ಕರಾವಳಿ

ಮಂಗಳೂರಿನಲ್ಲಿ ಆದಾಯ ತೆರಿಗೆ ಗುಪ್ತಚರ ಮತ್ತು ಅಪರಾಧ ತನಿಖಾ ವಿಭಾಗದ ಜಿಲ್ಲಾ ಕಚೇರಿ ಲೋಕಾರ್ಪಣೆ

Pinterest LinkedIn Tumblr

ಮಂಗಳೂರು, ಅಕ್ಟೋಬರ್.02: ಭಾರತ ಸರಕಾರದ ಹಣಕಾಸ ಸಚಿವಾಲಯದ ಆದಾಯ ತೆರಿಗೆ ವಿಭಾಗದ ಗುಪ್ತಚರ ಮತ್ತು ಅಪರಾಧ ತನಿಖಾ ವಿಭಾಗದ ನೂತನ ಜಿಲ್ಲಾ ಕಚೇರಿ ಪಾಂಡೇಶ್ವರದ ಅಲ್ಬುಕರ್ಕ್ ಹೌಸ್‌ನಲ್ಲಿ ಶುಭಾರಂಭಗೊಂಡಿತ್ತು.

ದಿಲ್ಲಿಯ ಆದಾಯ ತೆರಿಗೆ (ಗುಪ್ತಚರ ಮತ್ತು ಅಪರಾಧ ತನಿಖಾ ವಿಭಾಗ) ಇಲಾಖೆಯ ನಿರ್ದೇಶಕ ಡಿ.ಕೆ.ಮಿಶ್ರಾ ಅವರು ಆದಾಯ ತೆರಿಗೆ ಜಿಲ್ಲಾ ಕಚೇರಿಯನ್ನು ಲೋಕಾರ್ಪಣೆಗೊಳಿಸಿದರು. ಈ ವೇಳೆ ಮಾತನಾಡಿದ ಅವರು,ಆದಾಯ ತೆರಿಗೆಗೆ ಸಂಬಂಧಿಸಿದಂತೆ ಗುಪ್ತಚರ ಮತ್ತು ಅಪರಾಧ ತನಿಖಾ ವಿಭಾಗದಿಂದ 3.5 ಲಕ್ಷ ಪ್ರಕರಣಗಳನ್ನು ಆಯ್ದುಕೊಳ್ಳಲಾಗಿತ್ತು. ಇದರಲ್ಲಿ 60,000 ಪ್ರಕರಣಗಳನ್ನು ಪತ್ತೆ ಹಚ್ಚಿ ಆದಾಯ ತೆರಿಗೆ ಇಲಾಖೆಗೆ ವರದಿ ಸಲ್ಲಿಸಿದೆ. ಅವುಗಳಲ್ಲಿ 13,000 ತೆರಿಗೆ ವಂಚಿಸಿದ ಪ್ರಕರಣಗಳು ಪತ್ತೆಯಾಗಿವೆ. ಇದರಲ್ಲಿ 20,000 ಕೋಟಿ ರೂ.ಗೂ ಹೆಚ್ಚಿನ ಅಘೋಷಿತ ಆದಾಯ ಪತ್ತೆಯಾಗಿದೆ ಎಂದು ತಿಳಿಸಿದರು.

ಭಾರತೀಯರು ದುಬೈನಲ್ಲಿ ಹೂಡಿಕೆ ಮಾಡಿರುವುದನ್ನು ಕೂಲಂಕಷವಾಗಿ ಪರಿಶೀಲಿಸುವ ಪ್ರಾಯೋಗಿಕ (ಪೈಲಟ್) ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದೆ. ದುಬೈನಲ್ಲಿ ಹೂಡಿಕೆ ಮಾಡಿರುವವರು ಭಾರತಕ್ಕೆ ತೆರಿಗೆ ಸಲ್ಲಿಸಿದ ಅಥವಾ ತೆರಿಗೆ ವಂಚಿಸಿದ ಬಗ್ಗೆ ಮಾಹಿತಿ ಸಂಗ್ರಹಿಸಲಾಗುವುದು. ಈ ಯೋಜನೆ ಯಶಸ್ವಿಯಾಗಿದಲ್ಲಿ ಉಳಿದ ರಾಷ್ಟ್ರಗಳಲ್ಲೂ ಈ ಯೋಜನೆಯನ್ನು ಕಾರ್ಯರೂಪಕ್ಕೆ ತರಲಾಗುವುದು ಎಂದರು.

ಭಾರತ ಸರಕಾರಕ್ಕೆ ಆದಾಯ ತೆರಿಗೆ ಸಲ್ಲಿಸುವಲ್ಲಿ ಮಂಗಳೂರು ರಾಜ್ಯದಲ್ಲಿಯೇ ಎರಡನೇ ಸ್ಥಾನವನ್ನು ತನ್ನದಾಗಿಸಿಕೊಂಡಿದೆ. ತೆರಿಗೆ ಸಲ್ಲಿಸುವಿಕೆ 34ರಿಂದ 50 ಮಿಲಿಯನ್‌ಗೂ ಹೆಚ್ಚಿದೆ. ಶೇ.70ರಷ್ಟು ಬೆಳವಣಿಗೆ ಕಂಡಿದೆ. ರಾಷ್ಟ್ರೀಯ ಆದಾಯದಲ್ಲಿ ಶೇ.1ರಿಂದ 1.4ರಷ್ಟು ಏರಿಕೆಯಾಗಿದ್ದು, ಆದಾಯ ಸಂಗ್ರಹಣೆಯಲ್ಲಿ ದೇಶದ ಆರ್ಥಿಕತೆ ಅಡಕವಾಗಿದೆ ಎಂದರು. .

ಈ ಸಂದರ್ಭದಲ್ಲಿ ಮಂಗಳೂರು ಆದಾಯ ತೆರಿಗೆ ಇಲಾಖೆಯ ಪ್ರಧಾನ ಆಯುಕ್ತ ನರೋತ್ತಮ ಮಿಶ್ರಾ, ಬೆಂಗಳೂರಿನ ಆದಾಯ ತೆರಿಗೆ (ಗುಪ್ತಚರ ಮತ್ತು ಅಪರಾಧ ತನಿಖಾ ವಿಭಾಗ) ಇಲಾಖೆಯ ನಿರ್ದೇಶಕ ಅರುಣಕುಮಾರ್, ಆದಾಯ ತೆರಿಗೆ ಇಲಾಖೆಯ ಉಪನಿರ್ದೇಶಕ ನರಸಿಂಹರಾಜು ಎಂ., ಆದಾಯ ತೆರಿಗೆ ಆಯುಕ್ತ ಡಾ.ಶಾಕೀರ್ ಹುಸೈನ್, ಫೆಲಿಕ್ ಆಲ್ಬುಕರ್ಕ್ ಮತ್ತಿತರರು ಉಪಸ್ಥಿತರಿದ್ದರು. .

Comments are closed.