ಕರಾವಳಿ

ಹೃದಯ ಸಂಬಂಧಿ ಕಾಯಿಲೆ ಇರುವವರು ಫೋಲೆಟ್ ಅಂಶ ಜಾಸ್ತಿ ಇರುವ ಈ ಹಣ್ಣು ಸೇವಿಸಿದರೆ ಅತ್ಯುತ್ತಮ

Pinterest LinkedIn Tumblr

ಬೆಣ್ಣೆಹಣ್ಣು ಅಥವಾ ಬಟರ್ ಫ್ರುಟ್ ರುಚಿಕರವಾದ ಒಂದು ಹಣ್ಣು. ಆಂಗ್ಲ ಭಾಷೆಯಲ್ಲಿ ಅವೊಕಾಡೊ ಎಂದು ಕರೆಯುವ ಈ ಹಣ್ಣಿನ ವೈಜ್ಞಾನಿಕ ಹೆಸರು ಪರ್ಸಿಯ ಅಮೆರಿಕಾನ.ಇದು ಲೊರೆಸಿಯ ಕುಟುಂಬಕ್ಕೆ ಸೇರಿದ್ದು.ಕೊಡಗು ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕಂಡುಬರುವ ಬೆಣ್ಣೆಹಣ್ಣಿನ ಮರ ಎತ್ತರವಾಗಿ ಬೆಳೆಯುತ್ತದೆ.ಇದು ಕಾಯಿಯಾಗಿದ್ದಾಗ ಹಚ್ಚಹಸಿರು ಬಣ್ಣದಲ್ಲಿದ್ದು ಹಣ್ಣಾದಾಗ ಹಸಿರು ಮಿಶ್ರಿತ ಕಂದು ಬಣ್ಣದಿಂದ ಕೂಡಿರುತ್ತದೆ.

ಬೆಣ್ಣೆಹಣ್ಣು1ಬೆಣ್ಣೆಹಣ್ಣು2
ಬೆಣ್ಣೆ ಹಣ್ಣಿನಲ್ಲಿ ಪ್ರೊಟೀನ್, ಕಾರ್ಬೋಹೈಬ್ರೇಡ್ ಸಮೃದ್ಧವಾಗಿದೆ.ಫೈಬರ್,ಎನರ್ಜಿ ನಿಯಾಸಿನ್,ಕ್ಯಾಲ್ಸಿಯಮ್,ವಿಟಾಮಿನ್ ಸಿ,ಮೆಗ್ನೇಸಿಯಮ್,ಫೋಸ್ಪರಸ್,ಪೊಟಾಸಿಯಮ್ ಮುಂತಾದವುಗಳೂ ಇವೆ.ಆರೋಗ್ಯವರ್ಧಕ ಕೊಬ್ಬು ಇರುವುದರಿಂದ ಅಶಕ್ತರಿಗೆ ಆರೋಗ್ಯವರ್ಧಕವಾಗಿದೆ.

ಬೆಣ್ಣೆಹಣ್ಣಿನಲ್ಲಿ ಔಷಧೀಯ ಗುಣಗಳಿವೆ.ಇದು ಕೊಲೆಸ್ಟ್ರಾಲನ್ನು ಕಡಿಮೆ ಮಾಡುತ್ತದೆ ಮತ್ತು ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ.ಫೋಲೆಟ್ ಅಂಶ ಜಾಸ್ತಿ ಇರುವುದರಿಂದ ಹೃದಯ ಸಂಬಂಧಿ ಕಾಯಿಲೆ ಇದ್ದವರು ತಿಂದರೆ ಒಳ್ಳೆಯದು.

ಬೆಣ್ಣೆಹಣ್ಣು `ಕ್ಯಾಟರ್ಯಾಕ್ಟ್`ಹಾಗೂ ಇತರ ಕಣ್ಣಿನ ದೋಷಗಳನ್ನು ನಿವಾರಿಸಲು ಸಹಕರಿಸುತ್ತದೆ.ಜೊತೆಗೆ ಕಣ್ಣಿನ ರಕ್ಷಣೆ ಮಾಡುತ್ತದೆ.ಇವು ಮೂಳೆಗಳಿಗೆ ಶಕ್ತಿದಾಯಕವಾಗಿದೆ.ದೇಹವನ್ನು ಗಟ್ಟಿಗೊಳಿಸುತ್ತದೆ ಮತ್ತು ನೆನಪಿನ ಶಕ್ತಿಯನ್ನು ಹೆಚ್ಚಿಸುತ್ತದೆ.

ಬೆಣ್ಣೆ ಹಣ್ಣಿನ ಹೊರಮೈ ಮತ್ತು ದೊಡ್ಡದಾದ ಬೀಜದ ಮಧ್ಯೆ ಆಕರ್ಷಕವಾದ ತಿಳಿಹಸಿರು ಬಣ್ಣದ ನುಣುಪಾದ ತಿರುಳು ಇರುತ್ತದೆ.ಇದನ್ನು ಚಮಚದ ಸಹಾಯದಿಂದ ತೆಗೆಯಬಹುದು.ಇದನ್ನು ಗಾಳಿಗೆ ತೆರೆದಿಟ್ಟರೆ ಕಂದು ಬಣ್ಣಕ್ಕೆ ತಿರುಗುತ್ತದೆ.ಆದ್ದರಿಂದ ಇದನ್ನು ಕೂಡಲೇ ಬಳಸಬೇಕು ಇಲ್ಲದಿದ್ದರೆ ನಿಂಬೆರಸ ಬೆರೆಸಿಡಬೇಕು.

ಬೆಣ್ಣೆಹಣ್ಣನ್ನು ಹಾಗೆಯೇ ಸೇವಿಸಿದರೆ ಹೆಚ್ಚು ಪ್ರಯೋಜನಕಾರಿ.ಇದಕ್ಕೆ ಸಕ್ಕರೆ ಮಿಶ್ರ ಮಾಡಿ ತಿನ್ನುತ್ತಾರೆ ಅಥವಾ ಇದನ್ನೇ ಫ್ರಿಡ್ಜ್ ನಲ್ಲಿಟ್ಟು ತಣ್ಣಗಾದ ಮೇಲೆ ತಿಂದರೆ ಐಸ್ ಕ್ರೀಮ್ ನಂತೆ ರುಚಿಕರವಾಗಿರುತ್ತದೆ.ಬೆಣ್ಣೆಹಣ್ಣಿಗೆ ಸಕ್ಕರೆ ಹಾಲು ಹಾಕಿ ಮಿಕ್ಸಿಯಲ್ಲಿ ತಿರುವಿದರೆ ಬೆಣ್ಣೆಹಣ್ಣಿನ ಮಿಲ್ಕ್ ಶೇಕ್ ರೆಡಿ.ಇದಕ್ಕೆ ಚಾಕೊಲೇಟ್ ಸಿರಪ್ ಬೆರೆಸಿದರೆ ಮಕ್ಕಳಿಗೆ ಇಷ್ಟವಾಗುವ ಚಾಕೊಲೇಟ್ ಶೇಕ್ ಆಗುತ್ತದೆ.

ಬೆಣ್ಣೆಹಣ್ಣು
ಬೆಣ್ಣೆಹಣ್ಣಿಗೆ ಹಾಲು,ಅರಿಶಿಣ ಮಿಶ್ರಮಾಡಿ ಮುಖಕ್ಕೆ ಮಸಾಜ್ ಮಾಡಿ ನಂತರ ಬೆಣ್ಣೆಹಣ್ಣಿಗೆ ಜೇನು ಬೆರೆಸಿ ಫೇಸ್ ಪ್ಯಾಕ್ ಹಾಕಿದರೆ ತ್ವಚೆ ಬೆಣ್ಣೆಯಂತೆ ನುಣುಪಾಗಿ ಹೊಳಪಾಗುತ್ತದೆ.ಇದನ್ನು ದಾಸವಾಳ ಸೊಪ್ಪಿನೊಂದಿಗೆ ಅರೆದು ತಲೆಗೆ ಹಚ್ಚಿ ಅರ್ಧ ಗಂಟೆ ಬಿಟ್ಟು ತೊಳೆದರೆ ಕೂದಲು ಆರೋಗ್ಯವಾಗಿ ರೇಷ್ಮೆಯಂತೆ ನಯವಾಗಿ ಸೊಂಪಾಗಿ ಬೆಳೆಯುತ್ತದೆ.

ಆರೋಗ್ಯನ್ನು ಮತ್ತು ಸೌಂದರ್ಯವನ್ನು ಕಾಪಾಡುವ ಈ ಹಣ್ಣನ್ನು ಬಳಸೋಣ.

Comments are closed.