ಕರಾವಳಿ

ವೆನ್‌ಲಾಕ್ ಆಸ್ಪತ್ರೆ : ಶಾಸಕ ಲೋಬೊರವರಿಂದ ‘ಆರೋಗ್ಯ ಕರ್ನಾಟಕ’ ಹೆಲ್ತ್‌ ಕಾರ್ಡ್‌ಗೆ ಚಾಲನೆ

Pinterest LinkedIn Tumblr

__ ಸತೀಶ್ ಕಾಪಿಕಾಡ್

ಮಂಗಳೂರು : ಸಾರ್ವತ್ರಿಕ ಆರೋಗ್ಯ ಸೇವೆಗಾಗಿ ರಾಜ್ಯ ಸರ್ಕಾರ ರೂಪಿಸಿರುವ ಮಹತ್ವಾಕಾಂಕ್ಷಿ “ಆರೋಗ್ಯ ಕರ್ನಾಟಕ’ ಯೋಜನೆಗೆ ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಾಲನೆ ನೀಡಿದ್ದು, ಮೊದಲ ಹಂತದಲ್ಲಿ ರಾಜ್ಯದ 10 ಪ್ರಮುಖ ಆಸ್ಪತ್ರೆಗಳಲ್ಲಿ ಈ ಯೋಜನೆ ಜಾರಿಗೊಂಡಿದೆ.

ಇದೀಗ ಮಂಗಳೂರಿನ ಸರಕಾರಿ ವೆನ್ ಲಾಕ್ ಆಸ್ಪತ್ರೆಯಲ್ಲೂ ಎಲ್ಲರಿಗೂ ಆರೋಗ್ಯ ಸೇವೆ ಒದಗಿಸುವ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಹೊರ ತಂದಿರುವ ‘ಆರೋಗ್ಯ ಕರ್ನಾಟಕ’ ಯೋಜನೆಗೆ ಫಲನುಭವಿಗಳಿಗೆ ಹೆಲ್ತ್‌ ಕಾರ್ಡ್‌ ವಿತರಿಸುವ ಮೂಲಕ ಮಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರದ ಶಾಸಕ ಜೆ.ಆರ್.ಲೋಬೋ ಅವರು ಚಾಲನೆ ನೀಡಿದ್ದಾರೆ.

ಜಿಲ್ಲಾ ನೋಡಲ್ ಅಧಿಕಾರಿ ಡಾ. ಶರೀಫ್, ವೆನ್ ಲಾಕ್ ಆಸ್ಪತ್ರೆಯ ಜಿಲ್ಲಾ ಸರ್ಜನ್‌ ಮತ್ತು ಅಧೀಕ್ಷಕಿ (DMO) ಡಾ| ರಾಜೇಶ್ವರಿ ದೇವಿ ಎಚ್.ಆರ್, ಆಸ್ಪತ್ರೆಯ ಹಿರಿಯ ವೈದ್ಯರಾದ ಡಾ.ರಾಜೇಶ್, ಡಾ.ಶರತ್, ಡಾ.ರಶ್ಮಿ, ಸುವರ್ಣ ಆರೋಗ್ಯ ಸುರಾಕ್ಷ ಟ್ರಸ್ಟ್ ನ ಜಗನ್ನಾಥ್, ಪದ್ಮನಾಭ ಅಮೀನ್, ಕೆ.ಎಸ್.ಆರ್.ಟಿ.ಸಿ ನಿರ್ದೇಶಕ ಟಿ.ಕೆ ಸುಧೀರ್, ಕಾಂಗ್ರೆಸ್ ಯೂತ್ ಮುಖಂಡ ರಮಾನಂದ ಬೋಳಾರ್ ಮುಂತಾದವರು ಈ ಸಂದರ್ಭ ಉಪಸ್ಥಿತರಿದ್ದರು.

ರಾಜ್ಯದ 1.43 ಕೋಟಿ ಕುಟುಂಬಗಳಿಗೆ ಆರೋಗ್ಯ ಸೇವೆ ನೀಡುವ ಉದ್ದೇಶದಿಂದ ಈ ಯೋಜನೆ ಆರಂಭಿಸಲಾಗಿದ್ದು, ಮೊದಲ ಹಂತದಲ್ಲಿ ರಾಜ್ಯದ 10 ಪ್ರಮುಖ ಆಸ್ಪತ್ರೆಗಳಾದ ಬೆಂಗಳೂರಿನ ಕೆ.ಸಿ.ಜನರಲ್‌ ಆಸ್ಪತ್ರೆ, ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ, ಪಿಎಂಎಸ್‌ಎಸ್‌ವೈ ಆಸ್ಪತ್ರೆ, ವಿಕ್ಟೋರಿಯಾ ಕ್ಯಾಂಪಸ್‌, ಮಂಡ್ಯ ವೈದ್ಯಕೀಯ ವಿಜ್ಞಾನ ಸಂಸ್ಥೆ, ಹುಬ್ಬಳ್ಳಿಯ ಕರ್ನಾಟಕ ವೈದ್ಯಕೀಯ ವಿಜ್ಞಾನ ಸಂಸ್ಥೆ, ಕಲಬುರಗಿಯ ಗುಲ್ಬರ್ಗಾ ವೈದ್ಯಕೀಯ ವಿಜ್ಞಾನ ಸಂಸ್ಥೆ, ಬಳ್ಳಾರಿಯ ವಿಜಯನಗರ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಯೋಜನೆಯನ್ನು ಆರಂಭಿಸಲಾಗಿದೆ. ಇದೀಗ ಮಂಗಳೂರಿನ ವೆನ್ ಲಾಕ್ ಆಸ್ಪತ್ರೆಯು ಈ ಆಸ್ಪತ್ರೆಗಳ ಸಾಲಿಗೆ ಸೇರಿದೆ.

ಈ ಯೋಜನೆಯಡಿ ಅರ್ಹತಾ ವರ್ಗದ ರೋಗಿಗಳಿಗೆ (ಬಿಪಿಎಲ್‌) ಸರ್ಕಾರಿ ಮತ್ತು ರೆಫರಲ್‌ ಮೂಲಕ ನೋಂದಾಯಿತ ಖಾಸಗಿ ಆಸ್ಪತ್ರೆಗಳಲ್ಲಿ ನಗದುರಹಿತ ಚಿಕಿತ್ಸೆ ಸಿಗಲಿದೆ. ಸಾಮಾನ್ಯ ವರ್ಗದ ರೋಗಿಗಳಿಗೆ (ಎಪಿಎಲ್‌) ಸಹ ಪಾವತಿ ಆಧಾರದಲ್ಲಿ ಚಿಕಿತ್ಸೆ ಲಭ್ಯವಾಗಲಿದೆ.

ಅರ್ಹತಾ ವರ್ಗದ ರೋಗಿಗಳಿಗೆ ನಿಗದಿತ ದ್ವಿತೀಯ ಹಂತದ ಚಿಕಿತ್ಸೆಗಳಿಗೆ ಐವರು ಸದಸ್ಯರ ಕುಟುಂಬಕ್ಕೆ ವಾರ್ಷಿಕ ರೂ. 30,000ವರೆಗಿನ ಚಿಕಿತ್ಸಾ ಸೌಲಭ್ಯವಿದೆ. ನಿಗದಿತ ತೃತೀಯ ಹಂತದ ಚಿಕಿತ್ಸೆಗೆ ಪ್ಯಾಕೇಜ್‌ ಆಧಾರದಲ್ಲಿ ಐವರು ಸದಸ್ಯರ ಕುಟುಂಬಕ್ಕೆ ವಾರ್ಷಿಕ ರೂ. 1.50 ಲಕ್ಷದವರೆಗೆ ಮತ್ತು ಈ ಹಣ ಮುಗಿದ ನಂತರ ತುರ್ತು ಸಂದರ್ಭದ ಚಿಕಿತ್ಸೆಗೆ ಹೆಚ್ಚುವರಿಯಾಗಿ ರೂ. 50,000ವರೆಗಿನ ಚಿಕಿತ್ಸೆ ಸಿಗಲಿದೆ.

ಆದರೆ, ಸಾಮಾನ್ಯ ರೋಗಿಗಳಿಗೆ ದ್ವಿತೀಯ ಮತ್ತು ತೃತೀಯ ಹಂತದಲ್ಲಿ ನೋಂದಾಯಿತ ಖಾಸಗಿ ಆಸ್ಪತ್ರೆಗಳಲ್ಲಿ ಪ್ಯಾಕೇಜ್‌ ದರಗಳ ವೆಚ್ಚ ಅಥವಾ ಚಿಕಿತ್ಸಾ ವೆಚ್ಚದ ಪೈಕಿ ಯಾವುದು ಕಡಿಮೆಯೋ ಅದರ ಶೇ 30ರಷ್ಟು ಹಣವನ್ನು ಸರ್ಕಾರ ಮರು ಪಾವತಿಸಲಿದೆ. ಶೇ 70ರಷ್ಟು ವೆಚ್ಚವನ್ನು ರೋಗಿಯೇ ಭರಿಸಬೇಕಾಗುತ್ತದೆ. ಸದ್ಯ ಜಾರಿಯಲ್ಲಿರುವ ಯಶಸ್ವಿನಿ ಯೋಜನೆಯಲ್ಲಿ ಕುಟುಂಬದ ಒಬ್ಬ ವ್ಯಕ್ತಿಗೆ ರೂ. 2 ಲಕ್ಷ ಚಿಕಿತ್ಸಾ ವೆಚ್ಚ ಸೌಲಭ್ಯವಿದೆ. ಈ ಯೋಜನೆ ಇದೇ ಮೇ 31ಕ್ಕೆ ಅಂತ್ಯವಾಗಲಿದೆ.

ಚಿಕಿತ್ಸಾ ಸೌಲಭ್ಯ :

ಮೊದಲು ಸಮೀಪದ ಸರ್ಕಾರಿ ಆಸ್ಪತ್ರೆಗೆ ಹೋಗಬೇಕು. ಅಲ್ಲಿ ಚಿಕಿತ್ಸಾ ಸೌಲಭ್ಯ ಇಲ್ಲದಿದ್ದರೆ ಸಮೀಪದ ತಾಲ್ಲೂಕು ಅಥವಾ ಜಿಲ್ಲಾ ಆಸ್ಪತ್ರೆಗೆ ಕಳುಹಿಸಲಾಗುತ್ತದೆ. ಅಲ್ಲೂ ಚಿಕಿತ್ಸೆ ಲಭ್ಯ ಇಲ್ಲದಿದ್ದರೆ ದ್ವಿತೀಯ ಹಂತದ ಮತ್ತು ತೃತೀಯ ಹಂತದ ಚಿಕಿತ್ಸೆಗಳಿಗೆ ನೋಂದಾಯಿತ ಖಾಸಗಿ ಆಸ್ಪತ್ರೆ ಪೈಕಿ ರೋಗಿ ಬಯಸಿದ ಆಸ್ಪತ್ರೆಗೆ ಹೋಗಲು ಅವಕಾಶವಿದೆ. ತುರ್ತು ಸಂದರ್ಭದಲ್ಲಿ ಮಾತ್ರ ಸರ್ಕಾರದ ಆದೇಶದ ಪಟ್ಟಿಯಲ್ಲಿರುವ ನೋಂದಾಯಿತ ಖಾಸಗಿ ಆಸ್ಪತ್ರೆಗೆ ನೇರವಾಗಿ ತೆರಳಿ ಚಿಕಿತ್ಸೆ ಪಡೆಯಬಹುದು.

ಆರೋಗ್ಯ ಕರ್ನಾಟಕದಲ್ಲಿ ವಿಲೀನವಾಗುವ ಯೋಜನೆ :

ಯಶಸ್ವಿನಿ, ವಾಜಪೇಯಿ ಆರೋಗ್ಯಶ್ರೀ, ರಾಜೀವ್‌ ಆರೋಗ್ಯ ಭಾಗ್ಯ, ಹಿರಿಯ ನಾಗರಿಕರಿಗೆ ಆರ್‌ಎಸ್‌ಬಿವೈ ಯೊಜನೆ ಒಳಗೊಂಡಂತೆ ರಾಷ್ಟ್ರೀಯ ಸ್ವಾಸ್ಥ್ಯ ಬಿಮಾ ಯೋಜನೆ, ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಯೋಜನೆ, ಮುಖ್ಯಮಂತ್ರಿ ಸಾಂತ್ವನ ಹರೀಶ್‌ ಯೋಜನೆ, ಇಂದಿರಾ ಸುರಕ್ಷತಾ ಯೋಜನೆ. ಸಂಬಂಧಿತ ವೈದ್ಯಕೀಯ ಹಾಜರಾತಿ ನಿಯಮಗಳಿಗೆ ತಿದ್ದುಪಡಿ ತರುವಾಯ ಕರ್ನಾಟಕ ಶಾಸಕಾಂಗ ಸದಸ್ಯರು, ಸರ್ಕಾರಿ ನೌಕರರು ಹಾಗೂ ಪೊಲೀಸ್‌ ಸಿಬ್ಬಂದಿಗಿರುವ ಇತರೆ ಯೋಜನೆ ಹೊಸ ಯೋಜನೆಯಡಿ ಸೇರ್ಪಡೆ. ಯಶಸ್ವಿನಿ ಯೋಜನೆಯಡಿ ಕುಟುಂಬದ ಒಬ್ಬರಿಗೆ 2 ಲಕ್ಷ ರೂ.ವರೆಗೆ ಚಿಕಿತ್ಸಾ ವೆಚ್ಚ ಸೌಲಭ್ಯವಿದ್ದು, ಇದು ಮೇ 31ಕ್ಕೆ ಮುಕ್ತಾಯವಾಗಲಿದ್ದು, ಅಲ್ಲಿಯವರೆಗೆ ಮಾತ್ರ ಮುಂದುವರಿಯಲಿದೆ.

ಯೋಜನೆಗೆ ಒಳಪಡದವರು :

ಕಾರ್ಮಿಕರ ರಾಜ್ಯ ವಿಮಾ ಯೋಜನೆಯಡಿ ರಕ್ಷಣೆಯಿರುವವರು. ಉದ್ಯೋಗದಾತರಿಂದ ಆರೋಗ್ಯ ಭರವಸೆ ಅಥವಾ ಆರೋಗ್ಯ ವಿಮೆ ಯೋಜನೆಗಳ ರಕ್ಷಣೆ ಪಡೆದವರು. ಖಾಸಗಿ ಆರೋಗ್ಯ ವಿಮಾ ಪಾಲಿಸಿಗಳನ್ನು ಸ್ವಯಂ ಮಾಡಿಸಿಕೊಂಡವರು. ಕೇಂದ್ರ ಸರ್ಕಾರಿ ಆರೋಗ್ಯ ಯೋಜನೆಯಡಿ ರಕ್ಷಣೆ ಪಡೆದವರು. ರಾಜ್ಯ ಸರ್ಕಾರಿ ನೌಕರರ (ವೈದ್ಯಕೀಯ ಹಾಜರಿ) ನಿಯಮಗಳಿಗೆ ತಿದ್ದುಪಡಿ ತರುವವರೆಗೆ ರಾಜ್ಯ ಸರ್ಕಾರಿ ಸಿಬ್ಬಂದಿಗೆ ಅನ್ವಯಿಸದು. ಕರ್ನಾಟಕ ವಿಧಾನಸಭಾ (ಸದಸ್ಯರ ವೈದ್ಯಕೀಯ ಹಾಜರಿ) ನಿಯಮಗಳಿಗೆ ತಿದ್ದುಪಡಿ ತರುವವರೆಗೆ ರಾಜ್ಯ ವಿಧಾನಸಭೆ ಸದಸ್ಯರಿಗೆ ಅನ್ವಯಿಸದು.

ಸಾರ್ವತ್ರಿಕ ಆರೋಗ್ಯ ಕಾರ್ಡ್‌ ಪಡೆಯುವುದು ಹೇಗೆ : ಅನಾರೋಗ್ಯಕ್ಕೆ ಒಳಗಾದಾಗ ಅಥವಾ ಅಗತ್ಯ ಬಿದ್ದಾಗ ಆಧಾರ್‌ ಕಾರ್ಡ್‌ ಮತ್ತು ಪಡಿತರ ಚೀಟಿ ಸಮೇತ ಸರ್ಕಾರಿ ಆಸ್ಪತ್ರೆಗೆ ತೆರಳಿ ರೂ. 10 ಪಾವತಿಸಿ ಕಾರ್ಡ್‌ ಮಾಡಿಸಿಕೊಳ್ಳಬಹುದು. ಸರ್ಕಾರದ ಪಟ್ಟಿಯಲ್ಲಿರುವ ಎಮರ್ಜೆನ್ಸಿ ಕೋಡ್‌ಗಳಿಗೆ ತುರ್ತುಸ್ಥಿತಿಯ ಸಂದರ್ಭದಲ್ಲಿ ನೇರವಾಗಿ ನೋಂದಾಯಿತ ಖಾಸಗಿ ಆಸ್ಪತ್ರೆಗೆ ತೆರಳಿದರೆ ಅಲ್ಲಿಯೇ ನೋಂದಣಿ ಮಾಡಲಾಗುತ್ತದೆ.

ಆಯ್ದ ಸರ್ಕಾರಿ ಆಸ್ಪತ್ರೆಗಳಲ್ಲಿ ನೋಂದಣಿ. ಆಧಾರ್‌ ಕಡ್ಡಾಯ. ಪಡಿತರ ಚೀಟಿ ಆಧಾರದಡಿ ನೋಂದಣಿ. ಇ- ಕೆವೈಸಿ ಮೂಲಕ ನೋಂದಣಿ ಪ್ರಕ್ರಿಯೆ. ಕೆಲ ನಿಮಿಷಗಳಲ್ಲೇ ಎಆರ್‌ಕೆಐಡಿ ಸಂಖ್ಯೆಯೊಂದಿಗೆ ಹೆಲ್ತ್‌ ಕಾರ್ಡ್‌ ಸಿಗಲಿದೆ. ಯೋಜನೆಯ ಸೌಲಭ್ಯ ಪಡೆಯಬೇಕಾದರೆ ಇತರೆ ವಿಮಾ ಯೋಜನೆ ಹೊಂದಿಲ್ಲವೆಂದು ಸ್ವಯಂ ದೃಢೀಕರಣ ನೀಡಬೇಕು. ಬಿಪಿಎಲ್‌ ಕಾರ್ಡ್‌ದಾರರು ಅರ್ಹತಾ ರೋಗಿ ಎಂದು ಪರಿಗಣನೆ. ಪಡಿತರ ಕಾರ್ಡ್‌ ಇಲ್ಲದವರು ಸಾಮಾನ್ಯ ರೋಗಿ ಎಂದು ಪರಿಗಣನೆ. ಕಾರ್ಡ್‌ ಕಳೆದು ಹೋದರೆ ಮರುಮುದ್ರಣಕ್ಕೆ ಅವಕಾಶ. 20 ರೂ. ಶುಲ್ಕ. ಪ್ರತಿ ಬಾರಿ ಆಸ್ಪತ್ರೆಗೆ ಹೋದಾಗ ಕಾರ್ಡ್‌ ಕೊಂಡೊಯ್ಯಬೇಕು.

ಆಧಾರ್‌ ಕಾರ್ಡ್‌ ಇಲ್ಲದಿದ್ದರೆ ಪಡಿತರ ಚೀಟಿ ಆಧಾರದಲ್ಲಿ ನೋಂದಾಯಿಸಿ, ಸರ್ಕಾರಿ ಆಸ್ಪತ್ರೆಯಲ್ಲಿ ಮಾತ್ರ ಚಿಕಿತ್ಸೆ ಪಡೆಯಬಹುದು. ಆಧಾರ್‌ ಕಾರ್ಡ್ ಹಾಜರುಪಡಿಸಿದ ಬಳಿಕ ಖಾಸಗಿ ಆಸ್ಪತ್ರೆಗೆ ಕಳುಹಿಸಲಾಗುತ್ತದೆ. ಪಡಿತರ ಚೀಟಿ ಇಲ್ಲದ ಕುಟುಂಬದ ಒಬ್ಬ ಸದಸ್ಯ ಕಾರ್ಡ್ ಪಡೆದ ನಂತರ ಇತರ ಸದಸ್ಯರ ನೋಂದಣಿ ವೇಳೆ ಆ ಕಾರ್ಡ್‌ ಸಂಖ್ಯೆ ತರಬೇಕು.

__ ಸತೀಶ್ ಕಾಪಿಕಾಡ್ / Mob: 9035089084

Comments are closed.