ಕರಾವಳಿ

ಗರ್ಭಾವಸ್ಥೆಯಲ್ಲಿ ಪಾದಗಳ ಊತದ ಸಮಸ್ಯೆ ನಿವಾರಣೆಗೆ ಇಲ್ಲಿದೆ ಟಿಪ್ಸ್

Pinterest LinkedIn Tumblr

ಮಹಿಳೆಯರು ತನ್ನ ಗರ್ಭಾವಸ್ಥೆಯಲ್ಲಿ ದೇಹಕ್ಕೆ ಎದುರಾಗುವ ಹಲವಾರು ಬದಲಾವಣೆಗಳಲ್ಲಿ ಕೆಲವು ಆಹ್ಲಾದಕರವಾಗಿದ್ದರೆ ಕೆಲವು ನೆಮ್ಮದಿಯನ್ನೇ ಕೆಡಿಸುತ್ತವೆ. ವಾಕರಿಕೆ, ಸುಸ್ತು, ತಲೆ ತಿರುಗುವುದು ಮೊದಲಾದವು ನೆಮ್ಮದಿ ಕೆಡಿಸುವ ಕೆಲವು ಅನಿವಾರ್ಯ ಬದಲಾವಣೆಗಳು. ಈ ಪಟ್ಟಿಗೊಂದು ಸೇರ್ಪಡೆ ಎಂದರೆ ಊದಿಕೊಳ್ಳುವ ಪಾದಗಳು. ಇದರಿಂದ ಮನೆಯೊಳಗೆ ಅಗತ್ಯಕೆಲಸಗಳಿಗಾಗಿ ನಡೆದಾಡಲೂ ಬಹಳವೇ ಕಷ್ಟಕರವಾಗುತ್ತದೆ. ಇಂದಿನ ಗರ್ಭಿಣಿಯರು ಅದೃಷ್ಟವಂತರು. ಏಕೆಂದರೆ ಈ ಸ್ಥಿತಿಯನ್ನು ಕಡಿಮೆಗೊಳಿಸಲು ಯಾವುದೇ ಅಡ್ಡಪರಿಣಾಮಗಳಿಲ್ಲದ ವಿಧಾನ ಲಭ್ಯವಿದೆ. ಈ ವಿಧಾನಗಳಿಂದ ಪಾದಗಳನ್ನು ಊದಿಕೊಳ್ಳದಂತೆ ತಡೆಯಬಹುದು ಅಲ್ಲದೇ ಒಂದು ವೇಳೆ ಊದಿಕೊಂಡಿದ್ದರೂ ಶೀಘ್ರವೇ ಶಮನಗೊಳ್ಳಲೂ ಸಾಧ್ಯವಾಗುತ್ತದೆ.

ಇತರರಂತೆ ಗರ್ಭಿಣಿಯರೂ ಪ್ರತಿದಿನ ಆರರಿಂದ ಎಂಟು ಲೋಟಗಳಷ್ಟು ನೀರನ್ನು ಕುಡಿಯಬೇಕು. ಪ್ರಥಮವಾಗಿ ಕಾಲು ಊದಿಕೊಳ್ಳಲಿಕ್ಕೆ ನೀರಿನ ಕೊರತೆಯೇ ಕಾರಣ. ದಿನವಿಡೀ ಕೊಂಚಕೊಂಚವಾಗಿಯಾದರೂ ಅಗತ್ಯವಿದ್ದಷ್ಟು ನೀರು ಕುಡಿದರೆ ದೇಹದಿಂದ ವಿಷಕಾರಿ ವಸ್ತುಗಳು ಹೊರಹೋಗುವಂತೆ ಮಾಡಿ ಪಾದಗಳ ಊತವನ್ನು ಪ್ರಾರಂಭದಲ್ಲಿಯೇ ತಡೆಯಬಹುದು. ನೀರನ್ನು ಹೆಚ್ಚು ಹೆಚ್ಚು ಕುಡಿಯುತ್ತಿರುವ ಮೂಲಕ ಶೌಚಾಲಯಕ್ಕೆ ಹೋಗುವ ಸಂಖ್ಯೆಯಲ್ಲಿಯೂ ಹೆಚ್ಚಳವಾಗುತ್ತದೆ

ಇದರಿಂದ ಅನಿವಾರ್ಯವಾಗಿ ಪಾದಗಳನ್ನು ನೆಲಕ್ಕೆ ಊರುವ ಮೂಲಕ ರಕ್ತಪರಿಚಲನೆ ಹೆಚ್ಚುತ್ತದೆ ಹಾಗೂ ಊದಿಕೊಳ್ಳುವ ಸಂಭವ ಕಡಿಮೆಯಾಗುತ್ತದೆ. ಅಷ್ಟೇ ಅಲ್ಲ, ಆಗಾಗ ನಡೆದಾಡುತ್ತಾ ಇರುವ ಮೂಲಕ ದೇಹದ ಇತರ ಯಾವುದೇ ಭಾಗದಲ್ಲಿ ಊತವಾಗುವುದರಿಂದ ತಡೆಗಟ್ಟಬಹುದು. ಮುಖ್ಯವಾಗಿ ಮುಖ, ಕೈಗಳು, ಮೊಣಕಾಲ ಕೆಳಭಾಗ, ಹಸ್ತಗಳು, ಕಣ್ಣಿನ ಕೆಳಭಾಗ, ಕುತ್ತಿಗೆ, ಕಂಕುಳು ಮೊದಲಾದ ಕಡೆ ಊತ ಕಾಣಿಸಿಕೊಳ್ಳುತ್ತದೆ.

ಈ ಸ್ಥಿತಿಗೆ ಇನ್ನೊಂದು ಕಾರಣವೆಂದರೆ ಹೆಚ್ಚು ಹೊತ್ತು ನಿಲ್ಲುವುದು. ಈಗಿನ ಅಡುಗೆ ಮನೆಯಲ್ಲಿ ಎಲ್ಲಾ ಕೆಲಸಗಳನ್ನು ನಿಂತೇ ಮಾಡುವುದು ಒಂದು ಕಾರಣವಾಗಿದೆ. ಆದರೆ ಕೆಲವಾದರೂ ಕೆಲಸಗಳನ್ನು ಕುಳಿತು ಮಾಡಬೇಕು. ಅಲ್ಲದೇ ನಿಂತ ಭಂಗಿ ಏಕಪ್ರಕಾರವಾಗಿರದೇ ಕೊಂಚ ಬಗ್ಗಿ ಮಾಡುವ ಕೆಲಸವನ್ನೂ ಆಗಾಗ ನಿರ್ವಹಿಸುತ್ತಿರಬೇಕು. ಈ ಸುಲಭ ಬದಲಾವಣೆಗಳಿಂದ ಪಾದಗಳು ಊದಿಕೊಳ್ಳುವ ಸಂಭವ ಅಪಾರವಾಗಿ ಕಡಿಮೆಯಾಗುತ್ತದೆ.

ಗರ್ಭಿಣಿಯರ ಕಾಲಿನ ಊತ ತಡೆಯುವುದು ಹೇಗೆ? ಪಾದಗಳು ಊದಿಕೊಂಡಿದ್ದರೆ ಇದನ್ನು ಕಡಿಮೆಗೊಳಿಸಲು ಇನ್ನೊಂದು ಪರ್ಯಾಯ ವಿಧಾನವೆಂದರೆ ಉಪ್ಪನ್ನು ಕಡಿಮೆ ಮಾಡುವುದು. ಉಪ್ಪು ಹೆಚ್ಚಿದ್ದಷ್ಟೂ ನೀರು ದೇಹದಲ್ಲಿಯೇ ಉಳಿದುಬಿಡುತ್ತದೆ. ಅದರಲ್ಲಿಯೂ ಗರ್ಭಾವಸ್ಥೆಯಲ್ಲಿ ಪಾದ, ಹಸ್ತ, ಮುಖ ಮೊದಲಾದ ಭಾಗಗಳಲ್ಲಿ ಊತ ಕಾಣಿಸಿಕೊಳ್ಳಲು ಕಾರಣವಾಗುತ್ತದೆ. ಆದ್ದರಿಂದ ಉಪ್ಪನ್ನು ಆದಷ್ಟು ಕಡಿಮೆ ಮಾಡಬೇಕು. ಆದರೆ ಪೂರ್ಣವಾಗಿ ಬಿಟ್ಟೇ ಬಿಡುವುದೂ ತರವಲ್ಲ.

ಇತರ ಕೆಲಸಗಳಿಗೆ ಕೊಂಚವೇ ಉಪ್ಪು ಅಗತ್ಯವಿದ್ದೇ ಇರುತ್ತದೆ. ಆದ್ದರಿಂದ ಅತಿ ಕಡಿಮೆ ಪ್ರಮಾಣದಲ್ಲಿ ಮಾತ್ರ ಸೇವಿಸಬೇಕು. ಗರ್ಭಾವಸ್ಥೆಯಲ್ಲಿ ಸೇವಿಸುವ ಆಹಾರವೂ ಪರೋಕ್ಷವಾಗಿ ಪಾದಗಳು ಊದಿಕೊಳ್ಳಲು ಕಾರಣವಾಗಿವೆ. ಆದ್ದರಿಂತ ಸಮತೋಲನ ಆಹಾರದ ಸೇವನೆ ವಿಹಿತವಾಗಿದೆ. ಪಾದಗಳಲ್ಲಿ ಹೆಚ್ಚಿನ ಒತ್ತಡ ಪಾದಗಳ ಊತಕ್ಕೆ ಕಾರಣವಾಗಬಹುದು. ಗರ್ಭಿಣಿಯರ ಸಹಿತ ಎಲ್ಲಾ ಮಹಿಳೆಯರು ತೊಡುವ ವಸ್ತ್ರಗಳು ಬಿಗಿಯಾಗಿದ್ದರೆ ಕಾಲುಗಳ ತುದಿಭಾಗಕ್ಕೆ ಅಂದರೆ ಪಾದಗಳಿಗೆ ತಲುಪುವ ರಕ್ತದ ಪ್ರಮಾಣ ಕಡಿಮೆಯಾಗುತ್ತದೆ. ಇದು ಪಾದಗಳ ಮೇಲೆ ಹೆಚ್ಚಿನ ಒತ್ತಡಕ್ಕೆ ಕಾರಣವಾಗುತ್ತದೆ. ಅಲ್ಲದೇ ಅತಿ ಹೆಚ್ಚು ಹೀಲ್ಡ್
ಇರುವ ಪಾದರಕ್ಷೆಗಳೂ ಗರ್ಭಿಣಿಯರಿಗೆ ತರವಲ್ಲ. ತೆಳ್ಳನೆಯ ಮತ್ತು ಚಪ್ಪಟೆ ಪಾದರಕ್ಷೆಗಳನ್ನು ಹಾಗೂ ಸಾಕಷ್ಟು ಸಡಿಲವಾದ ಉಡುಗೆಗಳನ್ನು ತೊಡುವ ಮೂಲಕ ಗರ್ಭಿಣಿಯರು ಪಾದಗಳು ಊದಿಕೊಳ್ಳದಂತೆ ನೋಡಿಕೊಳ್ಳಬಹುದು.

ಪ್ರತಿ ಗರ್ಭಿಣಿಯೂ ಅನುಸರಿಸಬೇಕಾದ ಇನ್ನೊಂದು ಅಗತ್ಯವಾದ ಕ್ರಮವೆಂದರೆ ಇಡಿಯ ದಿನ ಒಂದೇ ಭಂಗಿಯಲ್ಲಿ ಒಂದೇ ಕಡೆ ಕುಳಿತುಕೊಳ್ಳುವುದು ಅಥವಾ ಮಲಗುವುದನ್ನು ಮಾಡದಿರುವುದು. ಗರ್ಭಿಣಿಯರಿಗೆ ಎಲ್ಲರೂ ‘ಆರಾಮ ಮಾಡಿ’ ಎಂಬ ಸಲಹೆಯನ್ನು ಗೊತ್ತಿಲ್ಲದೇ ನೀಡುತ್ತಾರೆ. ವಾಸ್ತವವಾಗಿ ಗರ್ಭಿಣಿಯರಿಗೆ ಆರಾಮದ ಅವಶ್ಯಕತೆ ಇದೆಯೇ ಹೊರತು ಇಡಿಯ ದಿನ ಒಂದೇ ಕಡೆ ತಟಸ್ಥವಾಗಿರುವುದಲ್ಲ. ಸಾಧ್ಯವಾದಷ್ಟು ತನ್ನ ದೇಹವನ್ನು ಚಾಲನೆಯಲ್ಲಿಡುವುದು ಅಗತ್ಯ.

ಬಗ್ಗುವ, ಕೈ ಮೇಲೆತ್ತುವ, ಪಕ್ಕಕ್ಕೆ ಹೊರಳುವ, ಒಟ್ಟಾರೆ ಇಡಿಯ ಮೈ ಕೊಂಚವಾದರೂ ಸೆಳೆತಕ್ಕೊಳಗಾಗುವ ಯಾವುದೇ ಚಟುವಟಿಕೆಯನ್ನು ಗರ್ಭಿಣಿ ಇಡಿಯ ದಿನ ಅನುಸರಿಸುತ್ತಾ ಇರಬೇಕು. ಸಾಕಷ್ಟು ನಡೆದಾಡುತ್ತಲೂ ಇರಬೇಕು. ಇದರಿಂದ ರಕ್ತಪರಿಚಲನೆ ಉತ್ತಮಗೊಂಡು ಆರೋಗ್ಯವೂ ಉತ್ತಮಗೊಳ್ಳುತ್ತದೆ ಹಾಗೂ ಊತದಿಂದಲೂ ರಕ್ಷಿಸುತ್ತದೆ. ಒಂದು ವೇಳೆ ಎಲ್ಲಾದರೂ ರಕ್ತಪರಿಚಲನೆ ಕಡಿಮೆಯಾದರೆ ಒಂದೇ ರಾತ್ರಿಯಲ್ಲಿ ಊತ ಕಾಣಿಸಿಕೊಳ್ಳುತ್ತದೆ.

ಆದ್ದರಿಂದ ಗರ್ಭಿಣಿ ಮೇಲೆ ತಿಳಿಸಿದ ಎಲ್ಲಾ ವಿಧಾನಗಳನ್ನು ಪ್ರತಿದಿನ ಅನುಸರಿಸುತ್ತಾ ಇರಬೇಕು. ಅಲ್ಲದೇ ವಿಶ್ರಾಂತಿಯ ವೇಳೆ ಕಾಲುಗಳ ಕೆಳಗೆ ದಿಂಬು ಇಟ್ಟು ಪಾದಗಳು ಕೊಂಚ ಮೇಲೆ ಇರುವಂತೆ ಇರಿಸಿ ಆರಾಮ ಮಾಡಿದರೆ ಪಾದಗಳು ಊದಿಕೊಳ್ಳುವ ಸಾಧ್ಯತೆ ಸಾಕಷ್ಟು ಕಡಿಮೆಯಾಗುತ್ತದೆ.

ಊತ ಈಗಾಗಲೇ ಕಾಣಿಸಿಕೊಂಡಿದ್ದರೆ ಕೆಳಗಿನ ಕ್ರಮ ಅನುಸರಿಸಿ:
* ಕುಡಿಯುವ ನೀರಿನ ಪ್ರಮಾಣ ಹೆಚ್ಚಿಸಿ
* ಎಡಮಗ್ಗುಲಲ್ಲಿಯೇ ಮಲಗಿ
* ನಿಂತಲ್ಲಿ ಕಾಲನ್ನು ಕೊಡವಿಕೊಳ್ಳುತ್ತಾ ಇರಿ. ಇದರಿಂದ ಪಾದಗಳಿಗೆ ರಕ್ತಸಂಚಾರ ಹೆಚ್ಚುತ್ತದೆ.
* ಸಾಧ್ಯವಾದರೆ ಪಾದಗಳು ಮುಳುಗುವಷ್ಟು ನೀರಿನಲ್ಲಿ ಓಡಾಡಿ (ಚಿಕ್ಕ ತೊರೆ, ಹಳ್ಳ ಇತ್ಯಾದಿ) ಇದು ಸಾಧ್ಯವಾಗದಿದ್ದರೆ ಈಜುಕೊಳದಲ್ಲಿ ಕಾಲುಗಳನ್ನು ಬಿಟ್ಟು ಅಲ್ಲಾಡಿಸುತ್ತಿರುವುದು. ಅಥವಾ ಬಕೆಟ್ಟೊಂದರಲ್ಲಿ ಕೊಂಚ ಉಗುರುಬೆಚ್ಚನೆಯ ನೀರಿಗೆ ಕೊಂಚ ಉಪ್ಪು ಸೇರಿಸಿ ಪಾದಗಳನ್ನು ಹತ್ತು ಹದಿನೈದು ನಿಮಿಷ ಮುಳುಗಿಸಿಡಿ
* ಎಲಾಸ್ಟಿಕ್ ಇರುವ ಸಾಕ್ಸ್ ಅಥವಾ ಇನ್ನಾವುದೇ ಉಡುಗೆಗಳನ್ನು ಹೆರಿಗೆಯವರೆಗೆ ಮರೆತುಬಿಡಿ.
* ಸಾಕಷ್ಟು ಹಣ್ಣುಗಳನ್ನು ಮತ್ತು ವಿಟಮಿನ್ ಇ ಹೆಚ್ಚಿರುವ ಬಾದಾಮಿ ಮತ್ತು ಗೋಡಂಬಿಗಳನ್ನು ತಿನ್ನಿ.
* ಕುಳಿತಿರುವಾಗ ಪಾದಗಳನ್ನು ಪ್ರದಕ್ಷಿಣವಾಗಿ ಎಂಟು ಬಾರಿ ಮತ್ತು ಅಪ್ರದಕ್ಷಿಣವಾಗಿ ಎಂಟು ಬಾರಿ ನಿಧಾನವಾಗಿ ತಿರುಗಿಸುತ್ತಾ ಇರಿ.
* ಹಸಿರು ಟೀ ಕುಡಿಯಿರಿ
* ಊತ ಕಡಿಮೆ ಮಾಡುವ ಯಾವುದಾದರೊಂದು ಎಣ್ಣೆಯಿಂದ ನಯವಾಗಿ ಮಸಾಜ್ ಮಾಡಿ. ಆದರೆ ಇದು ಕೆಳಗಿನಿಂದ ಮೇಲೆ ಮಾತ್ರ ಇರಬೇಕೇ ವಿನಃ ಮೇಲಿನಿಂದ ಕೆಳಕ್ಕಲ್ಲ, ಇದರಿಂದ ಊತ ಇನ್ನೂ ಹೆಚ್ಚಾಗುತ್ತದೆ

Comments are closed.