ಕರಾವಳಿ

ಲೇಖಾನುದಾನಕ್ಕೆ ಮಂಡಿಸಿದ ನೀರಸ ಬಜೆಟ್ : ಕ್ಯಾಪ್ಟನ್ ಗಣೇಶ್ ಕಾರ್ಣಿಕ್

Pinterest LinkedIn Tumblr

ಮಂಗಳೂರು : ವೇತನ ಆಯೋಗದ ಅವಧಿಯನ್ನು ಎಪ್ರಿಲ್ 30 ರವರೆಗೆ ವಿಸ್ತರಿಸಿ ವಿಳಂಬ ನೀತಿಯನ್ನು ಅನುಸರಿಸಿರುವುದರ ಹಿಂದೆ ವೇತನ ಆಯೋಗದ ವರದಿಯ ಅನುಷ್ಠಾನವನ್ನು ಮುಂದೆ ಬರುವ ಹೊಸ ಸರ್ಕಾರಕ್ಕೆ ಹಸ್ತಾಂತರಿಸುವ ಮೂಲಕ ತಾವು ಕೈಚೆಲ್ಲಿ ಸರ್ಕಾರಿ ನೌಕರರ ಆಶೆ ಆಕಾಂಕ್ಷೆಗಳಿಗೆ ಸಿದ್ದರಾಮಯ್ಯ ತಣ್ಣೀರೆರಚಿದ್ದಾರೆ. ಎನ್‌ಪಿ‌ಎಸ್ ಬಗ್ಗೆ ಚಕಾರವೆತ್ತದೆ ಎನ್‌ಪಿ‌ಎಸ್ ನೌಕರರಿಗೂ ನಿರಾಶೆ ಮೂಡಿಸಿದ್ದಾರೆ ಎಂದು ವಿಧಾನ ಪರಿಷತ್‌ನ ವಿರೋಧ ಪಕ್ಷದ ಮುಖ್ಯ ಸಚೇತಕ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ತಿಳಿಸಿದ್ದಾರೆ.

ಶಿಕ್ಷಣ ಮತ್ತು ಶಿಕ್ಷಣ ಕ್ಷೇತ್ರವನ್ನು ಸಂಪೂರ್ಣ ನಿರ್ಲಕ್ಷಿಸಿಸುವುದರೊಂದಿಗೆ ಶಿಕ್ಷಕರ ಕಾಲ್ಪನಿಕ ವೇತನ ಸಮಸ್ಯೆ, 1995ರ ನಂತರ ಆರಂಭವಾದ ಅನುದಾನ ರಹಿತ ಶಾಲಾ ಕಾಲೇಜುಗಳಿಗೆ ಅನುದಾನ ವಿಸ್ತರಣೆ, 1987-95ರ ನಡುವೆ ಪ್ರಾರಂಭವಾದ ಪದವಿ ಕಾಲೇಜುಗಳನ್ನು ಅನುದಾನಕ್ಕೊಳಪಡಿಸುವ ಬಗ್ಗೆ ಯಾವುದೇ ಕ್ರಮವನ್ನು ಕೈಗೊಂಡಿಲ್ಲ. ವೇತನ ತಾರತಮ್ಯದ ನಿವಾರಣೆಯ ಕುರಿತು ಬಹು ನಿರೀಕ್ಷೆ ಇಟ್ಟುಕೊಂಡಿದ್ದ ಶಿಕ್ಷಕ ಹಾಗೂ ಉಪನ್ಯಾಸಕ ಸಮುದಾಯವನ್ನು ನಿರ್ಲಕ್ಷಿಸುವ ಮೂಲಕ ಉಪನ್ಯಾಸಕ ಹಾಗೂ ಶಿಕ್ಷಕ ಸಮುದಾಯಕ್ಕೆ ಈ ಬಜೆಟ್ ನಿರಾಶೆ ಮೂಡಿಸಿದೆ.

ರೂ. 2,42,000 ಕೋಟಿ ರೂಪಾಯಿಗಳ ಸಾಲದ ಹೊರೆಯ ಮೇಲೆ ಮತ್ತೆ 40,000 ಕೋಟಿ ರೂಪಾಯಿ ಹೊಸ ಸಾಲದ ಮೂಲಕ ರಾಜ್ಯದ ಪ್ರಜೆಗಳಿಗೆ ಸಾಲದ ಭಾಗ್ಯ ನೀಡಿರುವ ಸಿದ್ದರಾಮಯ್ಯನವರ ಈ ಬಜೆಟ್ ಯಾವುದೇ ದೂರದೃಷ್ಟಿ ಹೊಂದಿರದೆ ಕೇವಲ ನೀತಿ ಸಂಹಿತೆ ಜಾರಿಯಾಗುವವರೆಗೆ ತನ್ನ ಅವಧಿ ಎಂದು ಒಪ್ಪಿಕೊಂಡು ಮಂಡಿಸಿದ ಲೇಖಾನುದಾನವಾಗಿದೆ ಎಂದು ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಅವರು ತಮ್ಮ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Comments are closed.