ಕರಾವಳಿ

ಮಮತಾ ಬ್ಯಾನರ್ಜಿಯ ಪಕ್ಷದ ಕಾರ್ಯಕರ್ತರು ಬಿಜೆಪಿ ಕಚೇರಿಗಳನ್ನು ಧ್ವಂಸ ಮಾಡುತ್ತಿರುವುದು ಖಂಡನೀಯ : ಶಾಸಕ ಕಾಮತ್

Pinterest LinkedIn Tumblr

ಮಂಗಳೂರು : ಶಾರದಾ ಚಿಟ್ ಫಂಡ್, ರೋಸ್ ವ್ಯಾಲಿಯಲ್ಲಿ ಆಗಿರುವ ಬಹುಕೋಟಿ ಹಗರಣಕ್ಕೆ ಸಂಬಂಧಪಟ್ಟಂತೆ ಒಂದು ವೇಳೆ ತಾವು ಭ್ರಷ್ಟಾಚಾರ ಮಾಡಿಲ್ಲದೇ ಇದ್ದಲ್ಲಿ ಸಿಬಿಐ ತನಿಖೆಗೆ ಅಡ್ಡಿಪಡಿಸುವುದು ಯಾಕೆ ಎಂದು ಮಮತಾ ಬ್ಯಾನರ್ಜಿಯವರು ಸಿಬಿಐ ತನಿಖೆಗೆ ಅಡ್ಡಿ ಪಡಿಸುತ್ತಿರುವ ಬಗ್ಗೆ ಮಂಗಳೂರು ನಗರ ದಕ್ಷಿಣ ಶಾಸಕ ಡಿ ವೇದವ್ಯಾಸ ಕಾಮತ್ ಪ್ರಶ್ನಿಸಿದ್ದಾರೆ.

ದೀದಿ ಎಂದರೆ ಅಕ್ಕ ಎಂದು ಅರ್ಥ. ಅಕ್ಕನ ಸ್ಥಾನದಲ್ಲಿ ನಿಂತು ಭ್ರಷ್ಟಾಚಾರಿಗಳನ್ನು ಶಿಕ್ಷಿಸಿ ಶಾರದಾ ಚಿಟ್ ಫಂಡಿನಲ್ಲಿ ಹಣ ಕಳೆದುಕೊಂಡ ಪಶ್ಚಿಮ ಬಂಗಾಲದ ನಾಗರಿಕರಿಗೆ ನ್ಯಾಯ ಕೊಡಿಸಬೇಕಾಗಿದ್ದ ಮಮತಾ ಬ್ಯಾನರ್ಜಿ ಭ್ರಷ್ಟರನ್ನು ರಕ್ಷಿಸುತ್ತಿರುವುದು ಅವರ ಸ್ಥಾನಕ್ಕೆ ತಕ್ಕುದಲ್ಲ.

ಭ್ರಷ್ಟಾಚಾರಕ್ಕೆ ತನಿಖೆ ಬಂದ ಸಿಬಿಐ ಅಧಿಕಾರಿಗಳಿಗೆ ಕರ್ತವ್ಯಕ್ಕೆ ಅಡ್ಡಿಪಡಿಸಿ ಅವರ ಸೊತ್ತು ನಾಶ ಮಾಡಿರುವ ಟಿಎಂಸಿ ಗೂಂಡಾ ಕಾರ್ಯಕರ್ತರನ್ನು ಮಮತಾ ಬ್ಯಾನರ್ಜಿ ಬೆಂಬಲಿಸುತ್ತಿದ್ದಾರೆ. ಇದರಿಂದ ಉತ್ಸಾಹಗೊಂಡ ಅವರ ಪಕ್ಷದ ಕಾರ್ಯಕರ್ತರು ಪಶ್ಚಿಮ ಬಂಗಾಲದಲ್ಲಿರುವ ಬಿಜೆಪಿ ಕಚೇರಿಗಳನ್ನು ನಾಶ ಪಡಿಸಿದ್ದಾರೆ.

ಸುಪ್ರೀಂಕೋರ್ಟ್ ಎಚ್ಚರಿಕೆಯ ನಂತರವೂ ಸಿಎಂ ಸ್ಥಾನದಲ್ಲಿರುವ ಮಮತಾ ಉಡಾಫೆಯಿಂದ ವರ್ತಿಸುತ್ತಿರುವುದು ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಅರಾಜಕತೆಯ ವಾತಾವರಣ ಸೃಷ್ಟಿಸುತ್ತಿರುವುದಕ್ಕೆ ದ್ಯೋತಕ ಎಂದು ಶಾಸಕ ಕಾಮತ್ ಹೇಳಿದ್ದಾರೆ.

ಹಿಂದೆ ಯುಪಿಎ ಅಧಿಕಾರದಲ್ಲಿದ್ದಾಗ ಮಮತಾ ಬ್ಯಾನರ್ಜಿ ವಿರುದ್ಧ ಭ್ರಷ್ಟಾಚಾರದ ತನಿಖೆ ಆಗಬೇಕು ಎಂದು ಹೇಳುತ್ತಿದ್ದ ಕಾಂಗ್ರೆಸ್ ಈಗ ಯಾಕೆ ಮೌನವಾಗಿದೆ. ರಾಹುಲ್ ಗಾಂಧಿಯವರು ಮಮತಾ ಬ್ಯಾನರ್ಜಿಯವರ ಬೆಂಬಲಕ್ಕೆ ನಿಲ್ಲುವ ಮೂಲಕ ತಾವು ಕೂಡ ಭ್ರಷ್ಟಾಚಾರವನ್ನು ಪ್ರೋತ್ಸಾಹಿಸಿದಂತಾಗಿದೆ. ಈ ಕುರಿತು ಜಿಲ್ಲಾ ಕಾಂಗ್ರೆಸ್ ನಾಯಕರು ಸುದ್ದಿಗೋಷ್ಟಿ ಮಾಡಿ ಉತ್ತರಿಸಲಿ ಎಂದು ಶಾಸಕ ಕಾಮತ್ ಹೇಳಿದ್ದಾರೆ.

Comments are closed.