ಕರಾವಳಿ

ಕಸಬಾ ಬೆಂಗ್ರೆ ಗುಂಪು ಘರ್ಷಣೆ ಹಿಂದೆ ಕಾಂಗ್ರೆಸ್‌ ಮುಖಂಡರ ವ್ಯವಸ್ಥಿತ ಷಡ್ಯಂತ್ರ : ಸಂಸದ ನಳಿನ್ ಆರೋಪ

Pinterest LinkedIn Tumblr

ಮಂಗಳೂರು, ಫೆಬ್ರವರಿ.22:ನಗರದ ತಣ್ಣೀರುಬಾವಿ ಸಮೀಪದ ಕಸಬಾ ಬೆಂಗ್ರೆಯಲ್ಲಿ ನಡೆದ ಗುಂಪು ಘರ್ಷಣೆ ಪ್ರಕರಣ ರಾಜಕೀಯ ಪ್ರೇರಿತವಾಗಿದ್ದು, ಈ ಅಹಿತಕರ ಘಟನೆಗೆ ಕಾಂಗ್ರೆಸ್‌ನ ಕುಮ್ಮಕ್ಕು ಕಾರಣ. ಈ ಕೃತ್ಯವನ್ನು ಕಾಂಗ್ರೆಸ್‌ನವರು ವ್ಯವಸ್ಥಿತವಾಗಿ ನಡೆಸಿದ್ದಾರೆ ಎಂದು ಸಂಸದ ನಳೀನ್ ಕುಮಾರ್‌ ಕಟೀಲ್‌ ಆರೋಪಿಸಿದ್ದಾರೆ.

ಮಂಗಳೂರಿನ ಪಕ್ಷದ ಕಛೇರಿಯಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಲ್ಪೆ ಬೀಚ್‌ನಲ್ಲಿ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಭಾಗವಹಿಸಿದ್ದ ಕಾರ್ಯಕ್ರಮ ಮುಗಿಸಿ ವಾಪಾಸ್ ಆಗುತ್ತಿದ್ದ ಕಾರ್ಯಕರ್ತರ ಮೇಲೆ ಕಾಂಗ್ರೆಸ್‌ನವರು ವ್ಯವಸ್ಥಿತವಾಗಿ ದಾಳಿ ನಡೆಸಿದ್ದಾರೆ. ಒಂದು ತಿಂಗಳಿನಿಂದ ಇಂತಹ ಕೃತ್ಯವೆಸಗಲು ಪ್ರಯತ್ನ ನಡೆಯುತ್ತಿದ್ದು, ಇದರ ಹಿಂದೆ ಕಾಂಗ್ರೆಸ್ ನ ವ್ಯವಸ್ಥಿತ ಷಡ್ಯಂತ್ರವಿದೆ ಎಂದು ಕಾಂಗ್ರೆಸ್ ಮುಖಂಡರ ವಿರುದ್ಧ ವಾಗ್ದಾಳಿ ನಡೆಸಿದರು.

ಕರಾವಳಿಯಲ್ಲಿ ಕೋಮುಗಲಭೆ ಸೃಷ್ಟಿಸಲು ಕಾಂಗ್ರೆಸ್ ಕಳೆದ ಕೆಲ ತಿಂಗಳಿದ ಸಂಚು ರೂಪಿಸಿದ್ದು, ಅಮಿತ್ ಶಾ ಬರುವಾಗ ಕೋಮು ಸಂಘರ್ಷ ಉಂಟು ಮಾಡಬೇಕು ಅನ್ನೋದು ಕಾಂಗ್ರೆಸ್ ಕುತಂತ್ರವಾಗಿದೆ. ಈ ಘಟನೆಯ ಹಿಂದೆ ಕಾಂಗ್ರೆಸ್‌ನ ಶಾಸಕರು, ಸಚಿವರ ಕೈವಾಡವಿದೆ ಎಂದು ನಳಿನ್ ಕುಮಾರ್ ಕಟೀಲ್ ಆರೋಪಿಸಿದರು.

ಜನಪ್ರತಿನಿಧಿಯಾದ ಶಾಸಕರು ಎರಡೂ ಸಮುದಾಯಗಳ ಜನರೊಂದಿಗೆ ಮಾತನಾಡಬೇಕಿತ್ತು. ಆದರೆ ಅವರು ಏಕಪಕ್ಷೀಯವಾಗಿ ವರ್ತಿಸಿದ್ದಾರೆ. ಘೋಷಣೆ ಕೂಗಿದಕ್ಕೆ ಹಲ್ಲೆ ಮಾಡಿದ್ದಾರೆ ಅಂತಾ ಶಾಸಕರು ಹೇಳಿದ್ದಾರೆ. ಘೋಷಣೆ ಕೂಗದಿರಲು ನಾವೇನು ಪಾಕಿಸ್ತಾನದಲ್ಲಿದ್ದೇವಾ? ಎಂದು ನಳಿನ್ ಕುಮಾರ್ ಪ್ರಶ್ನಿಸಿದರು.

ಕಸಬಾ ಬೆಂಗ್ರೆಯಲ್ಲಿರುವ ಅಕ್ರಮ ವಾಸಿಗಳು ಹಾಗು ಗಾಂಜಾ ದಂಧೆಯನ್ನು ಮಟ್ಟ ಹಾಕಬೇಕು ಎಂಬ ಆಗ್ರಹವನ್ನು ಇದೇ ವೇಳೆ ಸಂಸದರು ವ್ಯಕ್ತಪಡಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಸಂಜೀವ ಮಠಂದೂರು, ವಿಧಾನ ಪರಿಷತ್‌ನ ಮಾಜಿ ಸದಸ್ಯ ಮೋನಪ್ಪ ಭಂಡಾರಿ, ಪಕ್ಷದ ಪ್ರಮುಖರಾದ ಕ್ಯಾ.ಬೃಜೇಶ್ ಚೌಟ, ನಿತಿನ್ ಕುಮಾರ್, ಸಂಜಯ್ ಪ್ರಭು, ಭಾಸ್ಕರ್ ಚಂದ್ರ ಶೆಟ್ಟಿ ಹಾಗೂ ಮತ್ತಿತ್ತರರು ಉಪಸ್ಥಿತರಿದ್ದರು.

Comments are closed.