ಕರಾವಳಿ

ಬಸ್ರೂರು ಮೂರುಕೈ ಅಂಡರ್ ಪಾಸ್ ನಿರ್ಮಾಣಕ್ಕಾಗಿ ಸಂಚಾರ ಬದಲಾವಣೆಗೆ ವಿರೋಧ, ನಾಳೆ ಸಭೆ

Pinterest LinkedIn Tumblr

ಕುಂದಾಪುರ: ಕುಂದಾಪುರ ಬಸ್ರೂರು ಮೂರುಕೈ ಜಂಕ್ಷನ್ ನಲ್ಲಿ ರಾಷ್ಟ್ರೀಯ ಹೆದ್ದಾರಿ ಅಗಲೀಕರಣದ ಕುರಿತು ವೈಕ್ಯುಲರ್ ಅಂಡರ್ ಪಾಸ್ ಕಾಮಗಾರಿಯನ್ನು ಪ್ರಾರಂಭಿಸುವ ಹಿನ್ನೆಲೆ ಎಲ್ಲಾ ವಾಹನ ಚಾಲಕರು ಸರ್ವಿಸ್ ರಸ್ತೆ ಬಳಸಬೇಕಾಗಿದ್ದು ಇದು ಅವೈಜ್ಞಾನಿಕವಾಗಿದೆಯೆಂದು ನಾಗರೀಕರ ಜಾಗೃತಿ ಸಮಿತಿ ಪ್ರಕಟನೆಯಲ್ಲಿ ತಿಳಿಸಿದೆ. ಈ ಬಗ್ಗೆ ಮಂಗಳವಾರ ಸಂಜೆ ವಾಹನ ಚಾಲಕರು, ಮಾಲಕರು ಸೇರಿದಂತೆ ಸಮಾನ ಮನಸ್ಕರ ಸಭೆ ಕರೆದು ಚರ್ಚಿಸಲಾಗುವುದು ಎಂದಿದ್ದಾರೆ.

(ಬಸ್ರೂರು ಮೂರುಕೈ ಪ್ರದೇಶ)

ನಾಳೆ ಸಂಜೆ 3.30ಕ್ಕೆ ಕುಂದಾಪುರ ಆರ್.ಎನ್. ಶೆಟ್ಟಿ ಸಭಾಂಗಣದಲ್ಲಿ ಈ ಸಭೆ ನಡೆಯಲಿದೆ. ಶಾಸ್ರ್ತೀ ವೃತ್ತದ ಸಮೀಪ ನಿರ್ಮಾಣಗೊಳ್ಳುತ್ತಿರುವ ಫ್ಲೈ ಓವರ್ ಕಾಮಗಾರಿಯೇ ಬಹಳಷ್ಟು ವರ್ಷದಿಂದ ಆಮೆಗತಿಯಲ್ಲಿ ಸಾಗುತ್ತಿದ್ದು ಅದು ಪರಿಪೂರ್ಣವಾಗದೇ ಇಲ್ಲಿ ಕಾಮಗಾರಿ ಆರಂಭಿಸುವ ಕಾರಣ ಸಂಚಾರ ದಟ್ಟಣೆ ಹೆಚ್ಚಲಿದೆ. ಅಲ್ಲದೇ ಕಾಮಗಾರಿಯೂ ಕೂಡ ನಿಧಾನ ಗತಿಯಲ್ಲಿ ಸಾಗುವ ಸಂಭವವಿದೆ ಎಂದು ಸಮಿತಿ ಹೇಳಿದೆ. ಇನ್ನು ಈ ಕಾಮಗಾರಿ ಆರಂಭವಾದಲ್ಲಿ ಪೂರ್ಣಗೊಳ್ಳಲು ವರ್ಷಗಟ್ಟಲೇ ಸಮಯ ಬೇಕಿದೆ ಎನ್ನಲಾಗಿದೆ.

ಸಂಚಾರ ಬದಲಾವಣೆ ಹೇಗೆ?
ಕುಂದಾಪುರದಿಂದ ಉಡುಪಿ ಮಂಗಳೂರು ಮಾರ್ಗವಾಗಿ ಹೋಗುವವರು, ಬೊಬ್ಬರ್ಯನ ಕಟ್ಟೆ ಬಳಿ ಎಡಕ್ಕೆ ತಿರುಗಿ ಸರ್ವೀಸ್ ರಸ್ತೆಯ ಮೂಲಕ ವಿನಾಯಕ ಥಿಯೇಟರ್ ಬಳಿ ಬಲಕ್ಕೆ ತಿರುಗಿ ಹೆದ್ದಾರಿಯನ್ನು ತಲುಪಬೇಕು. ಜೊತೆಗೆ ಮೂರುಕೈ ಮುಖಾಂತರ ಕುಂದಾಪುರ ಕಡೆಗೆ ಹೋಗುವವರು ಎಡಕ್ಕೆ ತಿರುಗಿ ಯು ಟರ್ನ್ ಬಳಸಬೇಕಾಗುತ್ತದೆ. ಉಡುಪಿಯಿಂದ ಬೈಂದೂರು ಕಡೆಗೆ ಹೋಗುವವರು ವಿನಾಯಕ ಥಿಯೇಟರ್ ಬಳಿ ಎಡಕ್ಕೆ ತಿರುಗಿ, ಸರ್ವಿಸ್ ರಸ್ತೆ ಬಳಸಿ, ಶಾಸ್ರ್ತೀ ವೃತ್ತ ತಲುಪಬೇಕಾಗಿರುತ್ತದೆ ಜೊತೆಗೆ ಉಡುಪಿಯಿಂದ ಸಿದ್ದಾಪುರ ಶಿವಮೊಗ್ಗ ಹೋಗುವವರು ಬೊಬ್ಬರ್ಯನ ಕಟ್ಟೆ ಬಳಿ ಯು ಟರ್ನ್ ಬಳಸಬೇಕಾಗುತ್ತದೆ.

ಇನ್ನು ಸರ್ವಿಸ್ ರಸ್ತೆಯಲ್ಲಿ ವಾಹನ ನಿಲುಗಡೆಯನ್ನು ನಿಷೇಧಿಸಲಾಗಿದೆ ಎಂದು ಕುಂದಾಪುರ ವಿಭಾಗದ ಸಹಾಯಕ ಆಯುಕ್ತ ಭೂ ಬಾಲನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Comments are closed.