೆಗ್ಗಳಿಕೆ ಪಡೆಯಲು ಕಾರಣೀಭೂತರಾಗಿದ್ದರು.

ಶ್ರೀ ಸಿದ್ಧಿವಿನಾಯಕ ಶೈಕ್ಷಣಿಕ ಪ್ರತಿಷ್ಠಾನದ ಅಡಿಯಲ್ಲಿ ಐಸಿ‌ಎಸ್‌ಇ ಮಾನ್ಯತೆ ಪಡೆದ ಆಂಗ್ಲ ಮಾಧ್ಯಮ ವಸತಿ ಶಾಲೆ. ಪ್ರಾಥಮಿಕ ಶಾಲೆ ಹಾಗೂ ಗೋ ಶಾಲೆ ಸ್ಥಾಪಿಸಿ ಶಾ‌ಐಕ್ಷಣಿಕ ಪ್ರಗತಿಗೂ ಕಾರಣರಾಗಿದ್ದರು. ಅಪರೂಪದ ಗಿಡಮೂಲಿಕೆಗಳ ರಕ್ಷಣೆಗಾಗಿ ಮೂಲಿಕಾ ವನ ಸ್ಥಾಪಿಸಿದ್ದಲ್ಲದೆ, ಗ್ರಾಮೀಣ ಭಾಗದ ಜನರಿಗಾಗಿ ಸುಸಜ್ಜಿತ ಆಯುರ್ವೇದ ಆಸ್ಪತ್ರೆ ಹಾಗೂ ವೃತ್ತಿ ಪರ ತರಬೇತಿ ಕೋರ್ಸ್ ಆರಂಭಿಸುವ ಯೋಜನೆ ಹೊಂದಿದ್ದರು.

ಶುಕ್ರವಾರ ತಡ ರಾತ್ರಿ ಪಾರ್ಥಿವ ಶರೀರ ಹಟ್ಟಿಯಂಗಡಿ ಶ್ರೀ ಸಿದ್ದಿವಿನಾಯಕ ವಸತಿ ಶಾಲೆಗೆ ತಂದು ಶನಿವಾರ ಬೆಳಿಗ್ಗೆ ೮ರವರೆಗೂ ಅಲ್ಲಿ ಸಾರ್ವಜನಿಕರ ದರ್ಶನಕ್ಕೆ ಇಡಲಾಗುವುದು. ಬಳಿಕ ಹಟ್ಟಿಯಂಗಡಿ ಸ್ವಗೃಹದಲ್ಲಿ ಬ್ರಾಹ್ಮಣ ಸಂಪ್ರದಾಯದಂತೆ ಅಂತ್ಯಕ್ರಿಯೆ ನಡೆಸಲಾಗುತ್ತದೆ.

Comments are closed.