ಕರಾವಳಿ

ಕೂಳೂರಿನ ಅಕ್ರಮ ಜೂಜು ಅಡ್ಡೆಗೆ ಸಿಸಿಬಿ ದಾಳಿ : ಅಂದರ್- ಬಾಹರ್ ಆಡುತ್ತಿದ್ದ 13 ಮಂದಿ ಸೆರೆ – 16 ಸಾವಿರ ನಗದು ವಶ

Pinterest LinkedIn Tumblr

ಮಂಗಳೂರು : ನಗರದ ಕಾವೂರು ಪೊಲೀಸ್ ಠಾಣಾ ವ್ಯಾಪ್ತಿಯ ಕೂಳೂರು ಎಂಬಲ್ಲಿ ಹಣವನ್ನು ಪಣವಾಗಿಟ್ಟುಕೊಂಡು ಅಕ್ರಮವಾಗಿ ಅಂದರ್ – ಬಾಹರ್ ಎಂಬ ಜೂಜಾಟವಾಡುತ್ತಿದ್ದ 13 ಮಂದಿಯನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳನ್ನು ನಿತ್ಯಾನಂದ ಶೆಟ್ಟಿ, ಸುಜಯ್ ಶೆಟ್ಟಿ, ಲ್ಯಾನ್ಸಿ ಡಿಸೋಜ, ಕಾರ್ತಿಕ್ ದಿನೇಶ್ ಅಂಚನ್, ರಘು, ಅವಿನಾಶ್, ಮಹೇಶ್ ಕುಮಾರ್ ಶೆಟ್ಟಿ, ದೀಕ್ಷಿತ್ ಕುಮಾರ್, ಗಣೇಶ್ ಕುಮಾರ್, ದೀಪಕ್ ಶೆಟ್ಟಿ, ಮುಹಮ್ಮದ್ ಮುಸ್ತಫ, ಕೌಶಿಕ್ ಗೌಡ ಮತ್ತು ಮುಹಮ್ಮದ್ ಹನೀಫ್ ಎಂದು ಹೆಸರಿಸಲಾಗಿದೆ.

ಮಂಗಳೂರು ನಗರದ ಕಾವೂರು ಪೊಲೀಸ್ ಠಾಣಾ ವ್ಯಾಪ್ತಿಯ ಕೂಳೂರುನಲ್ಲಿ ಅಕ್ರಮವಾಗಿ ಜೂಜಾಟವಾಡುತ್ತಿದ್ದರೆಂಬ ಬಗ್ಗೆ ಖಚಿತ ಮಾಹಿತಿ ಪಡೆದ ಮಂಗಳೂರು ಸಿಸಿಬಿ ಪೊಲೀಸರು ಜೂಜಾಟವಾಡುತ್ತಿದ್ದ ಸ್ಥಳಕ್ಕೆ ದಾಳಿ ಮಾಡಿ ಜೂಜಾಟದಲ್ಲಿ ನಿರತರಾಗಿದ್ದ ಆರೋಪಿಗಳನ್ನು ಬಂಧಿಸಿದ್ದಾರೆ. ದಾಳಿ ಸಂದರ್ಭ ಓರ್ವ ಆರೋಪಿ ವಿಶ್ವಾಸ್ ಎಂಬಾತ ಓಡಿ ಹೋಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಂಧಿತ ಆರೋಪಿಗಳಿಂದ 16,800 ರೂ. ನಗದು, ಜೂಜಾಟಕ್ಕೆ ಉಪಯೋಗಿಸಿದ ಇಸ್ಪೀಟ್ ಕಾರ್ಡ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಜೂಜಾಟ ಆಡುತ್ತಿದ್ದವರನ್ನು ಹಾಗೂ ವಶಪಡಿಸಿಕೊಂಡ ಸೊತ್ತನ್ನು ಮುಂದಿನ ಕ್ರಮಕ್ಕಾಗಿ ಕಾವೂರು ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿದೆ.

ಸಿಸಿಬಿ ಇನ್‌ಸ್ಪೆಕ್ಟರ್ ಶಾಂತಾರಾಮ, ಎಸ್ಸೈಗಳಾದ ಶ್ಯಾಮಸುಂದರ್, ಹೆಚ್.ಡಿ ಕಬ್ಬಾಳ್‌ರಾಜ್ ಹಾಗೂ ಸಿಸಿಬಿ ಘಟಕದ ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

Comments are closed.