ಕರಾವಳಿ

ಬಿಜೆಪಿ ಸಕ್ರೀಯ ಕಾರ್ಯಕರ್ತ, ಹಾಲಾಡಿಯವರ ಆಪ್ತ ಕಾರು-ಬೈಕ್ ಅಪಘಾತದಲ್ಲಿ ಮೃತ್ಯು

Pinterest LinkedIn Tumblr

ಕುಂದಾಪುರ: ಕುಂದಾಪುರ ತಾಲೂಕಿನ ಸಿದ್ದಾಪುರ ಸಮೀಪದಲ್ಲಿ ನಡೆದ ಕಾರು ಹಾಗೂ ಬೈಕ್ ನಡುವಿನ ಮುಖಾಮುಖಿ ಡಿಕ್ಕಿಯಲ್ಲಿ ಬಿಜೆಪಿಯ ಸಕ್ರೀಯ ಕಾರ್ಯಕರ್ತ ಹಾಗೂ ಕುಂದಾಪುರದ ಮಾಜಿ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿಯವರಿಗೆ ಆಪ್ತರಾಗಿದ್ದ ಬೇಳೂರು ಮೂಲದ ಮಹೇಶ್ ಹೆಗ್ಡೆ(57) ದಾರುಣವಾಗಿ ಸಾವನ್ನಪ್ಪಿದ ಘಟನೆ ಬುಧವಾರ ನಡೆದಿದೆ.

ನಡೆದಿದ್ದೇನು?
ಬುಧವಾರ ಹಲವು ಶುಭ ಕಾರ್ಯಕ್ರಮಗಳಿದ್ದ ಕಾರಣ ಪತ್ನಿಯನ್ನು ತೆಕ್ಕಟ್ಟೆಯಲ್ಲಿ ನಡೆಯುತ್ತಿದ್ದ ಕಾರ್ಯಕ್ರಮವೊಂದಕ್ಕೆ ಬಿಟ್ಟು ತಾನು ಕಮಲಶಿಲೆಯಲ್ಲಿ ನಡೆದ ಮದುವೆ ಕಾರ್ಯಕ್ರಮಕ್ಕೆ ತೆರಳಿ ವಾಪಾಸ್ಸಾಗುತ್ತಿದ್ದ ವೇಳೆ ಸಿದ್ದಾಪುರ ಸಮೀಪದ ಅಫ್ಮಾರು ಬಾಳ್ಕಟ್ಟು ಎಂಬಲ್ಲಿ ಎದುರಿನಿಂದ ವೇಗವಾಗಿ ಬಂದ ರಿಟ್ಜ್ ಕಾರು ಬೈಕಿಗೆ ಡಿಕ್ಕಿಯಾಗಿದ್ದು ಗಂಭೀರ ಗಾಯಗೊಂಡ ಮಹೇಶ ಹೆಗ್ಡೆ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆನ್ನಲಾಗಿದೆ. ಕಾರು ಚಾಲಕ ಮತ್ತು ಕಾರಿನೊಳಗೆ ಇದ್ದ ಶಂಕರ ಶೆಟ್ಟಿ ಅವರಿಗೂ ಗಾಯಗಳಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ. ಶಂಕರನಾರಾಯಣ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಹೋರಾಟ ಜೀವಿಯಾಗಿದ್ದರು…..
ಸುಮಾರು 25 ವರ್ಷಗಳಿಂದ ಬಿಜೆಪಿ ಸಕ್ರೀಯ ಕಾರ್ಯಕರ್ತರಾಗಿ ಈ ಹಿಂದೆ ಬೇಳೂರು ಗ್ರಾಮ ಪಂಚಾಯತ್ ಸದಸ್ಯರಾಗಿದ್ದ ಮಹೇಶ್ ಹೆಗ್ಡೆ ಹಾಲಿ ಕುಂದಾಪುರ ತಾಲೂಕು ಪಂಚಾಯತಿ ಸದಸ್ಯೆ ಶ್ರೀಲತಾ ಅವರ ಪತಿ. ಕ್ರಷಿಕರಾಗಿ ಬದುಕುತ್ತಿದ್ದ ಹೆಗ್ಡೆಯವರು ಹೋರಾಟಜೀವಿ. ಊರಿನ ಹತ್ತು ಹಲವು ಸಮಸ್ಯೆಗಳಿಗೆ ಧ್ವನಿಯಾಗಿ ನ್ಯಾಯಕ್ಕಾಗಿ ಹೋರಾಡಿದವರು. ಮಹೇಶ್ ಹೆಗ್ಡೆ ಪತ್ನಿ ಹಾಗೂ ಇಬ್ಬರು ಪುತ್ರಿಯರು ಸೇರಿದಂತೆ ಬಂಧು ಬಳಗವನ್ನು ಅಗಲಿದ್ದಾರೆ.

ಬಿಜೆಪಿ ಮತಯಾಚನೆ ರದ್ದು…
ಬಿಜೆಪಿಯ ಸಕ್ರೀಯ ಕಾರ್ಯಕರ್ತ ಮಹೇಶ್ ಹೆಗ್ಡೆ ಸಾವಿನ ಸುದ್ದಿ ತಿಳಿಯುತ್ತಲೇ ಕುಂದಾಪುರದಲ್ಲಿ ಶೋಕ ಆವರಿಸಿತ್ತು, ಬಿಜೆಪಿಯು ಸಂಜೆ ಕುಂದಾಪುರ ನಗರದಲ್ಲಿ ಆಯೋಜಿಸಲು ಉದ್ದೇಶಿಸಿದ್ದ ಹಾಲಾಡಿಯವರ ಪರ ಮತಯಾಚನೆ ಕಾರ್ಯಕ್ರಮ ರದ್ಧು ಮಾಡಲಾಗಿತ್ತು. ಗಣ್ಯರು ಸೇರಿದಂತೆ ಸಾವಿರಾರು ಮಂದಿ ಕುಂದಾಪುರದ ಸರಕಾರಿ ಆಸ್ಪತ್ರೆಯಲ್ಲಿರುವ ಶವಾಗಾರಕ್ಕೆ ಭೇಟಿ ನೀಡಿದ್ದಾರೆ.

Comments are closed.