ಕರಾವಳಿ

ಬೆಳಗಾವಿ: ತಂಪು ಪಾನೀಯದಲ್ಲಿ ವಿಷ ಬೆರೆಸಿ ಕುಂದಾಪುರ ಮೂಲದ ಉದ್ಯಮಿ ಕೊಲೆ

Pinterest LinkedIn Tumblr

ಕುಂದಾಪುರ: ಹೊಟ್ಟೆಪಾಡಿಗಾಗಿ ಊರು ಬಿಟ್ಟು ಹೋಟೇಲ್‌ ವ್ಯವಹಾರವನ್ನು ಮಾಡಿಕೊಂಡಿದ್ದ ಉದ್ಯಮಿಯೊಬ್ಬರನ್ನು ಕೆಲಸಕ್ಕೆ ಜನ ಮಾಡಿಕೊಡುತ್ತೇವೆ ಎಂದು ನಂಬಿಸಿ ದೂರದ ಊರಿಗೆ ಬರ ಹೇಳಿ ತಂಪು ಪಾನೀಯದಲ್ಲಿ ವಿಷ ಬೆರೆಸಿ ವ್ಯವಸ್ಥಿತವಾಗಿ ಕೊಲೆ ನಡೆಸಿದ ಧಾರುಣ ಘಟನೆ ಬೆಳಗಾವಿ ಜಿಲ್ಲೆಯ ಬೈಲ್‌ಹೊಂಗಲ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಕೊಲೆಯಾದ ನತದೃಷ್ಟ ಉದ್ಯಮಿ ಇಲ್ಲಿಗೆ ಸಮೀಪದ ಇಡೂರು ಕುಂಜ್ಞಾಡಿ ಗ್ರಾಮದ ಹೊರಟ್ಟಿ ಎಂಬಲ್ಲಿನ ಚಂದ್ರಶೇಖರ ಶೆಟ್ಟಿ (40).

ಪ್ರಕರಣದ ಹಿನ್ನೆಲೆ
ವ್ಯವಹಾರ ನಡೆಸಲೆಂದು ಬೈಲ್‌ಹೊಂಗಲಕ್ಕೆ ತೆರಳಿದ್ದ ಚಂದ್ರಶೇಖರ ಶೆಟ್ಟಿ ಮೊದಲು ಬೀಡಾ ಅಂಗಡಿಯನ್ನು ಹೊಂದಿದ್ದರು. ಸಹೋದರನ ಮಾರ್ಗದರ್ಶನದಿಂದ ಇತ್ತೀಚೆಗಷ್ಟೇ ಬಸ್‌ಸ್ಟ್ಯಾಂಡ್‌ ಬಳಿಯಲ್ಲಿ ‘ಕರಾವಳಿ’ ಹೆಸರಿನ ಸಸ್ಯಹಾರಿ ಹೋಟೇಲ್‌ ಪ್ರಾರಂಭಿಸಿದ್ದರು. ಅಲ್ಪಾವಧಿಯಲ್ಲಿಯೇ ಹೋಟೇಲ್‌ಗೆ ಒಳ್ಳೆಯ ಹೆಸರು ಬಂದಿದ್ದರಿಂದ ವ್ಯಾಪಾರ ಜೋರಾಗಿ ನಡೆದಿತ್ತು. ಕಿರಿಯ ಸಹೋದರ ನಾಗರಾಜ್‌ ಶೆಟ್ಟಿ ಹೋಟೇಲ್‌ ಉದ್ಯಮವನ್ನು ನಡೆಸುತ್ತಿದ್ದರು.

ಅ.6 ರಂದು ಬೆಳಿಗ್ಗೆ ಹೋಟೇಲ್‌ಗೆ ಚಾ ಕುಡಿಯಲೆಂದು ಬಂದಿದ್ದ ಅಪರಿಚಿತ ವ್ಯಕ್ತಿಯೊಬ್ಬರು ಹೋಟೇಲ್‌ಗೆ ಕೆಲಸಗಾರರನ್ನು ಒದಗಿಸುವ ಬಗ್ಗೆ ಮಾತನಾಡಿದ್ದಾರೆ. ಕೆಲಸಗಾರ ಅವಶ್ಯಕತೆ ಇದ್ದಲ್ಲಿ ಸಮೀಪದ ಸಂಗೊಳ್ಳಿ ಡಾಬಾ ಬಳಿ ಬರುವಂತೆ ಸೂಚಿಸಿ ಆ ವ್ಯಕ್ತಿ ತೆರಳಿದ್ದಾರೆ. ಅ.8 ರಂದು ಬೆಳಿಗ್ಗೆ ಕೆಲಸಗಾರರನ್ನು ಮಾತನಾಡಿ ಬರಲು ಸಂಗೊಳ್ಳಿಗೆ ತೆರಳುತ್ತಿರುವುದಾಗಿ ಮನೆಯಲ್ಲಿ ಪತ್ನಿಯಲ್ಲಿ ಹೇಳಿ ಬೈಕ್‌ನ್ನು ಏರಿ ಹೊರಟ್ಟಿದ್ದ ಅವರಿಗೆ ಡಾಬಾ ತಲುಪುವ ಮೊದಲೆ ಕೆಲಸಗಾರರನ್ನು ಮಾಡಿಕೊಡುತ್ತೇವೆ ಎಂದು ಹೇಳಿದ್ದ ವ್ಯಕ್ತಿ ಹಾಗೂ ಆತನ ಸಹಚರರ ಭೇಟಿಯಾಗಿದೆ. ಈ ವೇಳೆ ಕುಡಿಯಲು ನೀಡಿದ ತಂಪು ಪಾನೀಯದಲ್ಲಿ ಅವರಿಗೆ ವಿಷ ಪದಾರ್ಥ ಮಿಶ್ರ ಮಾಡಿ ನೀಡಲಾಗಿತ್ತು ಎನ್ನಲಾಗಿದೆ.

ತಂಪು ಪಾನೀಯದ ರುಚಿಯಲ್ಲಿ ವ್ಯತ್ಯಾಸ ಕಂಡು ಬಂದಾಗ ಅದನ್ನು ಚಲ್ಲುವ ಪ್ರಯತ್ನ ನಡೆಸಿದ್ದರೂ ಅಪರಿಚಿತ ವ್ಯಕ್ತಿಗಳು ಬಲವಂತವಾಗಿ ಕುಡಿಸಲು ಯತ್ನಿಸಿದ್ದಾರೆ. ಈ ವೇಳೆ ಅವರಿಂದ ತಪ್ಪಿಸಿಕೊಂಡು ಬೈಕ್‌ ಏರಿ ಮರಳಿ ಬೈಲ್‌ಹೊಂಗಲದತ್ತ ಹೊರಟಿದ್ದ ಅವರು ದಾರಿಯಲ್ಲಿನ ಸೇತುವೆಯೊಂದರ ಬಳಿ ನಿತ್ರಾಣವಾಗಿ ಬಿದ್ದಿದ್ದರು. ಅವರನ್ನು ನೋಡಿದ ದಾರಿಹೋಕರು ಕಿಸೆಯಲ್ಲಿ ಇದ್ದ ಮೊಬೈಲ್‌ ದೂರವಾಣಿ ಸಹಾಯದಿಂದ ತಮ್ಮನಿಗೆ ಸುದ್ದಿ ಮುಟ್ಟಿಸಿದ್ದರು ಎಂದು ಬಂಧುಗಳು ತಿಳಿಸಿದ್ದಾರೆ.

ಸಹೋದರ ನಾಗರಾಜ್‌ ಹಾಗೂ ಇತರರು ಕೂಡಲೇ ಸ್ಥಳಕ್ಕೆ ತೆರಳಿ ಅವರನ್ನು ಬೈಲ್‌ಹೊಂಗಲದ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ, ವೈದ್ಯರ ಸಲಹೆ ಮೇರೆಗೆ ಬೆಳಗಾವಿಯ ಕೆಎಲ್‌ಎ ಆಸ್ಪತ್ರೆಗೆ ದಾಖಲಿಸಿದ್ದಾರೆ. 5 ದಿನಗಳ ಕಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದರೂ ಫಲಕಾರಿಯಾಗದೆ ಚಂದ್ರಶೇಖರ ಶೆಟ್ಟಿ ಶನಿವಾರ ಮೃತಪಟ್ಟಿದ್ದಾರೆ. ಭಾನುವಾರ ಹುಟ್ಟೂರಿಗೆ ಶವವನ್ನು ತಂದು ಅಂತ್ಯಕ್ರೀಯೆ ನಡೆಸಲಾಗಿದೆ. ಮೃತರಿಗೆ ಪತ್ನಿ ಹಾಗೂ 3 ವರ್ಷದ ಗಂಡು ಮಗು ಇದೆ.

ಕಗ್ಗಂಟಾದ ಪ್ರಕರಣ : ವಿಷ ವಸ್ತುವಿನ ಸೇವನೆಯಿಂದ ಚಂದ್ರಶೇಖರ ಶೆಟ್ಟಿ ಅವರ ಸಾವು ಸಂಭವಿಸದೆ ಎನ್ನುವ ಮಾಹಿತಿಗಳಿದೆ. ತಂಪು ಪಾನೀಯದಲ್ಲಿ ವಿಷವನ್ನು ಹಾಕಿ ಕೊಲೆ ಮಾಡುವ ನೀಚ ಕೆಲಸಕ್ಕೆ ಕಾರಣರಾದವರು ಯಾರು ಎನ್ನುವುದು ನಿಗೂಢವಾಗಿದೆ. ಶಾಂತ ಸ್ವಭಾವದ ಅವರಿಗೆ ಯಾವುದೆ ಕಾರಣದಿಂದಲೂ ಶತ್ರುಗಳು ಇದ್ದಿರಲಿಲ್ಲ ಎಂದು ದುಖ: ವ್ಯಕ್ತಪಡಿಸುತ್ತಿರುವ ಬಂಧುಗಳು ವ್ಯವಹಾರಿಕ ವೈಷಮ್ಯವೇ ಘಟನೆಗೆ ಕಾರಣ ಇರಬಹುದು ಎನ್ನುವ ಶಂಕೆಗಳನ್ನು ವ್ಯಕ್ತಪಡಿಸುತ್ತಿದ್ದಾರೆ.

5 ದಿನಗಳ ಕಾಲ ಆಸ್ಪತ್ರೆಯಲ್ಲಿ ಜೀವನ್ಮರಣ ಸ್ಥಿತಿಯಲ್ಲಿ ಹೋರಾಟ ನಡೆಸುತ್ತಿದ್ದ ಅವರು ಈ ವೇಳೆ ಚಿಂತಾಜನಕ ಸ್ಥಿತಿಯಲ್ಲಿ ಇದ್ದುದರಿಂದಾಗಿ ಘಟನೆ ಕುರಿತಂತೆ ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳುವ ಪ್ರಯತ್ನಗಳು ಫಲ ನೀಡಿರಲಿಲ್ಲ. ಸ್ಥಳಕ್ಕೆ ಭೇಟಿ ನೀಡಿದ ಬೆಳಗಾವಿ ಎಸ್‌.ಪಿ ಸುಧೀರ್‌ಕುಮಾರ ರೆಡ್ಡಿ ಮಾಹಿತಿ ಕಲೆ ಹಾಕಿದ್ದು, ತನಿಖೆಗೆ ಮಾರ್ಗದರ್ಶನ ನೀಡಿದ್ದಾರೆ.

ಪ್ರಕರಣ ದಾಖಲಿಸಿಕೊಂಡಿರುವ ಬೈಲ್‌ಹೊಂಗಲ ಪೊಲೀಸ್‌ ಸರ್ಕಲ್‌ ಇನ್ಸ್‌ಪೆಕ್ಟರ್‌ ಮಂಜುನಾಥ, ಡಿವೈಎಸ್‌ಪಿ ಕರುಣಾಕರ ಶೆಟ್ಟಿ ಅವರ ಮಾರ್ಗದರ್ಶನದಲ್ಲಿ ತನಿಖೆ ನಡೆಸುತ್ತಿದ್ದಾರೆ.

Comments are closed.